ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ದರ ಏರಿಕೆ: ಹೊಸ ಪ್ರಸ್ತಾವಕ್ಕೆ ಸೂಚನೆ

Last Updated 31 ಮೇ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕುಡಿಯುವ ನೀರಿನ ದರವನ್ನು ಶೇ 30ರಿಂದ ಶೇ 35ರಷ್ಟು ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವವನ್ನು ಜಲಮಂಡಳಿಯ ಆಡಳಿತ ಮಂಡಳಿ ಒಪ್ಪಿಲ್ಲ.‌ ಜನರಿಗೆ ಹೊರೆಯಾಗದಂತೆ ಹೊಸ ಪ್ರಸ್ತಾವ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಜೂನ್‌ 24ರಂದು ಆಡಳಿತ ಮಂಡಳಿ ಸಭೆ ಮತ್ತೆ ನಡೆಯಲಿದ್ದು, ದರ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

2013ರ ಜುಲೈನಲ್ಲಿ ನೀರಿನ ದರ ಪರಿಷ್ಕರಣೆಯಾಗಿತ್ತು. ಆಗ ಶೇ 270ರಷ್ಟು ದರ ಏರಿಕೆ ಮಾಡುವ ಮೂಲಕ ಮಂಡಳಿಯು ಬಳಕೆದಾರರಿಗೆ ಆಘಾತ ನೀಡಿತ್ತು. ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಸತಿಗೃಹಗಳು, ವಿಲ್ಲಾಗಳಿಗೆ ಮಾತ್ರ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಲಾಗಿತ್ತು.

ನೀರಿನ ಬಿಲ್‌ಗಳೇ ಮಂಡಳಿಗೆ ಪ್ರಮುಖ ಆದಾಯದ ಮೂಲಗಳಾಗಿವೆ. ಕೊಳವೆ ಮತ್ತು ಒಳಚರಂಡಿಗಳ ಜಾಲ ನಿರ್ಮಾಣ, ಕೊಳವೆಬಾವಿಗಳ ನಿರ್ವಹಣೆ, ವಿದ್ಯುತ್‌ ದರ ಸೇರಿದಂತೆ ಮಂಡಳಿಯ ಕಾರ್ಯಾಭಾರದ ಖರ್ಚುಗಳು ಹೆಚ್ಚಿವೆ. ಮಂಡಳಿಗೆ ಸದ್ಯ ತಿಂಗಳಿಗೆ ಸರಾಸರಿ ₹ 90 ಕೋಟಿ ವರಮಾನ ಸಂಗ್ರಹವಾಗುತ್ತಿದೆ.

ನೌಕರರ ವೇತನ, ವಿದ್ಯುತ್‌ ದರ, ಕಾರ್ಯಾಚರಣೆ ಹಾಗೂ ನಿರ್ವಹಣೆ ವೆಚ್ಚ, ಇಂಧನ ದರ ಏರಿಕೆ ಅಂಶಗಳನ್ನು ಪರಿಗಣಿಸಿ ಪ್ರತಿ ಮೂರು ವರ್ಷಕ್ಕೊಮ್ಮೆ ನೀರಿನ ದರ ಪರಿಷ್ಕರಣೆ ಮಾಡಲು ಮಂಡಳಿ ಇತ್ತೀಚೆಗೆ ತೀರ್ಮಾನಿಸಿದೆ.

ಪ್ರೋರೇಟಾ ಪರಿಷ್ಕರಣೆ: ಹೊಸದಾಗಿ ನಿರ್ಮಾಣವಾಗುವ ವಸತಿ ಕಟ್ಟಡ, ಅಪಾರ್ಟ್‌ಮೆಂಟ್‌, ವಸತಿ ಸಮುಚ್ಚಯ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲ ಮಾದರಿಯ ಕಟ್ಟಡಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಏಕ ಕಂತಿನಲ್ಲಿ ಪಾವತಿಸುವಂತಹ ಪ್ರೋರೇಟಾ ಶುಲ್ಕ ಪರಿಷ್ಕರಿಸಲು ಮಂಡಳಿ ತೀರ್ಮಾನಿಸಿದೆ.

1200 ಚದರ ಅಡಿ ಜಾಗದಲ್ಲಿ ಒಂದು ಮಹಡಿಗಿಂತ ಹೆಚ್ಚು ನಿರ್ಮಿಸುವ ಅಥವಾ ಒಟ್ಟಾರೆ ಕಟ್ಟಡದಲ್ಲಿ ಮೂರು ಅಡುಗೆ ಕೋಣೆಗಳಿದ್ದರೆ ಪ್ರತಿ ಚದರ ಮೀಟರ್‌ಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ₹250ರಿಂದ ₹400ಕ್ಕೆ ಹೆಚ್ಚಿಸಲಾಗುತ್ತದೆ. ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT