ಸೋಮವಾರ, ಆಗಸ್ಟ್ 26, 2019
21 °C
ಸಚಿವ ಸಂಪುಟದ ಅನುಮೋದನೆ ಪಡೆಯದೇ ಇರುವುದು ಕಾನೂನು ಬಾಹಿರ

ಸಚಿವ ಸಂಪುಟದ ಒಪ್ಪಿಗೆ ಪಡೆಯದ ಬಿಬಿಎಂಪಿ ಬಜೆಟ್‌ಗೆ ಸಿ.ಎಂ ತಡೆ

Published:
Updated:

ಬೆಂಗಳೂರು: 2019–20ನೇ ಸಾಲಿನ ಬಿಬಿಎಂಪಿ ಬಜೆಟ್‌ಗೆ ಸಚಿವ ಸಂಪುಟದ ಒಪ್ಪಿಗೆ ಪಡೆಯದೆ ನಗರಾಭಿವೃದ್ಧಿ ಇಲಾಖೆ ನೀಡಿರುವ ಅನುಮೋದನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಡೆಹಿಡಿದ್ದಾರೆ.

2018–19ನೇ ಸಾಲಿನ ಪರಿಷ್ಕೃತ ಆಯವ್ಯಯಕ್ಕೂ ಸಂಪುಟದ ಸಮ್ಮತಿ ಪಡೆಯದೆ ಇರುವುದು ಗಮನಕ್ಕೆ ಬಂದಿದೆ.

ಇದು ಕಾನೂನು ಬಾಹಿರವಾಗಿದ್ದು, ಈ ಆಯವ್ಯಯಗಳ ಅನುಷ್ಠಾನಕ್ಕೆ ಜಾಬ್‌ಕೋಡ್‌ ನೀಡುವುದು ಮತ್ತು ಟೆಂಡರ್ ಕರೆಯುವುದನ್ನು ಸ್ಥಗಿತಗೊಳಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಶೀಘ್ರವೇ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. 

2019–20ನೇ ಸಾಲಿನಲ್ಲಿ ₹8,987.73 ಕೋಟಿ ಆದಾಯ ನಿರೀಕ್ಷಿಸಿ ಬಜೆಟ್‌ ಮಂಡಿಸಬಹುದು ಎಂದು ಪಾಲಿಕೆ ಅಧಿಕಾರಿಗಳು ಶಿಫಾರಸು ಮಾಡಿದ್ದರು. ಆದರೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ. ಹೇಮಲತಾ ಅವರು ಫೆ.18ರಂದು ₹10,691. 82 ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದರು. ಬಳಿಕ ಕೌನ್ಸಿಲ್‌ ಸಭೆಯಲ್ಲಿ ಬಜೆಟ್‌ಗೆ ಕೆಲವೊಂದು ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ ಗಾತ್ರವನ್ನು ₹12,958 ಕೋಟಿಗೆ ಹಿಗ್ಗಿಸಲಾಗಿತ್ತು. ಬಜೆಟ್‌ ಲೆಕ್ಕಾಚಾರ ವಾಸ್ತವಕ್ಕೆ ದೂರವಾಗಿದೆ. ಹಾಗಾಗಿ, ಅದರ ಗಾತ್ರವನ್ನು ₹9 ಸಾವಿರ ಕೋಟಿಗೆ ತಗ್ಗಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಆಯುಕ್ತ ಎನ್. ಮಂಜುನಾಥಪ್ರಸಾದ್ ಪತ್ರ ಬರೆದಿದ್ದರು.

2017–18ನೇ ಸಾಲಿನ ನೈಜ ಲೆಕ್ಕಾಚಾರಗಳಿಗೆ ಹೋಲಿಸಿದರೆ 2019–20ನೇ ಸಾಲಿನ ಬಜೆಟ್‌ ಗಾತ್ರವು ಶೇ 173.61ರಷ್ಟು ಹೆಚ್ಚು ಇದೆ. ಬಜೆಟ್‌ ಗಾತ್ರವನ್ನು ₹9 ಸಾವಿರ ಕೋಟಿಗೆ ಮಿತಿಗೊಳಿಸಿದರೂ ಅದು 2018–19ನೇ ಸಾಲಿನ ವಾಸ್ತವ ಲೆಕ್ಕಾಚಾರಕ್ಕಿಂತ ಶೇ 22.92ರಷ್ಟು ಹೆಚ್ಚಾಗುತ್ತದೆ. ಒಂದು ವೇಳೆ ನಿರೀಕ್ಷೆಗಿಂತ ಹೆಚ್ಚು ಆದಾಯ ಸಂಗ್ರಹವಾದಲ್ಲಿ ಪೂರಕ ಬಜೆಟ್‌ ಮಂಡಿಸಿ ಅದಕ್ಕೆ ಅನುಮೋದನೆ ಕೋರಲು ಅವಕಾಶ ಇದೆ ಎಂದೂ ಸಲಹೆ ನೀಡಿದ್ದರು.

ಇದಾದ ಬಳಿಕವೂ ಬಜೆಟ್‌ ಗಾತ್ರವನ್ನು ₹11,648.90 ಕೋಟಿಗೆ ಮಿತಗೊಳಿಸಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿತ್ತು.

ನವ ಬೆಂಗಳೂರು ಯೋಜನೆಯೂ ಸ್ಥಗಿತ

ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಿರುವ ಕ್ರಿಯಾಯೋಜನೆಯನ್ನೂ ಸ್ಥಗಿತಗೊಳಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ.

2018–19, 2019–20 ಮತ್ತು 2020–21ನೇ ಸಾಲಿನ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಮುಂದಿನ ಆದೇಶದವರೆಗೂ ಕಾಮಗಾರಿಗಳಿಗೆ ಜಾಬ್‌ ಕೋಡ್ ನೀಡುವುದು ಮತ್ತು ಟೆಂಡರ್ ಕರೆಯುವುದನ್ನು ಸ್ಥಗಿತಗೊಳಿಸಬೇಕು ಎಂದು ತಿಳಿಸಿದ್ದಾರೆ.

₹ 500 ದಂಡ ಪಾವತಿಸಿದ ಮೇಯರ್

ಪ್ಲಾಸ್ಟಿಕ್ ಹೊದಿಕೆ ಇರುವ ಹಣ್ಣಿನ ಬುಟ್ಟಿ‌ಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಿ ಟೀಕೆಗೆ ಗುರಿಯಾಗಿದ್ದ ಮೇಯರ್ ಗಂಗಾಂಬಿಕೆ ಅವರು ₹ 500 ದಂಡ ಪಾವತಿಸಿದ್ದಾರೆ.

ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದು, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಅವರನ್ನು ಮಂಗಳವಾರ ಭೇಟಿಯಾಗಿ ಶುಭಕೋರಿದ್ದ ಅವರು, ಪ್ಲಾಸ್ಟಿಕ್ ಹೊದಿಕೆ ಇರುವ ಹಣ್ಣಿನ ಬುಟ್ಟಿ ನೀಡಿದ್ದರು.

ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಟೀಕೆಗಳು ವ್ಯಕ್ತವಾಗಿತ್ತು. ಶನಿವಾರ ದಂಡ ಪಾವತಿ ಮಾಡಿದ್ದಾರೆ. ‘ನಗರದ ಪ್ರಥಮ ಪ್ರಜೆಯಿಂದಲೇ ನಾಗರಿಕರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ನಾನೆ ಖುದ್ದು ದಂಡ ಪಾವತಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ಗ್ರಾಹಕರಿಗೆ ದಂಡ ವಿಧಿಸುವ ಪ್ರಸ್ತಾವನೆಯನ್ನು ಬೈಲಾದಲ್ಲಿ ಸೇರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರಸ್ತಾವನೆ ಬೈಲಾದಲ್ಲಿ ಸೇರ್ಪಡೆಯಾಗುವ ಮೊದಲೇ ನಾನು ದಂಡ ಪಾವತಿಸಿದ್ದೇನೆ’ ಎಂದಿದ್ದಾರೆ.

Post Comments (+)