ಗುರುವಾರ , ಏಪ್ರಿಲ್ 22, 2021
28 °C
ಠಾಣೆಯಲ್ಲೇ ಸಿಗುತ್ತಿದೆ ಜಾಮೀನು lಗಂಭೀರ ಪ್ರಕರಣಗಳಲ್ಲಿ ಮಾತ್ರ ನಿರಾಕರಣೆ

ಕಟ್ಟಡ ದುರಂತ: ಮಾಲೀಕರಿಗೆ ಆಗುತ್ತಿಲ್ಲ ಶಿಕ್ಷೆ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಹುತೇಕ ಕಟ್ಟಡ ದುರಂತ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುತ್ತಿಲ್ಲ. ಆರೋಪಿಗಳಿಗೆ ಪೊಲೀಸ್ ಠಾಣೆಗಳಲ್ಲೇ ಜಾಮೀನು ಮಂಜೂರಾಗುತ್ತಿದೆ. ಇನ್ನು ಕೆಲ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ‘ಶ್ಯೂರಿಟಿ’ ಮೇಲೆ ಷರತ್ತುಬದ್ಧ ಜಾಮೀನು ಸಿಗುತ್ತಿದೆ. ಬೆರಳೆಣಿಕೆ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತಗೊಳ್ಳುತ್ತಿವೆ.

ತೀವ್ರಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಗಳ ಸಂಖ್ಯೆ ಹೆಚ್ಚುತ್ತಿದ್ದು, ಕಟ್ಟಡ ದುರಂತಗಳೂ ಮೇಲಿಂದ ಮೇಲೆ ಸಂಭವಿಸುತ್ತಿವೆ. ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಫ್ಲ್ಯಾಟ್‌ ಖರೀದಿಸಿದವರು, ನಿರ್ಗತಿಕರಾಗುತ್ತಿದ್ದಾರೆ.

‘ಕಟ್ಟಡ ದುರಂತದಲ್ಲಿ ಜನರು ಪ್ರಾಣ ಕಳೆದುಕೊಂಡರೂ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಕಾನೂನು ಬಿಗಿಗೊಳಿಸಬೇಕಾದ ಅಗತ್ಯವಿದೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕಟ್ಟಡ ದುರಂತದ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ‘ನಿರ್ಲಕ್ಷ್ಯದಿಂದ ಸಾವು’ (ಐಪಿಸಿ 304ಎ) ಆರೋಪದಡಿ ಎಫ್‌ಐಆರ್ ದಾಖಲಾಗುತ್ತಿವೆ. ಐಪಿಸಿ 304 ಎ ಸೆಕ್ಷನ್‌ ಅಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ಮಂಜೂರು ಮಾಡಲು ಅವಕಾಶವಿದೆ. ಯಾರಾದರೂ ಶ್ಯೂರಿಟಿ ನೀಡಿದರೆ ಪೊಲೀಸರು ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆಯೇ ಬಿಟ್ಟು ಕಳುಹಿಸುತ್ತಿದ್ದಾರೆ. ಶ್ಯೂರಿಟಿ ನೀಡಲು ಯಾರೂ ಇಲ್ಲದಿದ್ದರೆ ಮಾತ್ರ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಗುತ್ತದೆ. ಹಳೇ ಪ್ರಕರಣಗಳನ್ನು ಗಮನಿಸಿದರೆ, ನ್ಯಾಯಾಲಯದಲ್ಲೂ ಬಹುತೇಕ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

ಸೆಂಟ್ರಿಂಗ್ ಕುಸಿತ ಪ್ರಕರಣದಲ್ಲಿ ಚಾರ್ಜ್‌ ಶೀಟ್‌: 2019ರ ಏಪ್ರಿಲ್ 5ರಂದು ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿ ಪಾರ್ಕಿಂಗ್ ಕಟ್ಟಡದ ಸೆಂಟ್ರಿಂಗ್‌ ಕುಸಿದು ಕಾರ್ಮಿಕರಾದ ಬಿಹಾರದ ರಾಕೇಶ್ (21) ಹಾಗೂ ಪಶ್ಚಿಮ ಬಂಗಾಳದ ರಾಹುಲ್ ಗೋಸ್ವಾಮಿ (19) ಮೃತಪಟ್ಟಿದ್ದರು. 12 ಕಾರ್ಮಿಕರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ.

‘ನಿರ್ಲಕ್ಷ್ಯದಿಂದ ಸಾವು, ಸುರಕ್ಷತೆಗೆ ಧಕ್ಕೆ ಹಾಗೂ ನಿರ್ಲಕ್ಷ್ಯ ಆರೋಪದಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಹಾಗಾಗಿ ಬಂಧಿತರಿಗೆ ಠಾಣೆಯಲ್ಲೇ ಜಾಮೀನು ಸಿಕ್ಕಿತು’ ಎಂದು ಆರ್‌.ಎಂ.ಸಿ. ಯಾರ್ಡ್‌ ಪೊಲೀಸರು ಹೇಳಿದರು.

ಕಟ್ಟಡ ದುರಂತವು ಗಂಭೀರವಾಗಿದ್ದರೆ ಮಾತ್ರ ಆರೋಪಿಗಳ ವಿರುದ್ಧ ‘ಸಾವು ಸಂಭವಿಸುವ ಪರಿಜ್ಞಾನದಿಂದ ಎಸಗಿದ ಕೃತ್ಯ’ (ಐಪಿಸಿ 304) ಆರೋಪದಡಿ ಎಫ್‌ಐಆರ್‌ ದಾಖಲಿಸಿ ಕೊಳ್ಳಲಾಗುತ್ತದೆ. ಧಾರವಾಡದಲ್ಲಿ ಕೆಲ ತಿಂಗಳ ಹಿಂದೆ ಸಂಭವಿಸಿದ್ದ ಕಟ್ಟಡ ದುರಂತ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಐಪಿಸಿ 304ರಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣದ ಬಹುತೇಕ ಆರೋಪಿಗಳಿಗೆ ಇನ್ನೂ ಜಾಮೀನು ಸಿಕ್ಕಿಲ್ಲ.

2018ರ ಡಿಸೆಂಬರ್ 13ರಂದು ಕಾಡುಗೋಡಿ ಸಮೀಪದ ಸೀಗೆ ಹಳ್ಳಿಯ ಆಶ್ರಮ ರಸ್ತೆಯಲ್ಲಿರುವ ‘ಹೋಲಿಸೋಲ್’ ಕಂಪನಿ ಕಟ್ಟಡ ದುರಂತದಲ್ಲಿ ಒಡಿಶಾದ ಮೂವರು ಕಾರ್ಮಿಕರು ಅಸುನೀಗಿದ್ದರು.

ಈ ಪ್ರಕರಣದಲ್ಲೂ ಐಪಿಸಿ 304ರ ಅಡಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಗೆ ಆರಂಭದಲ್ಲಿ ಜಾಮೀನು ಸಿಕ್ಕಿರಲಿಲ್ಲ. ಪೊಲೀಸರು, ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕವೇ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. 

‘ಈ ದುರಂತ ಸಂಭವಿಸಬಹುದು ಎಂಬುದು ಆರೋಪಿಗಳಿಗೆ ಮೊದಲೇ ಗೊತ್ತಿತ್ತು. ಹೀಗಾಗಿಯೇ ಐಪಿಸಿ 304 ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು’ ಎಂದು ಕಾಡುಗೋಡಿ ಪೊಲೀಸರು ಹೇಳಿದರು.

ಭ್ರಷ್ಟಾಚಾರ ತಡೆ ಕಾಯ್ದೆ ಬಳಸುತ್ತಿಲ್ಲ’

‘ಅಪಾಯಕಾರಿ ಕಟ್ಟಡಗಳು ತಲೆ ಎತ್ತದಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಮೇಲಿರುತ್ತದೆ. ಅವರು ಕರ್ತವ್ಯಲೋಪ ಎಸಗಿದರೆ ಇಂಥ ದುರಂತಗಳು ಸಂಭವಿಸುತ್ತವೆ’ ಎಂದು ಹೆಸರು ಹೇಳಲಿಚ್ಛಿಸದ ಪಬ್ಲಿಕ್ ಪ್ರಾಸಿಕ್ಯೂಟರ್ ಒಬ್ಬರು ಹೇಳಿದರು.

‘ಬೆಂಗಳೂರಿನಲ್ಲಿ ಸಂಭವಿಸಿರುವ ಕಟ್ಟಡ ದುರಂತ ಪ್ರಕರಣಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ‘ಭ್ರಷ್ಟಾಚಾರ ತಡೆ ಕಾಯ್ದೆ’ ಅಡಿ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ. ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ಬಾರಿ ಸಲಹೆ ನೀಡಿದ್ದೇವೆ’ ಎಂದರು.

‘ಕಟ್ಟಡ ದುರಂತ ಪ್ರಕರಣಗಳಲ್ಲಿ, ಅಧಿಕಾರಿ ಲಂಚ ಪಡೆದು ಕಟ್ಟಡ ಯೋಜನೆ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದರೆ ಅಥವಾ ನಿರ್ಮಾಣ ಹಂತದಲ್ಲೇ ನಿಯಮ ಉಲ್ಲಂಘನೆ ತಡೆಯದಿದ್ದರೆ ‘ಭ್ರಷ್ಟಾಚಾರ ತಡೆ ಕಾಯ್ದೆ’ ಕಲಂ 7(ಎ) ಅಡಿ ಪ್ರಕರಣ ದಾಖಲಿಸಿಕೊಳ್ಳಬಹುದು. ಈ ಆರೋಪ ಸಾಬೀತಾದರೆ ಅಧಿಕಾರಿಗೂ ಶಿಕ್ಷೆ ಆಗಲಿದೆ. ಪೊಲೀಸರು ಈ ಕಾಯ್ದೆ ಅಡಿ ಪ್ರಕರಣ ದಾಖಲಿಸುತ್ತಿಲ್ಲ’ ಎಂದು ಮಾಹಿತಿ ನೀಡಿದರು. 

‘ಕಟ್ಟಡ ದುರಂತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾದರೆ ಕಠಿಣ ಸ್ವರೂಪದ ಕಾನೂನಿನ ಅಗತ್ಯವಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಸಭೆಯಲ್ಲೂ ಈ ಬಗ್ಗೆ ಹಲವು ಬಾರಿ ಚರ್ಚಿಸಲಾಗಿದೆ’ ಎಂದು ಹೇಳಿದರು.  

ಐಪಿಸಿ 304; 304(ಎ) 

* ಅಪಾಯ ಸಂಭವಿಸಬಹುದು ಎಂಬ ಪರಿಜ್ಞಾನವಿದ್ದೂ, ತಡೆಯಲು ಕ್ರಮ ಕೈಗೊಳ್ಳದೆ ಉಂಟಾದ ಸಾವು; ನಿರ್ಲಕ್ಷ್ಯದಿಂದ ಉಂಟಾದ ಸಾವು 

* ಜಾಮೀನುರಹಿತ ಆರೋಪ; ಜಾಮೀನುಸಹಿತ ಆರೋಪ

* ಗರಿಷ್ಠ 7 ವರ್ಷ ಜೈಲು ಶಿಕ್ಷೆ; ಗರಿಷ್ಠ 2 ವರ್ಷ ಜೈಲು ಶಿಕ್ಷೆ 

***

ರಾಜ್ಯದಾದ್ಯಂತ ಐಪಿಸಿ 304(ಎ) ಅಡಿ ದಾಖಲಾದ ಪ್ರಕರಣಗಳು

(ಅಪಘಾತ, ಬ್ರಿಡ್ಜ್‌, ಕಟ್ಟಡ ಕುಸಿತ, ವಿದ್ಯುತ್ ಶಾಕ್, ಅಗ್ನಿ ದುರಂತ, ಇತರೆ  ಅವಘಡಗಳು)

ವರ್ಷ; ಪ್ರಕರಣ ಸಂಖ್ಯೆ 

2017;10,194

2018;10;558

2019(ಮೇವರೆಗೆ);4,847 

***

ನಗರದಲ್ಲಿ ಇತ್ತೀಚಿನ ದುರಂತಗಳು 

2018ರ ಜ.18: ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕ ಶಬರೀಷ್‌ (36) ಮೃತಪಟ್ಟರು.

ಫೆ.15: ಸರ್ಜಾಪುರ ರಸ್ತೆಯ ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‍ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಉತ್ತರ ಪ್ರದೇಶದ ಗೋರಖ್‍ಪುರದ ಮೂವರು ಕಾರ್ಮಿಕರು ಮೃತಪಟ್ಟರು.

ಅ. 24: ಜಕ್ಕೂರು ಲೇಔಟ್‌ನಲ್ಲಿ ಕಟ್ಟಡದ ಗುತ್ತಿಗೆದಾರ ಶಿಡ್ಲಘಟ್ಟದ ಮಧುಸೂದನ್ (24) ಮೃತಪಟ್ಟರು.

ನ.10: ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದ ‘ಸಾಯಿ ಗ್ರ್ಯಾಂಡ್’ ಅಪಾರ್ಟ್‌ಮೆಂಟ್ ಸಮುಚ್ಚಯದ ಕಟ್ಟಡ ಕುಸಿದು ಸುಫೇಲ್‌ ಮೃತಪಟ್ಟರು.

ಡಿ. 6: ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟರು.

2019ರ ಜೂನ್ 17: ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್‍ನಲ್ಲಿ (ಹೆಬ್ಬಾಳ ವ್ಯಾಲಿ ವಿಭಾಗ) ನಿರ್ಮಾಣ ಹಂತದ ತ್ಯಾಜ್ಯ ನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ಸೆಂಟ್ರಿಂಗ್ ಕುಸಿದುಬಿದ್ದು ಎಂಜಿನಿಯರ್‌ಗಳಿಬ್ಬರು ಸೇರಿದಂತೆ ಮೂವರು ಮೃತಪಟ್ಟಿದ್ದರು. 

ಜುಲೈ 10: ಪುಲಿಕೇಶಿನಗರ ಸಮೀಪದ ಕಾಕ್ಸ್‌ ಟೌನ್‌ನಲ್ಲಿರುವ ಎರಡು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಬೇಸ್‌ಮೆಂಟ್‌ ಕುಸಿದು ಅವಶೇಷಗಳಡಿ ಸಿಲುಕಿ ದಂಪತಿ ಸೇರಿ ಐವರು ದುರ್ಮರಣಕ್ಕೀಡಾಗಿದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು