ಬಜೆಟ್ 2019: ನವೋದ್ಯಮಗಳಿಗೆ ಉತ್ತೇಜನ, ಹುಸಿಯಾಗದ ನಿರೀಕ್ಷೆ

ಬುಧವಾರ, ಜೂಲೈ 17, 2019
24 °C

ಬಜೆಟ್ 2019: ನವೋದ್ಯಮಗಳಿಗೆ ಉತ್ತೇಜನ, ಹುಸಿಯಾಗದ ನಿರೀಕ್ಷೆ

Published:
Updated:
Prajavani

ಸಕಾರಾತ್ಮಕ, ಅಭಿವೃದ್ಧಿಗೆ ಪೂರಕ

ಇದೊಂದು ಸಕಾರಾತ್ಮಕ, ಸಮತೋಲಿತ ಮತ್ತು ಅಭಿವೃದ್ಧಿಗೆ ಪೂರಕವಾದ ಬಜೆಟ್‌. ಮುಂದಿನ ಐದು ವರ್ಷ ದೇಶದ ಅಭಿವೃದ್ಧಿ ಮತ್ತು ಸುಲಲಿತ ವ್ಯಾಪಾರ ವ್ಯವಸ್ಥೆ ರೂಪಿಸುವ ನೀಲನಕ್ಷೆಯಂತಿದೆ. ದೇಶದ ಆರ್ಥಿಕತೆಗೆ ಪೂರಕವಾಗಿದ್ದು  ಉದ್ಯಮ, ಮೂಲಸೌಕರ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗ  ವಲಯಗಳ ಸುಧಾರಣೆಗೆ ಮುನ್ನಡಿ ಬರೆಯುವಂತಿದೆ. ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ ತಯಾರಿಕೆ, ದುರಸ್ತಿ ಮತ್ತು ನಿರ್ವಹಣೆ ಉದ್ಯಮ (ಎಂಆರ್‌ಒ) ವಲಯ ನೇರವಾಗಿ ಬೆಂಗಳೂರು ನಗರಕ್ಕೆ ಲಾಭ ತಂದುಕೊಡಲಿದೆ. ಎಂಆರ್‌ಒ ಬಗ್ಗೆ ಬಿಸಿಐಸಿ ಹಣಕಾಸು ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಿದಕ್ಕೆ ಮಾನ್ಯತೆ ದೊರೆತಿರುವುದು ಸಂತಸ ತಂದಿದೆ.  

– ದೇವೇಶ್‌ ಅಗರವಾಲ್‌, ಬಿಸಿಐಸಿ ಅಧ್ಯಕ್ಷ

**

ಕಾರ್ಮಿಕರಿಗೆ ಮಾರಕ

ಕಾರ್ಮಿಕ ಕಾನೂನಿನಲ್ಲಿರುವ 44 ಕಾಯ್ದೆಗಳನ್ನು ರದ್ದುಪಡಿಸಿ ಸಂಹಿತೆಗಳನ್ನಾಗಿ ಮಾರ್ಪಡಿಸುವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಇದು ಕಾರ್ಮಿಕರಿಗೆ ಮಾರಕವಾದ ನಡೆ. ಒಂದು ವೇಳೆ ಹೀಗಾದರೆ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗುತ್ತದೆ. ಇದಕ್ಕೆ ನಮ್ಮ ವಿರೋಧವಿದೆ. ಚಿಲ್ಲರೆ ಮಾರುಕಟ್ಟೆ ವಲಯದಲ್ಲಿ ಸರ್ಕಾರ ವಿದೇಶೀ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲು ಹೊರಟಿದೆ. ಬೀದಿ ಬದಿಯ ವರ್ತಕರು ಮತ್ತು ಸ್ಥಳೀಯ ಸಣ್ಣಪುಟ್ಟ ವರ್ತಕರಿಗೆ ಇದರಿಂದ ಕಷ್ಟವಾಗಲಿದೆ. ಬೀದಿ ಬದಿಯ ವ್ಯಾಪಾರಿಗಳಿಗೆ ಬಜೆಟ್‌ನಲ್ಲಿ ಯಾವುದೇ ಉತ್ತೇಜನಾ ಕ್ರಮಗಳನ್ನು ಘೋಷಿಸಿಲ್ಲ. ಕಾಮಿರ್ಕ ಕಾಯ್ದೆ ರದ್ದು ಮತ್ತು ಎಫ್‌ಡಿಐ ಪ್ರಮಾಣ ಹೆಚ್ಚಳ ಹೀಗೆ ಎರಡು ರೀತಿಯಿಂದ ಕಾರ್ಮಿಕರಿಗೆ ಮಾರಕವಾದ ಬಜೆಟ್‌ ನಿರಾಶದಾಯಕವಾಗಿದೆ.

– ವಿನಯ್‌ ಶ್ರೀನಿವಾಸನ್, ಸದಸ್ಯರು, ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ

**

ಶೂನ್ಯ ಬಂಡವಾಳ, ಶೂನ್ಯ ಭರವಸೆ ‌

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕೃಷಿ ಶಬ್ದವನ್ನು ಹುಡುಕುವಂತಾಯಿತು. ಏಕೆಂದರೆ, ಇಡೀ ಬಜೆಟ್‌ನಲ್ಲಿ ’ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ನೀಡುವ ಮೂಲಕ ರೈತರ ಆದಾಯ ದ್ವಿಗುಣ ಮಾಡುತ್ತೇವೆಂಬ’ ಮಾತು ಹೊರತುಪಡಿಸಿ ಬೇರೆನೂ ಕೇಳಿಬರಲಿಲ್ಲ. ಹಾಗಾಗಿ ಇದು ಕೃಷಿ ಕ್ಷೇತ್ರದ ಪಾಲಿಗೆ ’ಶೂನ್ಯ ಬಂಡವಾಳ ಮತ್ತು ಭರವಸೆ’ಯ ಬಜೆಟ್‌ ಆಗಿದೆ. ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿರುವ ಆದ್ಯತೆ ಗಮನಿಸಿದರೆ, ಕೇಂದ್ರ ಸರ್ಕಾರ ಕೃಷಿಕರನ್ನು ಮತ್ತು ಕೃಷಿ ವಲಯವನ್ನು ಕೇವಲ ’ಮತ ಬ್ಯಾಂಕ್‌’ಗಾಗಿ ಬಳಸಿಕೊಂಡಿತೇನೋ ಎನ್ನಿಸುತ್ತಿದೆ.

– ಪ್ರಕಾಶ್ ಕಮ್ಮರಡಿ, ಅಧ್ಯಕ್ಷರು, ಕೃಷಿ ಬೆಲೆ ಆಯೋಗ

**

ಹುಸಿಯಾಗದ ನಿರೀಕ್ಷೆ

ನವೋದ್ಯಮ (ಸ್ಟಾರ್ಟ್‌ ಅಪ್‌) ಮತ್ತು ಹಣಕಾಸು ತಂತ್ರಜ್ಞಾನ ಸಂಸ್ಥೆಗಳಿಗೆ ಈ ಬಜೆಟ್‌ ಶುಭ ಸುದ್ದಿ ನೀಡಿದೆ. ನವೋದ್ಯಮಗಳಲ್ಲಿ ಬಂಡವಾಳ ಹೂಡಿಕೆ ಆತಂಕವನ್ನೂ ದೂರ ಮಾಡಿದೆ. ಡಿಜಿಟಲ್‌ ಪೇಮೆಂಟ್‌ ವಲಯಕ್ಕೂ ಉತ್ತೇಜಕ ಕೊಡುಗೆ ನೀಡಿದೆ. ನವೋದ್ಯಮ, ಹಣಕಾಸು ತಂತ್ರಜ್ಞಾನ ಸಂಸ್ಥೆ ಮತ್ತು ಡಿಜಿಟಲ್‌ ವಲಯದ ನಿರೀಕ್ಷೆಗಳನ್ನು ಈ ಬಜೆಟ್‌ ಹುಸಿಗೊಳಿಸಿಲ್ಲ. ಸೂಕ್ತ ನ್ಯಾಯ ಸಲ್ಲಿಸಿದೆ.   

– ಹರ್ಷಿಲ್‌ ಮಾಥೂರ್‌, ಸಂಸ್ತಾಪಕ, ರೇಜರ್‌ಪೇ

**

ನವೋದ್ಯಮಗಳಿಗೆ ಉತ್ತೇಜನ

ಕಾರ್ಪೊರೇಟ್‌ ತೆರಿಗೆಗೆ ನಿಗದಿ ಪಡಿಸಲಾಗಿದ್ದ ಹಣಕಾಸು ವಹಿವಾಟು ಮಿತಿಯನ್ನು ಹೆಚ್ಚಿಸಿರುವುದು ಸ್ವಾಗತಾರ್ಹ.‘ಏಜೆಂಲ್‌ ಟ್ಯಾಕ್ಸ್‌’ ರದ್ದುಪಡಿಸುವ ಪ್ರಸ್ತಾವನೆ ನವೋದ್ಯಮಗಳ ಬೆಳವಣಿಗೆಗೆ ಪೂರಕವಾಗಿದೆ. ಕೇಂದ್ರೀಕೃತ ತೆರಿಗೆ ಆದಾಯ ಘಟಕದಿಂದ ಆದಾಯ ತೆರಿಗೆ ಲೆಕ್ಕಪತ್ರ ಪರಿಶೀಲನೆಗೆ ಎಲೆಕ್ಟ್ರಾನಿಕ್‌ ವ್ಯವಸ್ಥೆ ರೂಪಿಸಿರುವುದು ಒಳ್ಳೆಯ ಬೆಳವಣಿಗೆ

–ಕೆ.ಆರ್‌. ಶೇಖರ್, ಬಿಸಿಐಸಿ ನೇರ ತೆರಿಗೆ ಸಮಿತಿ ಅಧ್ಯಕ್ಷ

**

ಶಿಕ್ಷಣ ಕ್ಷೇತ್ರದ ದಿಕ್ಸೂಚಿ

ಉನ್ನತ ಶಿಕ್ಷಣ ಸಂಸ್ಥೆಗಳನ್ನು ಜಾಗತಿಕ ದರ್ಜೆಗೆ ಏರಿಸಲು ₹400 ಕೋಟಿ ಅನುದಾನ ನೀಡುವ ಬಜೆಟ್‌ ಘೋಷಣೆ ಸ್ವಾಗತಾರ್ಹ. ಇದರಿಂದ ಭಾರತದ ಹಲವಾರು ಶಿಕ್ಷಣ ಸಂಸ್ಥೆಗಳು ಜಾಗತಿಕ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಕಾಣುವ ದಿನಗಳು ದೂರವಿಲ್ಲ. ವಿದೇಶಿ ವಿದ್ಯಾರ್ಥಿಗಳಿಗೆ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಅವಕಾಶ ನೀಡುವ ‘ಸ್ಟಡಿ ಇನ್‌ ಇಂಡಿಯಾ’ ಯೋಜನೆಯಿಂದ ದೇಶೀಯ ಶೈಕ್ಷಣಿಕ ಸಂಸ್ಥೆಗಳಿಗೆ ಉತ್ತೇಜನ ದೊರೆಯಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದೊಂದು ಸಮತೋಲಿತ ಮತ್ತು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಬಜೆಟ್‌.  

– ನವೀನ್‌ ಕೆ.ಎಂ., ನಿರ್ದೇಶಕ, ಟ್ರಯೊ ವರ್ಲ್ಡ್‌ ಸ್ಕೂಲ್‌

**

ಸಾರಿಗೆ ವ್ಯವಸ್ಥೆ ನಿರ್ಲಕ್ಷ್ಯ

ಕೇಂದ್ರ ಬಜೆಟ್‌ನಲ್ಲಿ ಬಸ್‌ ಬಗ್ಗೆ ಒಂದೇ ಒಂದು ಪದವನ್ನೂ ಪ್ರಸ್ತಾಪ ಮಾಡಿಲ್ಲ. ಬಸ್‌ಗಳು ನಗರ ಮತ್ತು ಗ್ರಾಮೀಣ ಸಾರಿಗೆಯ ಪ್ರಮುಖ ಸಂಪರ್ಕ ಕೊಂಡಿಗಳು. ‘ಮೆಟ್ರೊ’ ರೈಲುಗಳ ಬಗ್ಗೆ ಹಲವು ಕೊಡುಗೆ ಘೋಷಿಸಿರುವ ಕೇಂದ್ರ ಸರ್ಕಾರ ಬಸ್‌ಗಳನ್ನು ಕಡೆಗಣಿಸಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡುವುದಾಗಿ ಘೋಷಿಸಲಾಗಿದೆ. ಇದರಿಂದ ಟ್ರಾಫಿಕ್‌ ಸಮಸ್ಯೆ ಬಗೆಹರಿಯುವುದಿಲ್ಲ. ಮಾಲಿನ್ಯ ಸಮಸ್ಯೆ ಕಡಿಮೆಯಾಗಬಹುದು, ಆದರೆ, ರಸ್ತೆಯಲ್ಲಿರುವ ವಾಹನಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ಬದಲಿಗೆ ವಿದ್ಯುತ್‌ ಬಳಕೆ ಹೆಚ್ಚಾಗುತ್ತದೆ.   

– ಲೇಖಾ ಅಡವಿ, ಸದಸ್ಯರು, ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !