ಮಂಗಳವಾರ, ಅಕ್ಟೋಬರ್ 15, 2019
26 °C
ಸ್ನಾತಕೋತ್ತರ ಕೋರ್ಸ್‌ಗಳ ಬಹುತೇಕ ಸೀಟುಗಳು ಭರ್ತಿ

ಬೆಂಗಳೂರು ವಿಶ್ವವಿದ್ಯಾಲಯ: 232 ಬೋಧಕರ ಹುದ್ದೆ ಖಾಲಿ!

Published:
Updated:

ಬೆಂಗಳೂರು: ಬೆಂಗಳೂರಿನ ನಾಲ್ಕು ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಈ ಶೈಕ್ಷಣಿಕ ವರ್ಷಕ್ಕೆ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿ ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯಗಳಲ್ಲಿ ಸೀಟುಗಳು ಬಹುತೇಕ ಭರ್ತಿಯಾಗಿವೆ.

ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಹುದ್ದೆ ಖಾಲಿ ಇರುವುದು ದೊಡ್ಡ ಸಮಸ್ಯೆಯಾಗಿದ್ದು, ಈ ಪೈಕಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 232 ಹುದ್ದೆಗಳು ಖಾಲಿ ಇವೆ.

ಒಟ್ಟು 401 ಹುದ್ದೆಗಳ ಪೈಕಿ 161 ಹುದ್ದೆಗಳಲ್ಲಿ ಮಾತ್ರ ಕಾಯಂ ಪ್ರಾಧ್ಯಾಪಕರಿದ್ದು, ಉಳಿದವಕ್ಕೆ ಅತಿಥಿ ಉಪನ್ಯಾಸಕರನ್ನೇ ಆಶ್ರಯಿಸಬೇಕಾಗಿದೆ.

‘ಈ ಬಾರಿ ಎಂಟು ಹೊಸ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಅವುಗಳೆಲ್ಲ ಭರ್ತಿಯಾಗಿವೆ. ವಿಜ್ಞಾನ, ವಾಣಿಜ್ಯ ನಿಖಾಯದ ಕೋರ್ಸ್‌ಗಳ ಜತೆಗೆ ಕಲಾ ನಿಕಾಯದ ಬಹುತೇಕ ಕೋರ್ಸ್‌ಗಳು ಸಹ ಭರ್ತಿಯಾಗಿವೆ.

ಉತ್ತಮ ಹಾಸ್ಟೆಲ್‌ ವ್ಯವಸ್ಥೆ, ಸಂಶೋಧನೆಗೆ ಅಗತ್ಯವಾದ ಪ್ರಯೋಗಾಲಯ ಸಹಿತ ಇತರ ಸೌಲಭ್ಯಗಳಿಂದಾಗಿ ವಿದ್ಯಾರ್ಥಿಗಳು ಜ್ಞಾನಭಾರತಿ ಕ್ಯಾಂಪಸ್‌ ನೆಚ್ಚಿಕೊಂಡಿದ್ದಾರೆ. ಆದರೆ, ಬೋಧಕರ ಹುದ್ದೆಗಳು ಖಾಲಿಯಾಗಿರುವುದು ಆತಂಕದ ಸಂಗತಿ, ಒಂದು ಪೂರ್ಣಪ್ರಮಾಣದ ಪದವಿ ಕಾಲೇಜಿನಲ್ಲಿ ಇರುವಷ್ಟು ಬೋಧಕರ ಸಂಖ್ಯೆ ಇಲ್ಲಿಲ್ಲ’ ಎಂದು ಕುಲಪತಿ ಪ್ರೊ. ಕೆ. ಆರ್‌. ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಸ್ಕೃತ ಸ್ನಾತಕೋತ್ತರ ಕೋರ್ಸ್‌ಗೆ ಕೇವಲ ಒಬ್ಬ ಅಭ್ಯರ್ಥಿ ಪ್ರವೇಶ ಪಡೆದಿದ್ದಾರೆ. ಕ್ರಿಮಿನಾಲಜಿ ವಿಭಾಗದಲ್ಲೂ ಕೆಲವು ಸೀಟುಗಳು ಖಾಲಿ ಇವೆ. ಹೀಗಿದ್ದರೂ ಈ ಕೋರ್ಸ್‌ಗಳನ್ನು ರದ್ದುಪಡಿಸುವ ವಿಚಾರ ಇಲ್ಲ’ ಎಂದರು.

ಯುಜಿಸಿ ಕಟ್ಟಾಜ್ಞೆ: ಇದೇ ಡಿಸೆಂಬರ್‌ಗೆ ಮೊದಲು ವಿಶ್ವವಿದ್ಯಾಲಯಗಳ ಜತೆಗೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜೂನ್‌ ಮೊದಲ ವಾರದಲ್ಲೇ ಸೂಚನೆ ನೀಡಿದೆ. ಆದರೆ, ಗಡುವು ಮುಗಿಯಲು ಮೂರು ತಿಂಗಳು ಬಾಕಿ ಉಳಿದಿದ್ದರೂ, ಹುದ್ದೆ ಭರ್ತಿಗೆ ಮಾತ್ರ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

‘ಸರ್ಕಾರಕ್ಕೆ ಮತ್ತೆ ಮನವರಿಕೆ ಮಾಡುವ ಕೆಲಸ ಮುಂದುವರಿಯಲಿದೆ. ಶೀಘ್ರ ನೇಮಕಾತಿ ಪ್ರಕ್ರಿಯೆ ನಡೆಯವ ವಿಶ್ವಾಸ ಇದೆ’ ಎಂದು ಕುಲಪತಿ ಅವರು ತಿಳಿಸಿದರು.

ಯುವಿಸಿಇ: 91 ಹುದ್ದೆ ಖಾಲಿ


ಪ್ರೊ.ಕೆ.ಆರ್‌.ವೇಣುಗೋಪಾಲ್‌

ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುತ್ತಿರುವ ಕೆ.ಆರ್‌.ವೃತ್ತದಲ್ಲಿರುವ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು (ಯುವಿಸಿಇ) ರಾಜ್ಯದ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಂದು. ಇಲ್ಲಿ 177 ಬೋಧಕ ಹುದ್ದೆಗಳ ಪೈಕಿ 91 ಹುದ್ದೆಗಳು ಖಾಲಿ ಬಿದ್ದಿವೆ. ಇವುಗಳಲ್ಲಿ 37

ಸಹಾಯಕ ಪ್ರಾಧ್ಯಾಪಕರು, 30 ಸಹ ಪ್ರಾಧ್ಯಾಪಕರು ಹಾಗೂ  24 ಪ್ರೊಫೆಸರ್‌ ಹುದ್ದೆಗಳು ಸೇರಿವೆ.

* ಹುದ್ದೆ ಭರ್ತಿಗೆ ಒತ್ತಾಯಿಸಿ ಸರ್ಕಾರಕ್ಕೆ ಹತ್ತು ಬಾರಿ ಪತ್ರ ಬರೆದಿದ್ದೇನೆ. ನೂತನ ಸರ್ಕಾರಕ್ಕೆ ಮತ್ತೆ ಪತ್ರ ಬರೆಯುತ್ತಿದ್ದೇನೆ

-ಪ್ರೊ. ಕೆ. ಆರ್‌. ವೇಣುಗೋಪಾಲ್‌, ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

Post Comments (+)