ದೂರುದಾರರ ಮನೆ ಬಾಗಿಲಿಗೇ ಚಿನ್ನ

7
ಬಸ್‌ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳ್ಳತನ; ದಂಪತಿ ಬಂಧನ

ದೂರುದಾರರ ಮನೆ ಬಾಗಿಲಿಗೇ ಚಿನ್ನ

Published:
Updated:

ಬೆಂಗಳೂರು: ಬಸ್‌ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನದ ಸರ ಹಾಗೂ ನಗದು ಕಳವು ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ಬಂಧಿಸಿರುವ ಮಹದೇವಪುರ ಪೊಲೀಸರು, ಆರೋಪಿಗಳಿಂದ ಜಪ್ತಿ ಮಾಡಿರುವ ಚಿನ್ನದ ಸರವನ್ನು ದೂರುದಾರರ ಮನೆ ಬಾಗಿಲಿಗೇ ತಲುಪಿಸಿದ್ದಾರೆ.

ಹೊಸಕೋಟೆಯ ಕೊಲ್ಲೂರಿನ ವೇಣುಗೋಪಾಲ್ ಹಾಗೂ ಆತನ ಪತ್ನಿ ಯಶೋದಾ ಬಂಧಿತರು. ಅವರಿಬ್ಬರ ಬಂಧನದಿಂದ 11 ಪ್ರಕರಣಗಳು ಪತ್ತೆಯಾಗಿದ್ದು, 500 ಗ್ರಾಂ ಚಿನ್ನದ ಆಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತಿದ್ದ ದಂಪತಿ, ಸಹ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನದ ಸರ ಹಾಗೂ ನಗದು ಕಳವು ಮಾಡುತ್ತಿದ್ದರು. ಈ ದಂಪತಿ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಅವರಿಂದ ಜಪ್ತಿ ಮಾಡಲಾದ ಚಿನ್ನದ ಆಭರಣಗಳನ್ನು ದೂರುದಾರರಿಗೆ ವಾಪಸ್‌ ಕೊಡುತ್ತಿದ್ದೇವೆ’ ಎಂದು ಮಹದೇವಪುರ ಪೊಲೀಸರು ಹೇಳಿದರು. 

ಕಳವು ನೆನಪಿಸಿದ ಪೊಲೀಸರು: ಕೆ.ಆರ್.ಪುರದ ಗಾಯತ್ರಿ ಬಡಾವಣೆ ನಿವಾಸಿ ಮಂಜುಳಾ ಎಂಬುವರ 50 ಗ್ರಾಂ ಚಿನ್ನದ ಸರವನ್ನು ದಂಪತಿ ಕಳವು ಮಾಡಿದ್ದರು. ಆ ಬಗ್ಗೆ ಮಹಿಳೆ ದೂರು ಸಹ ಕೊಟ್ಟಿರಲಿಲ್ಲ. ಆದರೆ, ಪೊಲೀಸರೇ ಮಂಜುಳಾರವರ ಮನೆಗೆ ಹೋಗಿ ಕಳವು ಬಗ್ಗೆ ನೆನಪಿಸಿ ಸರವನ್ನು ವಾಪಸ್‌ ಕೊಟ್ಟಿದ್ದಾರೆ.

‘ಆಗಸ್ಟ್ 20ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಂಜುಳಾ, ಟಿನ್‌ ಫ್ಯಾಕ್ಟರಿ ನಿಲ್ದಾಣದಿಂದ ಫಿನಿಕ್ಸ್‌ ಮಾಲ್‌ಗೆ ಹೋಗುವ ಬಿಎಂಟಿಸಿ ಬಸ್‌ ಹತ್ತಿದ್ದರು. ಸಿಂಗಯ್ಯಪಾಳ್ಯ ನಿಲ್ದಾಣದಲ್ಲಿ ಇಳಿದುಕೊಂಡು ಬ್ಯಾಗ್‌ ಗಮನಿಸಿದ್ದಾಗ ಜಿಪ್ ತೆರೆದಿದ್ದು ಗೊತ್ತಾಗಿತ್ತು. ಪರಿಶೀಲಿಸಿದಾಗ, ಚಿನ್ನದ ಸರ ಕಳುವಾಗಿದ್ದು ಗಮನಕ್ಕೆ ಬಂದಿತ್ತು. ಪ್ರಯಾಣದ ನಡುವೆಯೇ ಬ್ಯಾಗ್‌ನಲ್ಲಿದ್ದ ಸರ ಹಾಗೂ ಚುನಾವಣಾ ಗುರುತಿನ ಚೀಟಿಯನ್ನು ದಂಪತಿ ಕದ್ದಿದ್ದರು’ ಎಂದು ಪೊಲೀಸರು ಹೇಳಿದರು.

‘ಕಳವು ಬಗ್ಗೆ ಮಂಜುಳಾ ಯಾವುದೇ ದೂರು ನೀಡಿರಲಿಲ್ಲ. ಇತ್ತ ಬಂಧಿತ ದಂಪತಿಯ ಮನೆಯಲ್ಲಿ ಶೋಧ ನಡೆಸಲಾಗಿತ್ತು. ಅಲ್ಲಿಯೇ ಮಂಜುಳಾರ ಚುನಾವಣಾ ಗುರುತಿನ ಚೀಟಿ ಸಿಕ್ಕಿತ್ತು. ಅದೇ ಸುಳಿವು ಆಧರಿಸಿ ದೂರುದಾರರ ಮನೆಗೆ ಹೋಗಿ ವಿಷಯ ತಿಳಿಸಲಾಯಿತು. ನಂತರವೇ ಅವರಿಂದ ದೂರು ಪಡೆದು ಸರ ಹಿಂದಿರುಗಿಸಿದೆವು’ ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !