ಮಳೆ ನೀರು ಚರಂಡಿಗೆ ಲೋಹದ ಜಾಲರಿ ಅಳವಡಿಕೆ

ಬುಧವಾರ, ಮಾರ್ಚ್ 20, 2019
26 °C
ಬಿಆರ್‌ಟಿಎಸ್ ಮಾರ್ಗದಲ್ಲಿ ರಸ್ತೆಯ ಎರಡೂ ಬದಿ ನೀರು ಸರಾಗ ಹರಿವಿಗೆ ಬಿಆರ್‌ಟಿಎಸ್ ಕ್ರಮ

ಮಳೆ ನೀರು ಚರಂಡಿಗೆ ಲೋಹದ ಜಾಲರಿ ಅಳವಡಿಕೆ

Published:
Updated:
Prajavani

ಹುಬ್ಬಳ್ಳಿ: ಬಿಆರ್‌ಟಿಎಸ್ ಮಾರ್ಗದಲ್ಲಿ ರಸ್ತೆಯ ಎರಡೂ ಬದಿ ಮಳೆ ನೀರಿನ ಸರಾಗ ಹರಿವಿಗೆ ಅವಕಾಶ ಕಲ್ಪಿಸಲು ಸಂಸ್ಥೆ ಕೊನೆಗೂ ಕ್ರಮ ಕೈಗೊಂಡಿದೆ. ಸಂಪೂರ್ಣವಾಗಿ ಮುಚ್ಚಿದ್ದ ಮಳೆ ನೀರು ಚರಂಡಿಯ ಮೇಲೆ ಅಲ್ಲಲ್ಲಿ ಜಾಲರಿಗಳನ್ನು ಅಳವಡಿಸುವ ಕಾರ್ಯಕ್ಕೆ ಬಿಆರ್‌ಟಿಎಸ್ ಚಾಲನೆ ನೀಡಿದೆ.

ಮಳೆ ನೀರು ಹರಿವಿಗಾಗಿ ನಿರ್ಮಾಣ ಮಾಡಿದ್ದ ಚರಂಡಿಯನ್ನು, ಸಿಮೆಂಟ್ ಮುಚ್ಚಳಿಕೆ ಹಾಕಿ ಸಂಪೂರ್ಣವಾಗಿ ಮುಚ್ಚಲಾಗಿತ್ತು. ರಸ್ತೆ ಮೇಲೆ ಬೀಳುವ ಮಳೆ ನೀರು ಚರಂಡಿ ಒಳಗೆ ಇಳಿಯಲು ಅವಕಾಶ ನೀಡಿರದ ಕಾರಣ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದಿತ್ತು. ‘ಪ್ರಜಾವಾಣಿ’ ಈ ಬಗ್ಗೆ ವಿಶೇಷ ವರದಿ ಪ್ರಕಟಿಸುವ ಮೂಲಕ ಲೋಪಗಳು, ಅದರಿಂದಾಗುವ ಸಮಸ್ಯೆಗಳನ್ನು ಬಿಆರ್‌ಟಿಎಸ್ ಗಮನಕ್ಕೆ ತಂದಿತ್ತು.

‘ಹುಬ್ಬಳ್ಳಿಯಲ್ಲಿ 22 ಕಿ.ಮೀ ಹಾಗೂ ಧಾರವಾಡದಲ್ಲಿ 3 ಕಿ.ಮೀ ರಸ್ತೆ ಮಾರ್ಗದ ಎರಡೂ ಬದಿಯ ಚರಂಡಿಯಲ್ಲಿ ಅಲ್ಲಲ್ಲಿ ಮಳೆ ನೀರು ಹರಿವಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಜಾಲರಿಯ ಅಗತ್ಯವಿರುವೆಡೆ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ’ ಎಂದು ಬಿಆರ್‌ಟಿಎಸ್ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕೇರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮಳೆಯ ನೀರು ಯಾವುದೇ ಕಾರಣಕ್ಕೂ ರಸ್ತೆ ಮೇಲೆ ಹರಿಯಬಾರದು ಎಂಬುದಷ್ಟೇ ನಮ್ಮ ಉದ್ದೇಶವಾಗಿದೆ. ಇಂತಿಷ್ಟೇ ಜಾಲರಿ ಅಳವಡಿಸಲಾಗುತ್ತದೆ ಎಂದು ಈಗಲೇ ಹೇಳಲಾಗದು. ಅಗತ್ಯ ಎನಿಸುವ ಕಡೆಯೆಲ್ಲ ಹಾಕಲಾಗುತ್ತದೆ’ ಎಂದು ಅವರು ತಿಳಿಸಿದರು.

ಜಾಲರಿ ಅಳವಡಿಕೆಯ ಜೊತೆಗೆ ರಸ್ತೆ ಪಕ್ಕದ ಗುಂಡಿಗಳನ್ನು ಸಹ ಮುಚ್ಚಿ ಸಮತಟ್ಟುಗೊಳಿಸಲಾಗುತ್ತಿದೆ. ಆದ್ದರಿಂದ ಮಳೆ ನೀರು ನಿಲ್ಲಲು ಅವಕಾಶವೇ ಇರುವುದಿಲ್ಲ. 2.5 x2.5 ಅಡಿ ಉದ್ದದ ಜಾಲರಿ ಅಳವಡಿಸುತ್ತಿರುವುದರಿಂದ ನೀರು ಬಹಳ ಸರಾಗವಾಗಿ ಚರಂಡಿಗೆ ಇಳಿಯಲಿದೆ ಎಂದು ಕಾಮಗಾರಿ ನಡೆಸುತ್ತಿರುವ ಸಿಬ್ಬಂದಿಯೊಬ್ಬರು ತಿಳಿಸಿದರು.

ಬಿಆರ್‌ಟಿಎಸ್ ಕಿಮ್ಸ್ ನಿಲ್ದಾಣದ ಅಕ್ಕಪಕ್ಕ, ಕೆನರಾ ಹೋಟೆಲ್ ಸೇರಿದಂತೆ ಹಲವು ಕಡೆ ಈಗಾಗಲೇ ಜಾಲರಿ ಅಳವಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !