ಬದುಕು ಕಟ್ಟಿಕೊಟ್ಟ ‘ಹರಾಜು ಕಟ್ಟೆ’ಯನ್ನೇ ಕೆಡವಿದ್ದರು!

ಗುರುವಾರ , ಏಪ್ರಿಲ್ 25, 2019
31 °C
ನಮ್ಮನ್ನು ಬೀದಿಪಾಲು ಮಾಡಿ ಕಟ್ಟಡ ನಿರ್ಮಿಸುತ್ತಿದ್ದರು: ವರ್ತಕರ ಆರೋಪ

ಬದುಕು ಕಟ್ಟಿಕೊಟ್ಟ ‘ಹರಾಜು ಕಟ್ಟೆ’ಯನ್ನೇ ಕೆಡವಿದ್ದರು!

Published:
Updated:
Prajavani

ಬೆಂಗಳೂರು: ‘1980ರಿಂದ ಈ ಜಾಗ ಈರುಳ್ಳಿ–ಆಲೂಗಡ್ಡೆಯ ‘ಹರಾಜು ಕಟ್ಟೆ’ಯಾಗಿತ್ತು. ನಿತ್ಯ ₹ 15 ಲಕ್ಷದವರೆಗೆ ವಹಿವಾಟು ನಡೆಯುತ್ತಿದ್ದ ಕಾರಣ ವರ್ತಕರು ಕೈತುಂಬ ಕಾಸು ನೋಡುತ್ತಿದ್ದರು. ಆದರೆ, ಪಾರ್ಕಿಂಗ್ ಕಟ್ಟಡ ನಿರ್ಮಿಸುವುದಾಗಿ ವರ್ಷದ ಹಿಂದೆ ಆ ಹರಾಜು ಕಟ್ಟೆಯನ್ನು ಧ್ವಂಸ ಮಾಡಿಬಿಟ್ಟರು. ಆ ನಂತರ ಬೀದಿಗೆ ಬಿದ್ದು ದಿಕ್ಕಾಪಾಲಾದ ನಮ್ಮ ಬದುಕು, ಇಂದಿಗೂ ಸುಧಾರಿಸಿಲ್ಲ...'

ಕಟ್ಟಡ ಕುಸಿತದ ಸ್ಥಳದಲ್ಲಿದ್ದ ವರ್ತಕರ ನೋವಿನ ನುಡಿಗಳಿವು. ‘ನಮ್ಮೆಲ್ಲರ ಶಾಪದಿಂದಲೇ ಇಂದು ಸೆಂಟ್ರಿಂಗ್ ಕುಸಿದಂತಿದೆ. ಆದರೆ, ಆ ಅಮಾಯಕ ಕಾರ್ಮಿಕರು ಸಾಯಬಾರದಿತ್ತು. ಅವರ ಸಾವಿಗೆ ಕಾರಣರಾದ ಎಪಿಎಂಸಿಯ ಯಾವೊಬ್ಬ ಅಧಿಕಾರಿಯನ್ನೂ ಪೊಲೀಸರು ಸುಮ್ಮನೆ ಬಿಡಬಾರದು’ ಎಂದು ಕೆಲ ವರ್ತಕರು ಆಗ್ರಹಿಸಿದರು.

ಸಮರ ಸಾರಿದ್ದೆವು: ‘ಪಾರ್ಕಿಂಗ್ ಬೇಕೆಂದು ನಾವೆಂದೂ ಕೇಳಿರಲಿಲ್ಲ. ಎಪಿಎಂಸಿ ಅಧಿಕಾರಿಗಳು ಯಾರ ಅಪ್ಪಣೆಯನ್ನೂ ಕೇಳದೆ ತಮ್ಮ ಇಚ್ಛೆಯಂತೆ ನಡೆದುಕೊಂಡರು. ಅವರ ಈ ನಡೆ ವಿರುದ್ಧ ವರ್ತಕರೆಲ್ಲ ಸಮರ ಸಾರಿದ್ದೆವು. ಎಲ್ಲರೂ ಬಸ್‌ಗಳಲ್ಲಿ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ಕೊಡುವುದಕ್ಕೂ ಹೊರಟಿದ್ದೆವು. ಆದರೆ, ‘ಲೈಸೆನ್ಸ್ ರದ್ದುಪಡಿಸುತ್ತೇವೆ’ ಎಂದು ಬೆದರಿಸಿ ಬಾಯಿ ಮುಚ್ಚಿಸಿದ್ದರು.

‘ಪ್ರಜಾವಾಣಿ’ ಜತೆ ಮಾತನಾಡಿದ ವರ್ತಕರೊಬ್ಬರು, ‘ಪೂರ್ವಜರ ಕಾಲದಿಂದಲೂ ಮಾರುಕಟ್ಟೆಯೇ ನಮಗೆ ಜೀವನಾಧಾರ. ತರಗುಪೇಟೆಯಲ್ಲಿ ವಹಿವಾಟು ನಡೆಸುತ್ತಿದ್ದ ವರ್ತಕರನ್ನೆಲ್ಲ 80ರ ದಶಕದಲ್ಲಿ ಎಪಿಎಂಸಿಗೆ ಸ್ಥಳಾಂತರಿಸಿದರು. ರಸ್ತೆ ಬದಿಯೇ ಈ ಮಾರುಕಟ್ಟೆ ಇದ್ದುದ್ದರಿಂದ ಹೆಚ್ಚು ವಹಿವಾಟು ನಡೆಯುತ್ತಿತ್ತು. ಆದರೀಗ ಪಾರ್ಕಿಂಗ್‌ಗಾಗಿ ವರ್ತಕರನ್ನು ಮಾಕಳಿ ಬಳಿ ನಿರ್ಮಿಸಿರುವ ಹೊಸ ಮಾರುಕಟ್ಟೆಗೆ ಸ್ಥಳಾಂತರಿಸಿದ್ದಾರೆ’ ಎಂದರು.

ಇಲ್ಲೇ ಎಲ್ಲ, ಅಲ್ಲೇನೂ ಇಲ್ಲ: ‘ಮಾಕಳಿ ಮಾರುಕಟ್ಟೆ ನಗರದ ಹೊರವಲಯದಲ್ಲಿ ಇರುವುದರಿಂದ ಅಲ್ಲಿಗೆ ಯಾರೂ ಬರುವುದಿಲ್ಲ. ಶುಕ್ರವಾರದ ವಹಿವಾಟಿನ ವಿವರವನ್ನೇ ನೋಡಿ. ಈ ದಿನ ಯಶವಂತಪುರದ ಎಪಿಎಂಸಿಗೆ 36 ಸಾವಿರ ಮೂಟೆ ಈರುಳ್ಳಿ ಹಾಗೂ 19 ಸಾವಿರ ಮೂಟೆ ಆಲೂಗಡ್ಡೆ ಬಂದಿದೆ. ಆದರೆ, ಮಾಕಳಿ ಮಾರುಕಟ್ಟೆಗೆ ಈ ದಿನ ಬಂದಿರುವುದು ಕೇವಲ 2,143 ಮೂಟೆ ಈರುಳ್ಳಿ ಹಾಗೂ 116 ಮೂಟೆ ಆಲೂಗಡ್ಡೆ. ಈ ಪ್ರಮಾಣದಲ್ಲಿ ಕುಸಿತ ಕಂಡರೆ ವರ್ತಕರು ಬದುಕುವುದು ಹೇಗೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ, ಹರಾಜು ಕಟ್ಟೆಯನ್ನು ಧ್ವಂಸಗೊಳಿಸುವ ಅಗತ್ಯವೇನಿತ್ತು’ ಇಂದು ಇನ್ನೊಬ್ಬ ವರ್ತಕ ಆಕ್ರೋಶದಿಂದ ಪ್ರಶ್ನಿಸಿದರು.

ಮನವಿಗೆ ಸ್ಪಂದಿಸಲಿಲ್ಲ: ‘ಮಾರುಕಟ್ಟೆ ಆವರಣದಲ್ಲಿ ಬಹುಮಹಡಿ ಕಟ್ಟಡದ ಅವಶ್ಯಕತೆ ಇರಲಿಲ್ಲ. ಈ ಯೋಜನೆ ಬೇಡವೆಂದು ಎಪಿಎಂಸಿ ಅಧ್ಯಕ್ಷರಾಗಿದ್ದ ಶ್ರೀನಿವಾಸಮೂರ್ತಿ ಅವರಿಗೂ ಮನವಿ ಮಾಡಿದ್ದೆವು. ಆದರೆ, ತೀವ್ರ ವಿರೋಧದ ನಡುವೆಯೂ ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆಯದೆ ಕಾಮಗಾರಿ ಶುರು ಮಾಡಿದ್ದರು. ಕಳಪೆ ಕಾಮಗಾರಿ ಬಗ್ಗೆ ಮೊದಲಿನಿಂದಲೂ ಆರೋಪಗಳು ಕೇಳಿಬಂದಿದ್ದವು’ ಎಂದು ಎಪಿಎಂಸಿ ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯ್ ಹೇಳಿದರು.

**
ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತಗಳು

2018ರ ಜ.18: ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕ ಶಬರೀಷ್‌ (36) ಮೃತಪಟ್ಟರು.

ಫೆ.15: ಸರ್ಜಾಪುರ ರಸ್ತೆಯ ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‍ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಉತ್ತರ ಪ್ರದೇಶದ ಗೋರಖ್‍ಪುರದ ಮೂವರು ಕಾರ್ಮಿಕರು ಮೃತಪಟ್ಟರು.

ಅ.24: ಜಕ್ಕೂರು ಲೇಔಟ್‌ನಲ್ಲಿ ಕಟ್ಟಡದ ಗುತ್ತಿಗೆದಾರ ಶಿಡ್ಲಘಟ್ಟದ ಮಧುಸೂದನ್ (24) ಮೃತಪಟ್ಟರು.

ನ.10: ತ್ಯಾಗರಾಜನಗರದಲ್ಲಿ ನಿರ್ಮಾಣ ಹಂತದ ‘ಸಾಯಿ ಗ್ರ್ಯಾಂಡ್’ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದು ಸುಫೇಲ್‌ ಮೃತಪಟ್ಟರು.

ಡಿ. 6: ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟರು.

ಡಿ.13: ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಆಶ್ರಮ ರಸ್ತೆಯಲ್ಲಿರುವ ‘ಹೋಲಿಸೋಲ್’ ಕಂಪನಿ ಕಟ್ಟಡ ದುರಂತದಲ್ಲಿ ಒಡಿಶಾದ ಮೂವರು ಕಾರ್ಮಿಕರು ಅಸುನೀಗಿದರು.
**

‘ಐದು ನೋಟಿಸ್‌ಗಳಿಗೂ ಜಗ್ಗಲಿಲ್ಲ’

‘ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆದಿಲ್ಲವೆಂದು ಇದೇ ಜನವರಿಯಲ್ಲೇ ಗುತ್ತಿಗೆದಾರರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೆವು. ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಹಾಗೂ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಐದು ನೋಟಿಸ್‌ಗಳನ್ನೂ ಕಳುಹಿಸಿದ್ದೆವು. ಆದರೂ, ಅಕ್ರಮವಾಗಿ ಕಾಮಗಾರಿ ಮುಂದುವರಿಸಿದ್ದರು. ಈ ಸಂಬಂಧ ಇಲಾಖೆ ವತಿಯಿಂದಲೂ ಪ್ರತ್ಯೇಕ ದೂರು ಕೊಡಲಾಗುವುದು’ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ರೇವಣ್ಣ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !