ಕಟ್ಟಡ ಕುಸಿತ ಕಾರ್ಮಿಕ ಸಾವು

7
ಪಕ್ಕದ ಜಾಗದಲ್ಲಿ ಪಾಯ ಅಗೆದಿದ್ದಕ್ಕೆ ಅವಘಡ * ಮಾಲೀಕನ ವಿರುದ್ಧ ಬಿಬಿಎಂಪಿ ಅಧಿಕಾರಿಗಳಿಂದ ದೂರು

ಕಟ್ಟಡ ಕುಸಿತ ಕಾರ್ಮಿಕ ಸಾವು

Published:
Updated:
Deccan Herald

ಬೆಂಗಳೂರು: ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದ ‘ಸಾಯಿ ಗ್ರ್ಯಾಂಡ್’ ಅಪಾರ್ಟ್‌ಮೆಂಟ್ ಕಟ್ಟಡ ಶನಿವಾರ ಸಂಜೆ ದಿಢೀರ್ ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿ ಕಾರ್ಮಿಕ ಸುಫೇಲ್‌ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಮಾರ್ ಎಂಬುವರಿಗೆ ಸೇರಿದ್ದ 26X60 ಅಡಿ ಜಾಗದಲ್ಲಿ ಈ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿತ್ತು. ಅದರ ಪಕ್ಕದಲ್ಲಿ ಖಾಲಿ ಜಾಗವಿದೆ. ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಯಂತ್ರದಿಂದ ಪಾಯ ತೋಡಲಾಗಿತ್ತು. ಆಗ ಅಪಾರ್ಟ್‌ಮೆಂಟ್‌ ಕಟ್ಟಡದ ಪಾಯಕ್ಕೆ ಧಕ್ಕೆ ಆಗಿತ್ತು. ಅದನ್ನು ಸರಿಪಡಿಸಲೆಂದು ಖಾಲಿ ಜಾಗದ ಮಾಲೀಕ, ಕಾರ್ಮಿಕರಾದ ಸುಫೇಲ್‌ ಹಾಗೂ ಸಬೀರ್‌ ಅವರನ್ನು ಸ್ಥಳಕ್ಕೆ ಕರೆಸಿ ಕೆಲಸ ಮಾಡಿಸುತ್ತಿದ್ದರು. ಅದೇ ವೇಳೆಯೇ ಅವಘಡ ಸಂಭವಿಸಿದೆ.

ಸುಫೇಲ್‌, ಶಿವಮೊಗ್ಗ ಮೂಲದವರು ಎಂದು ತಿಳಿದುಬಂದಿದೆ. ಅವರ ಜೊತೆಯಲ್ಲಿದ್ದ ಸಬೀರ್, ಕಟ್ಟಡ ಬಲಕ್ಕೆ ವಾಲುತ್ತಿದ್ದ ವೇಳೆಯಲ್ಲೇ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ಕುಮಾರ್‌ ಅವರ ಕಟ್ಟಡದ ಮಹಡಿಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿತ್ತು. ಎಲೆಕ್ಟ್ರಿಕ್‌ ಮತ್ತು ಸುಣ್ಣ–ಬಣ್ಣ ಬಳಿಯುವ ಕೆಲಸ ಮಾತ್ರ ಬಾಕಿಯಿತ್ತು.

‘ಸಂಜೆ 4.40ಕ್ಕೆ ಜೋರಾದ ಸದ್ದು ಕೇಳಿ ಮನೆಯಿಂದ ಹೊರಬಂದೆ. ಕಟ್ಟಡ ಕುಸಿದು ಬಿದ್ದಿತ್ತು. ದಟ್ಟವಾಗಿ ದೂಳು ಎದ್ದಿತ್ತು’ ಎಂದು ಸ್ಥಳೀಯರಾದ ಮಹೇಶ್‌ ತಿಳಿಸಿದರು.

ಅವಘಡದ ಮಾಹಿತಿ ಸಿಕ್ಕ ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ, ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೃತದೇಹವನ್ನು ಹೊರತೆಗೆದರು.

‘ಖಾಲಿ ಜಾಗದ ಮಾಲೀಕ ನಡೆಸುತ್ತಿದ್ದ ಪಾಯದ ಕಾಮಗಾರಿಯಿಂದಲೇ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡ ಕುಸಿದಿದೆ. ಆತ ಈಗ ಪರಾರಿಯಾಗಿದ್ದಾನೆ. ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ ಡಾ.ವಿಶ್ವನಾಥ್‌ ತಿಳಿಸಿದರು.

‘ಕುಸಿದಿರುವ ಕಟ್ಟಡ ನಿಯಮ ಅನುಸಾರವೇ ಕಟ್ಟಿದ್ದಾರೆ. ವಾಸ್ತು ಕಾರಣಕ್ಕೆ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡಿದ್ದಾರೆ’ ಎಂದರು.

ಮಾಲೀಕ ಕುಮಾರ,‘ನನ್ನದೇನು ತಪ್ಪಿಲ್ಲ. ಎರಡು ಅಡಿ ಜಾಗ ಬಿಡದೆ, ಪಕ್ಕದ ಜಾಗದವನೇ ಪಾಯ ತೊಡಿ, ನಮ್ಮ ಕಟ್ಟಡಕ್ಕೆ ಹಾನಿ ಮಾಡಿದ. ಅದನ್ನು ಸರಿಪಡಿಸಲು ಕಾರ್ಮಿಕರನ್ನು ಕರೆಯಿಸಿದ್ದು ನಮಗೂ ಗೊತ್ತಿರಲಿಲ್ಲ. ಇದೆಲ್ಲ ಅನಾಹುತ ಆದ ಮೇಲೆಯೇ ನಮಗೆ ತಿಳಿಯಿತು. ಪ್ರತಿ ಅಂತಸ್ತಿನಲ್ಲಿ 3 ಬಿಎಚ್‌ಕೆಯ ಫ್ಲ್ಯಾಟ್‌ ಇರುವ ಈ ಕಟ್ಟಡ ನಿರ್ಮಾಣಕ್ಕೆ ₹ 1 ಕೋಟಿ ವೆಚ್ಚ ಮಾಡಿದ್ದೆ’ ಎಂದು ಹೇಳಿದರು.

ಪಕ್ಕದ ರುದ್ರಾಕ್ಷಿಗೂ ಧಕ್ಕೆ: ಕಟ್ಟಡ ಕುಸಿತದಿಂದ ಖಾಲಿ ಜಾಗದ ಪಕ್ಕದಲ್ಲಿರುವ ರುದ್ರಾಕ್ಷಿ ಅಪಾರ್ಟ್‌ಮೆಂಟ್‌ಗೂ ಧಕ್ಕೆ ಆಗಿದೆ. ಅದರಲ್ಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರ ಮಾಡಲಾಗಿದೆ.

ಅಪಾರ್ಟ್‌ಮೆಂಟ್‌ ಮುಂದಿನ ಟ್ರಾನ್ಸ್‌ಫಾರ್ಮರ್‌ ಮೇಲೆ ಬಿದ್ದ ಕಟ್ಟಡದ ಗೋಡೆಗಳು ತಾಗಿ ಹಾನಿ ಆಗಿದೆ. ಇದರಿಂದ ಕೆಲಕಾಲ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. 

ಬಿದ್ದ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ ದೀಪಾವಳಿ ರಜೆಗೆಂದು ಊರಿಗೆ ಹೋಗಿದ್ದರು. ಹೀಗಾಗಿ ಕಟ್ಟಡದಲ್ಲಿ ಯಾರೂ ಇರಲಿಲ್ಲ.

**

ಪಕ್ಕದ ರುದ್ರಾಕ್ಷಿಗೂ ಧಕ್ಕೆ

ಕಟ್ಟಡ ಕುಸಿತದಿಂದ ಖಾಲಿ ಜಾಗದ ಪಕ್ಕದಲ್ಲಿರುವ ರುದ್ರಾಕ್ಷಿ ಅಪಾರ್ಟ್‌ಮೆಂಟ್‌ಗೂ ಧಕ್ಕೆ ಆಗಿದೆ. ಅದರಲ್ಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರ ಮಾಡಲಾಗಿದೆ.

ಅಪಾರ್ಟ್‌ಮೆಂಟ್‌ ಮುಂದಿನ ಟ್ರಾನ್ಸ್‌ಫಾರ್ಮರ್‌ಗೂ ಬಿದ್ದ ಕಟ್ಟಡದ ಗೋಡೆಗಳು ತಾಗಿ ಹಾನಿ ಆಗಿದೆ. ಇದರಿಂದ ಕೆಲಕಾಲ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. 

ಬಿದ್ದ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ ದೀಪಾವಳಿ ರಜೆಗೆಂದು ಊರಿಗೆ ಹೋಗಿದ್ದರು. ಹೀಗಾಗಿ ಕಟ್ಟಡದಲ್ಲಿ ಯಾರೂ ಇರಲಿಲ್ಲ.

**

ಅವಘಡದ ಕುರಿತು ತನಿಖೆ ನಡೆಸುತ್ತೇವೆ. ಖಾಲಿ ಜಾಗದ ಮಾಲೀಕನದ್ದೇ ತಪ್ಪು ಎಂದು ಸಾಬೀತಾದರೆ, ಆತನಿಂದಲೇ ಮೃತರ ಕುಟುಂಬಕ್ಕೆ ಪರಿಹಾರ ಧನ ಕೊಡಿಸುತ್ತೇವೆ. 
– ಗಂಗಾಬಿಕೆ, ಮೇಯರ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !