ಮಾನಸಿಕ ಅಸ್ವಸ್ಥನ ಜೇಬಲ್ಲಿ 13 ಬುಲೆಟ್‌!

ಶುಕ್ರವಾರ, ಏಪ್ರಿಲ್ 26, 2019
24 °C
ಜೀವಂತ ಗುಂಡುಗಳ ಮೂಲ ಪತ್ತೆಗೆ ವಿಶೇಷ ತಂಡ

ಮಾನಸಿಕ ಅಸ್ವಸ್ಥನ ಜೇಬಲ್ಲಿ 13 ಬುಲೆಟ್‌!

Published:
Updated:

ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಎನ್ನಲಾದ ಮಹದೇವಸ್ವಾಮಿ (40) ಎಂಬುವರ ಪ್ಯಾಂಟ್ ಜೇಬಿನಲ್ಲಿ 0.22 ಎಂ.ಎಂನ 13 ಜೀವಂತ ಗುಂಡುಗಳು ಸಿಕ್ಕಿವೆ!

‘ಶನಿವಾರ ಮಧ್ಯಾಹ್ನದಿಂದ ಸಂಜೆ 6.30ರವರೆಗೂ ನಿಲ್ದಾಣದಲ್ಲೇ ತಿರುಗಾಡುತ್ತಿದ್ದ ಅವರನ್ನು, ಕೆಎಸ್‌ಆರ್‌ಟಿಸಿ ಭದ್ರತಾ ವಿಭಾಗದ ಸಿರಾಜ್ ಅಹಮದ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸಂಶಯದ ಮೇಲೆ ಬ್ಯಾಗ್ ಹಾಗೂ ಪ್ಯಾಂಟ್ ಜೇಬುಗಳನ್ನು ಪರಿಶೀಲಿಸಿದಾಗ ಗುಂಡುಗಳು ಪತ್ತೆಯಾಗಿದ್ದವು. ಕೂಡಲೇ ಬ್ಯಾಟರಾಯನಪುರ ಠಾಣೆಗೆ ದೂರು ಕೊಟ್ಟ ಅವರು, ಆ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.

‘ಮಹದೇವಸ್ವಾಮಿ ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದಾಗಿ ಕುಟುಂಬ ಸದಸ್ಯರು ಹೇಳಿದ್ದಾರೆ. ಚಿಕಿತ್ಸೆ ಕೊಡಿಸುತ್ತಿರುವುದಕ್ಕೆ ದಾಖಲೆಗಳನ್ನೂ ತೋರಿಸಿದ್ದಾರೆ. ಅವರಿಗೆ ಜೀವಂತ ಗುಂಡುಗಳು ಹೇಗೆ ಸಿಕ್ಕವು? ಯಾರು ಕೊಟ್ಟರು ಎಂಬುದು ಗೊತ್ತಾಗಬೇಕಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ತಿಳಿಸಿದರು.

ಅಣ್ಣ ಪೊಲೀಸ್: ಮಹದೇವಸ್ವಾಮಿ ಅವರ ಅಣ್ಣ ನಗರದ ಸಂಚಾರ ಠಾಣೆಯೊಂದರಲ್ಲಿ ಕಾನ್‌ಸ್ಟೆಬಲ್ ಆಗಿದ್ದಾರೆ. ‘ತಮ್ಮನ ಬಳಿ ಗುಂಡುಗಳು ಹೇಗೆ ಬಂದವು ಎಂಬುದು ನನಗೂ ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

‘ನಾನು ಮಹದೇಶ್ವರ ಬೆಟ್ಟಕ್ಕೆ ಹೋಗುತ್ತೇನೆ’ ಎಂದು ತಮ್ಮ ತಾಯಿ ಬಳಿ ಪದೇ ಪದೇ ಹೇಳುತ್ತಿದ್ದ ಮಹದೇವ
ಸ್ವಾಮಿ, ಫೆ.9ರಂದು ಯಾರಿಗೂ ಗೊತ್ತಾಗದಂತೆ ಮನೆಯಿಂದ ಹೊರಬಂದಿದ್ದರು. ಮಹದೇಶ್ವರ ಬೆಟ್ಟಕ್ಕೇ ಹೋಗಿರಬಹುದೆಂದು ಕುಟುಂಬ ಸದಸ್ಯರು ಅಲ್ಲಿಗೂ ಹೋಗಿ ಹುಡುಕಾಟ ನಡೆಸಿದ್ದರು. ಆದರೆ, ಮಹದೇವಸ್ವಾಮಿ ನಗರದಲ್ಲೇ ಸುತ್ತಾಡಿಕೊಂಡಿದ್ದರು.

ಬೆಸ್ಕಾಂ ಎಇಇ ಅಂತೆ: ‘ಮಹದೇವಸ್ವಾಮಿ ಬೆಸ್ಕಾಂನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಆಗಿದ್ದರಂತೆ. ಅವರ ಬ್ಯಾಗ್‌ನಲ್ಲಿ ಸಿಕ್ಕ ಚೀಟಿಯೊಂದರಲ್ಲಿ ಬೆಸ್ಕಾಂ ಅಧಿಕಾರಿಯೊಬ್ಬರ ಮೊಬೈಲ್ ಸಂಖ್ಯೆ ಇತ್ತು. ನಾನೇ ಅವರಿಗೆ ಕರೆ ಮಾಡಿ, ವಶಕ್ಕೆ ಪಡೆದಿರುವ ವಿಷಯವನ್ನು ತಿಳಿಸಿದ್ದೆ. ಆನಂತರ ಅವರು ಮಹದೇವಸ್ವಾಮಿ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದರು’ ಎಂದು ಸಿರಾಜ್ ಅಹಮದ್ ಹೇಳಿದರು. 

ಠಾಣೆಗೆ ಕರೆತಂದಾಗ ಮಹದೇವಸ್ವಾಮಿ ಯಾವುದಕ್ಕೂ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ಒಮ್ಮೆ ‘ನಾನು ಮಂಡ್ಯದವನು’ ಎಂದರೆ ಮತ್ತೊಮ್ಮೆ ‘ನನ್ನದು ಮೈಸೂರು’ ಎನ್ನುತ್ತಿದ್ದರು. ‘ಆ ಚೂರುಗಳು ತಿಪ್ಪೆಯಲ್ಲಿ ಸಿಕ್ಕವು. ನನ್ನ ಬ್ಯಾಗನ್ನು ಸುಮ್ಮನೆ ಕೊಟ್ಟುಬಿಡಿ’ ಎಂದು ಕಿರುಚಾಡಿದ್ದರು. ಅವರು ಮನೆಯಿಂದ ಕಾಣೆಯಾದ ನಂತರ ಯಾವ್ಯಾವ ರಸ್ತೆಗಳಲ್ಲಿ ಓಡಾಡಿದ್ದರೋ, ಆ ಎಲ್ಲ ರಸ್ತೆಗಳ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸುತ್ತಿದ್ದೇವೆ ಎಂದು ‍ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !