ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವೇಗೌಡರಿಂದ ಮಾಯಾವತಿಗೆ ಮೋಸ’

Last Updated 26 ಮಾರ್ಚ್ 2019, 19:07 IST
ಅಕ್ಷರ ಗಾತ್ರ

ರಾಮನಗರ: ‘ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಎಸ್ಪಿ ನಾಯಕಿ ಮಾಯಾವತಿ ಅವರಿಗೆ ಮೋಸ ಮಾಡಿದ್ದಾರೆ’ ಎಂದು ಬಿಎಸ್ಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.

ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಮಂಗಳವಾರ ಅವರು ಮಾತನಾಡಿದರು. ‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮಾಯಾವತಿ ಕಾರಣ. ಮಾಯಾವತಿಯನ್ನು ಪ್ರಧಾನಿ ಮಾಡುತ್ತೇವೆ ಎಂದು ಹೇಳುತ್ತಿದ್ದ ಇವರಿಬ್ಬರೂ ಈಗ ಅಧಿಕಾರ ಉಳಿಸಿಕೊಳ್ಳಲು ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಇಂತಹ ನಯವಂಚಕರಿಗೆ ಜನರು ಸರಿಯಾದ ಬುದ್ಧಿಯನ್ನು ಕಲಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಸಹೋದರರ ಗೂಂಡಾಗಿರಿಯ ಜತೆಗೆ ಕುಮಾರಸ್ವಾಮಿಯವರು ಸೇರಿಕೊಂಡಿದ್ದಾರೆ. ದಲಿತ ಸಮುದಾಯದ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು ನಡೆದರೂ ದೂರು ದಾಖಲಾಗುತ್ತಿಲ್ಲ. ಡಿ.ಕೆ. ಸುರೇಶ್‌ ಗೆದ್ದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ದಬ್ಬಾಳಿಕೆ ನಡೆಯುತ್ತದೆ. ಆದ್ದರಿಂದ ದಲಿತ ಸಮುದಾಯದ ಜನರು ಈ ಬಾರಿ ಜಾಗೃತಿಯಾಗಬೇಕು’ ಎಂದು ತಿಳಿಸಿದರು.

‘ಡಿ.ಕೆ. ಶಿವಕುಮಾರ್ ಅವರು ಇಂದು ನೂರಾರು ಕೋಟಿಯ ಒಡೆಯರಾಗಿದ್ದಾರೆ. ಇವರಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು’ ಪ್ರಶ್ನಿಸಿದ ಅವರು ‘ಪ್ರಾಕೃತಿಕ ಸಂಪತ್ತನ್ನು ನಿರಂತರವಾಗಿ ಲೂಟಿ ಮಾಡುವ ಮಾಡುತ್ತಿದ್ದಾರೆ. ಇಂತರವರನ್ನು ಬೆಂಬಲಿಸುತ್ತಿರುವ ಜೆಡಿಎಸ್‌ಗೂ ಬುದ್ಧಿ ಕಲಿಸಬೇಕು’ ಎಂದು ತಿಳಿಸಿದರು.

‘ನರೇಂದ್ರ ಮೋದಿ ಅವರಿಗೆ ಐದು ವರ್ಷಗಳ ಆಡಳಿತದಲ್ಲಿ ಸರಿಯಾದ ಆಡಳಿತವನ್ನು ನೀಡಲು ಸಾಧ್ಯವಾಗಲಿಲ್ಲ. ಕೇವಲ ಬಂಡವಾಳ ಶಾಹಿಗಳನ್ನು ಪ್ರೋತ್ಸಾಹಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯಲು ಮಾಯಾವತಿ ಪ್ರಧಾನಿಯಾಗಬೇಕು ಎಂದು ತಿಳಿಸಿದರು.

‘ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಹಿರಿಯ ಮುಖಂಡ ಬಸವರಾಜು ಮಾತನಾಡಿ ‘ಬಿಜೆಪಿಯವರು ಮೋದಿ ಮೋದಿ ಎಂದು ಮತಯಾಚನೆ ಮಾಡುತ್ತಿದ್ದಾರೆ. ಇವರಿಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ, ಮೋದಿ ಅಧಿಕಾರಕ್ಕೆ ಬರುವುದು ಮಾತ್ರ ಇವರಿಗೆ ಬೇಕಾಗಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಡಾ. ಚಿನ್ನಪ್ಪ ಚಿಕ್ಕ ಆಗಡೆ, ಮುಖಂಡರಾದ ಮಲ್ಲಿಕಾರ್ಜುನ್, ನೀಲಿ ರಮೇಶ್, ನಾಗೇಶ್, ಹರೀಶ್, ನೇರಳೆದೊಡ್ಡಿ ಕೃಷ್ಣಪ್ಪ, ಧನಂಜಯ, ಬಿ. ಅಂದಾನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT