ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು, ಅಗರ ಕೆರೆ: ಮಿತಿ ಸಡಿಲಿಕೆ ಕೂಡದು

‘ಪೂರ್ನಾನ್ವಯದಂತೆ ಎನ್‌ಜಿಟಿ ಆದೇಶ ಜಾರಿ ಅಗತ್ಯವಿಲ್ಲ’
Last Updated 22 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಕೆರೆಗಳ ಸುತ್ತಲಿನ 75 ಮೀಟರ್‌ ವ್ಯಾಪ್ತಿ ಪ್ರದೇಶವನ್ನು ‘ಬಫರ್‌ ವಲಯ’ ಎಂದು ಘೋಷಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶವನ್ನು ಪೂರ್ವಾನ್ವಯ ಆಗುವಂತೆ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಸ್ವಯಂ ಸೇವಾ ಸಂಸ್ಥೆ ಫಾರ್ವರ್ಡ್‌ ಫೌಂಡೇಷನ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

ಬೆಂಗಳೂರಿನ ಕೆರೆಗಳು ಮತ್ತು ರಾಜ ಕಾಲುವೆಗಳ ಬಫರ್ ವಲಯದ ಮಿತಿ ಹೆಚ್ಚಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿರುವ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠದೆದುರು ಮಂಗಳವಾರ ಸಂಸ್ಥೆಯ ಪರ ವಕೀಲ ಸಜನ್‌ ಪೂವಯ್ಯ ವಾದ ಮಂಡಿಸಿದರು.

‘ಬೆಂಗಳೂರಿನ ಇತರ ಎಲ್ಲ ಕೆರೆಗಳು ಮತ್ತು ಕಾಲುವೆಗಳ ಸ್ಥಿತಿಗತಿ ಅರಿತು ಅವುಗಳ ಸುತ್ತಲಿನ ಬಫರ್ ವಲಯದ ಮಿತಿಯನ್ನು ಸಡಿಲಿಸಬಹುದಾಗಿದೆ. ಆದರೆ, ಬೆಳ್ಳಂದೂರು ಮತ್ತು ಅಗರ ಕೆರೆಗಳ ರಕ್ಷಣೆ ನಿಟ್ಟಿನಲ್ಲಿ ಎನ್‌ಜಿಟಿ ಹೇರಿರುವ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದ ಅವರು, ‘ಎನ್‌ಜಿಟಿ ಆದೇಶವನ್ನು ಪೂರ್ವಾನ್ವಯ ಆಗದಂತೆ ಜಾರಿಗೊಳಿಸಿದಲ್ಲಿ ಯಾವುದೇ ಕಟ್ಟಡಗಳನ್ನು ನೆಲಸಮಗೊಳಿಸುವ ಅಗತ್ಯ ಕಂಡುಬರದು’ ಎಂದರು.

ರಾಜ್ಯ ಸರ್ಕಾರ ಹಾಗೂ ರಿಯಲ್‌ ಎಸ್ಟೇಟ್‌ ಕಂಪೆನಿಗಳು ಎನ್‌ಜಿಟಿ ಆದೇಶವನ್ನೇ ಪ್ರಶ್ನಿಸಿವೆ. ಆದರೆ, ಎನ್‌ಜಿಟಿ ಕಾಯ್ದೆಯ ಸೆಕ್ಷನ್‌ 15 (1) (ಸಿ) ಪ್ರಕಾರ ಪರಿಸರ ಸಂರಕ್ಷಣೆ ಮತ್ತು ಪುನಶ್ಚೇತನ ಕುರಿತು ಈ ರೀತಿಯ ಆದೇಶ ನೀಡಬಹುದಾಗಿದೆ ಎಂದು ಅವರು ಒತ್ತಿಹೇಳಿದರು.

ಎನ್‌ಜಿಟಿಯು ಜಾರಿಯಲ್ಲಿರುವ ಯಾವುದೇ ಕಾನೂನನ್ನು ತಿರುಚುವ ಹಾಗೂ ಕಾಯ್ದೆಯನ್ನು ತಿದ್ದುವ ಕೆಲಸಕ್ಕೆ ಮುಂದಾಗಿಲ್ಲ. ಬದಲಿಗೆ, ಅಕ್ರಮವಾಗಿ ತಲೆ ಎತ್ತುವ ಮೂಲಕ ಪರಿಸರಕ್ಕೆ ಮಾರಕವಾದ ಕೈಗಾರಿಕೆಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಬಫರ್‌ ವಲಯವನ್ನು ವಿಸ್ತರಿಸಿದೆ ಎಂದು ಅವರು ತಿಳಿಸಿದರು.

‘ದೆಹಲಿಯ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಡೀಸೆಲ್‌ ವಾಹನಗಳ ಸಂಚಾರ ನಿಷೇಧಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಅಂತೆಯೇ ಎನ್‌ಜಿಟಿ ಸಹ ಬೆಂಗಳೂರು ಕೆರೆಗಳ ಸಂರಕ್ಷಣೆಗಾಗಿ ಬಫರ್‌ ವಲಯದ ಮಿತಿ ಹೆಚ್ಚಿಸಿ ಆದೇಶಿಸಿದೆ’ ಎಂದು ಅವರು ಉದಾಹರಣೆ ನೀಡಿದರು.

‘ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಇಂತಹ ಉದಾಹರಣೆ ನೀಡುವುದು ತರವಲ್ಲ’ ಎಂದು ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್‌ ನಜೀರ್‌ ಹಾಗೂ ಎಂ.ಆರ್‌. ಶಾ ನೇತೃತ್ವದ ಪೀಠ ಸಜನ್‌ ಪೂವಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಾಗ, ತಮ್ಮ ಹೇಳಿಕೆ ಹಿಂದಕ್ಕೆ ಪಡೆಯುವುದಾಗಿ ಅವರು ತಿಳಿಸಿದರು.

‘ಬೆಂಗಳೂರು ನಗರದ ಅಭಿವೃದ್ಧಿಗಾಗಿ ಮಾಸ್ಟರ್‌ ಪ್ಲಾನ್‌ ರೂಪಿಸುವಾಗ 30 ಮೀಟರ್‌ಗೆ ಮಿತಿಗೊಳಿಸಲಾಗಿದ್ದ ಬಫರ್‌ ವಲಯವನ್ನು ವಿಸ್ತರಿಸುವ ಮೊದಲು ಅಧ್ಯಯನ ನಡೆಸಲಾಗಿದೆಯೇ’ ಎಂದು ಪೀಠ ಪ್ರಶ್ನಿಸಿತು.

30 ಮೀಟರ್‌ ಬಫರ್‌ ವಲಯದ ಮಿತಿಯನ್ನೂ ಉಲ್ಲಂಘಿಸಿದ್ದರಿಂದ ಬೆಂಗಳೂರಿನ ಕೆರೆಗಳು ಕಲುಷಿತಗೊಂಡಿವೆ. ಮುಂದಿನ ಪೀಳಿಗೆಗಾಗಿ ಕೆರೆಗಳನ್ನು ಸಂರಕ್ಷಿಸುವ ಅಗತ್ಯವಿದೆ. ಎನ್‌ಜಿಟಿಯು ನ್ಯಾಯಮೂರ್ತಿಗಳನ್ನು ಮಾತ್ರವಲ್ಲದೆ ವಿಷಯ ತಜ್ಞರನ್ನೂ ಒಳಗೊಂಡಿದೆ. ಕಾನೂನಿನ ಅಂಶಗಳನ್ನು ಆಧರಿಸಿ ಆದೇಶ ನೀಡದೆ, ತಾಂತ್ರಿಕ ಮಾಹಿತಿ ಆಧರಿಸಿಯೇ ಇಂತಹ ನಿರ್ದೇಶನ ನೀಡಿದೆ ಎಂದು ಅವರು ಸಮರ್ಥಿಸಿದರು. ಪ್ರಕರಣದ ವಿಚಾರಣೆ ಬುಧವಾರ ಮುಂದುವರಿಯಲಿದೆ.

ಕೆರೆಗೆ ಕಸ: ವಾಹನಗಳು ಬಿಡಿಎ ವಶಕ್ಕೆ

ಬೆಂಗಳೂರು: ಬೆಳ್ಳಂದೂರು ಕೆರೆ ಬದಿಯಲ್ಲಿ ಕಟ್ಟಡ ತ್ಯಾಜ್ಯ ಮತ್ತು ಕಸವನ್ನು ಸುರಿಯುತ್ತಿದ್ದ ಎರಡು ವಾಹನಗಳು ಹಾಗೂ ಅವುಗಳ ಚಾಲಕರನ್ನು ಪಾಲಿಕೆಯ ಮಾರ್ಷಲ್‌ಗಳು ಮತ್ತು ಬಿಡಿಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ವಾಹನಗಳಲ್ಲಿ ಪ್ಲಾಸ್ಟಿಕ್‌ ಕಸ ಮತ್ತು ಬೆಂಕಿಯನ್ನು ಹೊತ್ತಿಸುವ ತ್ಯಾಜ್ಯ ತಂದು ಸುರಿಯುತ್ತಿದ್ದರು. ಬೆಂಕಿ ಹೊತ್ತಿಕೊಳ್ಳುವ ಘಟನೆಗಳಿಗೆ ಕಡಿವಾಣ ಹಾಕಲು ಪಹರೆ ಕಾಯುತ್ತಿದ್ದಾಗ, ಕೆರೆ ಬದಿಯಲ್ಲಿನ ಖಾಸಗಿ ಜಾಗದಲ್ಲಿ ಕಸ ಸುರಿಯಲಾಗುತ್ತಿತ್ತು. ಆಗ ವಾಹನಗಳನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಅಧಿಕಾರಿಗಳು ತಿಳಿಸಿದರು.

‘ಕೆಲವರು ಉದ್ದೇಶಪೂರ್ವಕವಾಗಿಯೇ ಕಸವನ್ನು ಕೆರೆಯ ಆವರಣದಲ್ಲಿ ಸುರಿಯುತ್ತಾರೆ, ಬೆಂಕಿ ಹಚ್ಚುತ್ತಾರೆ ಎಂಬ ಸಂಶಯ ನಮಗೆ ಮೊದಲಿನಿಂದಲೂ ಇದೆ. ಅದಕ್ಕೆ, ಈಗ ಸಿಕ್ಕಿರುವ ಬೆಂಕಿ ಹೊತ್ತಿಸುವ ತ್ಯಾಜ್ಯ ಪುಷ್ಠಿ ನೀಡುತ್ತಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆರೆಯ ಆವರಣ ಬಹಳ ವಿಸ್ತಾರವಾಗಿದೆ. ಇಲ್ಲಿ ಮಾರ್ಷಲ್‌ಗಳು ಕೆರೆ ಸುತ್ತಲೂ ಗಸ್ತು ತಿರುಗಲು ದಾರಿಯೂ ಇಲ್ಲ. ಕೆರೆಯಂಗಳದಲ್ಲಿ ಕಸ ಸುರಿಯಲು ಯಾರಾದರೂ ಬಂದರೆ, ಆ ಕುರಿತುಸುತ್ತಮುತ್ತಲಿನ ಎತ್ತರದ ಅಪಾರ್ಟ್‌ಮೆಂಟ್‌ಗಳಲ್ಲಿನ ನಿವಾಸಿಗಳು ಮಾರ್ಷಲ್‌ಗಳಿಗೆ ಮಾಹಿತಿ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಕೆರೆಯ ಸಮೀಪದ ಹರಯಾನ ವಸತಿ ಸಮುಚ್ಛಯದ ಕಾಲುವೆ ಬಳಿ ಸೋಮವಾರ ಬೆಳಿಗ್ಗೆ 5.30ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತ್ತು. ‘ಬೆಂಕಿ ಕಾಣಿಸಿಕೊಂಡ ಪ್ರದೇಶವು ಕೆರೆಯ ಮೀಸಲು ಪ್ರದೇಶದಿಂದ ಹೊರಗಿದೆ’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT