ಸಿ.ಎ ನಿವೇಶನದಲ್ಲಿ ಕಟ್ಟಡ: ಖಾತಾ ಕೊಟ್ಟ ಪಾಲಿಕೆ

7
ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ತನಿಖೆಯಿಂದ ಬಹಿರಂಗ

ಸಿ.ಎ ನಿವೇಶನದಲ್ಲಿ ಕಟ್ಟಡ: ಖಾತಾ ಕೊಟ್ಟ ಪಾಲಿಕೆ

Published:
Updated:
Deccan Herald

ಬೆಂಗಳೂರು: ದೊಮ್ಮಲೂರಿನ ಅಮರ ಜ್ಯೋತಿ ಹೌಸ್‌ ಬಿಲ್ಡಿಂಗ್‌ ಕೋ–ಅಪರೇಟಿವ್‌ ಸೊಸೈಟಿಯ ಸಾರ್ವಜನಿಕ ಮೂಲಸೌಕರ್ಯಕ್ಕೆಂದು ಮೀಸಲಿಟ್ಟ ನಿವೇಶನದಲ್ಲಿ (ಸಿ.ಎ ನಿವೇಶನ) ಕಟ್ಟಡ ಕಟ್ಟಲು ಬಿಬಿಎಂಪಿಯೇ ಕಾನೂನುಬಾಹಿರವಾಗಿ ಖಾತಾ ಮಾಡಿಕೊಟ್ಟಿರುವುದು ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಸೊಸೈಟಿಯ ಕೋರಿಕೆ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ಸರ್ವೆ ಸಂಖ್ಯೆ 68/1 ಮತ್ತು 68/2ರಲ್ಲಿದ್ದ 4.05 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ನೋಟಿಫೈ ಮಾಡಿತ್ತು. ಪರಿಹಾರ ಮೊತ್ತವನ್ನೂ ಪಾವತಿಸಿತ್ತು. ಜಮೀನಿನ 68/2ರಲ್ಲಿದ್ದ 18 ಗುಂಟೆ ಜಾಗವನ್ನು ಉದ್ಯಾನ ಮತ್ತು ರಸ್ತೆಗಾಗಿ ಸಿ.ಎ ನಿವೇಶನ ಎಂದು ಗುರುತಿಸಿತ್ತು.

ದೊಮ್ಮಲೂರಿನ ನಿವಾಸಿ ಬಿ.ಶಿವಶಂಕರ್‌, ‘ಡೆವಲಪರ್‌ ಆಗಿರುವ ಸುನೀಲ್‌ ಗುಪ್ತಾ ಎಂಬುವರು 18 ಗುಂಟೆಯ ಸಿ.ಎ ನಿವೇಶನದಲ್ಲಿ ಕಟ್ಟಡ ಕಟ್ಟಲು ಖಾತಾ ಮಾಡಿಸಿಕೊಂಡಿದ್ದಾರೆ. ನಿವೇಶನವು ಸರ್ವೆ ಸಂಖ್ಯೆ 68/2ರಲ್ಲಿದ್ದರೂ, ಅದು 68/1ರಲ್ಲಿದೆ ಎಂದು ಬಿಬಿಎಂಪಿಗೆ ಸುಳ್ಳು ದಾಖಲೆ ಸಲ್ಲಿಸಿದ್ದಾರೆ’ ಎಂದು ಎಸಿಬಿಗೆ ದೂರು ನೀಡಿದ್ದರು.

ಮೂಲ ಮಾಲೀಕರ ಕೋರಿಕೆ ಮೇರೆಗೆ 68/1ರಲ್ಲಿನ 1.12 ಎಕರೆ ಜಾಗವನ್ನು ಸರ್ಕಾರ ಸ್ವಾಧೀನದಿಂದ ಆರಂಭದಲ್ಲಿ ಹೊರಗಿಟ್ಟಿತ್ತು ಎಂದು ದಾಖಲೆಗಳು ಹೇಳುತ್ತವೆ. ನಂತರ, 1996ರಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ(ಎಸ್ಎಲ್‌ಎಒ) ಇದೇ ಸರ್ವೇಯ 38 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದರು. ಗುರಮ್ಮ ಎಂಬುವರು 2005ರಲ್ಲಿ ಇದೇ ಸರ್ವೇ ಸಂಖ್ಯೆಯ 24 ಗುಂಟೆ ಜಾಗಕ್ಕೆ ತಮ್ಮ ಹೆಸರಿನಲ್ಲಿ ಖಾತಾ ಮಾಡಿಸಿಕೊಳ್ಳಲು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಆಗ, ಪಾಲಿಕೆ ಕಂದಾಯ ಅಧಿಕಾರಿಗಳು ಭೂಸ್ವಾಧೀನ ಅಧಿಕಾರಿಯಿಂದ ಅಭಿಪ್ರಾಯ ಕೇಳಿದಾಗ,‘ಈ ಜಾಗವನ್ನು ಸ್ವಾಧೀನಪಡಿಸಿಕೊಂಡು ಸೊಸೈಟಿಗೆ ಹಸ್ತಾಂತರಿಸಲಾಗಿದೆ’ ಎಂದು ಎಸ್ಎಲ್‌ಎಒ ಪ್ರತಿಕ್ರಿಯಿಸಿದ್ದರು.

‘ಭೂಸ್ವಾಧೀನ ಅಧಿಕಾರಿಯಿಂದ ಎರಡನೇ ಬಾರಿಗೆ ಅಭಿಪ್ರಾಯ ಕೇಳುವ ನೆಪದಲ್ಲಿ, ಪಾಲಿಕೆ ಅಧಿಕಾರಿಗಳು ಜಮೀನು ಸ್ವಾಧೀನಗೊಂಡಿಲ್ಲ ಎಂಬ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ವಾಸ್ತವಾಂಶವನ್ನು ಮುಚ್ಚಿಟ್ಟು, ಸಿ.ಎ ನಿವೇಶನ 68/2ರಲ್ಲಿದೆ ಎಂದು ಕೊಟ್ಟಿ ದಾಖಲೆ ತಯಾರಿಸಿದ್ದಾರೆ. ಈ ಮೂಲಕ ಗುರಮ್ಮ ಅವರಿಗೆ 2006ರಲ್ಲಿ ಖಾತಾ ಮಾಡಿಕೊಟ್ಟಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಗುರಮ್ಮ ಖಾತಾ ಮಂಜೂರು ಆಗುವ ಮೊದಲೇ ಸುನೀಲ್‌ ಗುಪ್ತಾ ಎಂಬುವರ ಪತ್ನಿಗೆ ಈ ಜಾಗವನ್ನು ₹ 5.22 ಕೋಟಿಗೆ ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಿದರು. ಹಾಗಾಗಿ, ಜಮೀನು 2007ರ ವೇಳೆಗೆ ಸುನೀಲ್‌ ಗುಪ್ತಾ ಮತ್ತು ಅವರ ಪತ್ನಿಯ ಹೆಸರಿಗೆ ಆಗಿತ್ತು.

ಶಿವಶಂಕರ್‌ ದೂರಿನಿಂದ ಎಚ್ಚೆತ್ತುಕೊಂಡಿರುವ ಪಾಲಿಕೆಯು ಡೆವಲಪರ್‌ಗೆ ಕಟ್ಟಡ ಕಾಮಗಾರಿ ಮುಂದುವರಿಸದಂತೆ ಸೂಚಿಸಿದೆ. ತನಿಖೆಗಾಗಿ ಜಾಗದ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಹೇಳಿದೆ. ಈ ಕುರಿತು ಸ್ಪಷ್ಟೀಕರಣ ಪಡೆಯಲು ಪಾಲಿಕೆಯ ಪೂರ್ವ ವಲಯದ ಜಂಟಿ ಆಯುಕ್ತರು ಸಂಪರ್ಕಕ್ಕೆ ಸಿಗಲಿಲ್ಲ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !