ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 3ರಷ್ಟು ಜಲ ಸೋರಿಕೆ ತಡೆಗೆ ₹545 ಕೋಟಿ

ನಗರಕ್ಕೆ ನಿತ್ಯ ಪೂರೈಕೆಯಾಗುತ್ತಿರುವುದು 140 ಕೋಟಿ ಲೀ ನೀರು l 88 ಕೋಟಿ ಲೀಟರ್ ಮಾತ್ರ ಲೆಕ್ಕಕ್ಕೆ
Last Updated 17 ಮಾರ್ಚ್ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ನಗರಕ್ಕೆ ಪೂರೈಕೆಯಾಗುವ ಕಾವೇರಿ ನೀರಿನ ಸೋರಿಕೆ ತಡೆಯಲು ಜಲಮಂಡಳಿ ಕಳೆದ ಒಂದು ವರ್ಷದಲ್ಲಿ ₹545.50 ಕೋಟಿ ಖರ್ಚು ಮಾಡಿದೆ. ಆದರೆ ಸೋರಿಕೆ ತಪ್ಪಿದ್ದು ಶೇ 3ರಷ್ಟು ಮಾತ್ರ.

ಮಂಡಳಿಯಿಂದ ಪ್ರತಿದಿನ ಸರಬರಾಜು ಆಗುತ್ತಿರುವ 140 ಕೋಟಿ ಲೀಟರ್‌ ಕಾವೇರಿ ನೀರಿನಲ್ಲಿ ಶೇ 40ರಷ್ಟು(56 ಕೋಟಿ ಲೀ.) ನೀರು 2017–18ನೇ ಸಾಲಿನಲ್ಲಿ ಸೋರಿಕೆಯಾಗುತ್ತಿತ್ತು. ಆ ಪ್ರಮಾಣ ಈಗ ಶೇ 37ಕ್ಕೆ (51.8 ಕೋಟಿ ಲೀ.) ಬಂದು ನಿಂತಿದೆ. ಹಾಗಾಗಿ ನಗರದ ಜನರಿಗೆಪ್ರತಿದಿನ 88.2 ಕೋಟಿ ಲೀ. ನೀರು ಮಾತ್ರ ತಲುಪುತ್ತಿದೆ.

ಜಲಮಂಡಳಿಯ ಪಶ್ಚಿಮ, ದಕ್ಷಿಣ ಮತ್ತು ಕೇಂದ್ರ ವಿಭಾಗಗಳಲ್ಲಿ ನೀರು ಸೋರಿಕೆ ತಡೆಗೆ ವಿಶೇಷ ಯೋಜನೆಗಳನ್ನು ಜಾರಿ ಮಾಡಲಾಗಿತ್ತು. ಅದಕ್ಕಾಗಿ ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ ( ಜೈಕಾ) ಆರ್ಥಿಕ ನೆರವನ್ನು ಹಾಗೂ ಸೂಡೊ ಸಂಸ್ಥೆಯಿಂದ ತಾಂತ್ರಿಕ ಸಹಕಾರವನ್ನು ಪಡೆಯಲಾಗಿತ್ತು.

ಹಳೆ ಕೊಳವೆ ಮಾರ್ಗದ ರಿಪೇರಿ ಮತ್ತು ಹೊಸ ಮಾರ್ಗ ಜೋಡಣೆಯಾದ ಪ್ರಮುಖ ಪ್ರದೇಶಗಳು

ಕೆ.ಆರ್‌.ಮಾರುಕಟ್ಟೆ, ಚಾಮರಾಜಪೇಟೆ, ಮಾವಳ್ಳಿ, ಶಂಕರಪುರ, ವಿ.ವಿ.ಪುರ, ವಿಠ್ಠಲ ನಗರ, ಚಿಕ್ಕಲಾಲ್‌ಬಾಗ್‌, ಅಶೋಕನಗರ, ಬಸವನಗುಡಿ, ಹೊಂಬೇಗೌಡ ನಗರ, ಜಯನಗರ 4ನೇ ಬ್ಲಾಕ್‌, ಜೆ.ಪಿ.ನಗರ 3ನೇ ಹಂತ, ಶಾಕಾಂಬರಿನಗರ, ತ್ಯಾಗರಾಜನಗರ, ಕಮ್ಮನಹಳ್ಳಿ, ಸುಮನಹಳ್ಳಿ, ಬಸವನಗುಡಿ, ಈಜೀಪುರ, ಜಕ್ಕಸಂದ್ರ, ಕೋರಮಂಗಲ, ಮಡಿವಾಳ, ಸುದ್ದಗುಂಟೆಪಾಳ್ಯ.

ಅಂಕಿ–ಅಂಶ

* ಹಳೆ ಕೊಳವೆಗಳ ದುರಸ್ತಿ

* ಹೊಸ ಕೊಳವೆ ಮಾರ್ಗಗಳ ಅಳವಡಿಕೆ

* ಜಿಪಿಆರ್‌ಎಸ್‌ ಮತ್ತು ಜಿಎಸ್‌ಎಂ ಟ್ರಾನ್ಸ್‌ಮೀಟರ್‌ ಆಧಾರಿತ ಬಲ್ಕ್‌ ಫ್ಲೋ ಮೀಟರ್‌ಗಳ ಅಳವಡಿಕೆ

* ಸೋರಿಕೆ ಪತ್ತೆ ಮಾಡಲು ಸಿಬ್ಬಂದಿಗೆ ತರಬೇತಿ

* ನೆಲದಡಿಯ ಸೋರಿಕೆ ಪತ್ತೆಗೆ ಹೀಲಿಯಂ ಅನಿಲ ಆಧಾರಿತ ತಂತ್ರಜ್ಞಾನ ಅಳವಡಿಕೆ

* ನೀರಿನ ಅಕ್ರಮ ಸಂಪರ್ಕಗಳ ಕಡಿತ

* ಕೊಳಗೇರಿಗಳಿಗೆ ನೀರು ಪೂರೈಕೆ

* ನೆಲಮಟ್ಟದ ಜಲಸಂಗ್ರಹಗಾರಗಳ ದುರಸ್ತಿ ಹಾಗೂಸಂಗ್ರಹಗಾರಗಳ ನಿರ್ಮಾಣ

* 140 ಕೋಟಿ ಲೀಟರ್‌ ನಗರಕ್ಕೆ ಪ್ರತಿದಿನ ಪೂರೈಕೆಯಾಗುವ ಕಾವೇರಿ ನೀರಿನ ಪ್ರಮಾಣ

* ₹ 748 ಕೋಟಿ ನೀರು ಸರಬರಾಜು ಮತ್ತು ನಿರ್ವಹಣೆಗೆ 2018–19ರಲ್ಲಿ ಅಂದಾಜಿಸಲಾದ ಮೊತ್ತ

* ₹ 2.04 ಕೋಟಿ ನೀರು ಸರಬರಾಜು ಮತ್ತು ನಿರ್ವಹಣೆಗೆ ಜಲಮಂಡಳಿ ದಿನವೊಂದಕ್ಕೆ ಖರ್ಚು ಮಾಡುವ ಅಂದಾಜು ಮೊತ್ತ

* ₹ 110 ಕೋಟಿ ಜಲಮಂಡಳಿಗೆ ತಿಂಗಳೊಂದರಲ್ಲಿ ಸಂಗ್ರಹವಾಗುವ ನೀರಿನ ಅಂದಾಜು ಶುಲ್ಕ

* ₹ 1.45 ಪ್ರತಿ ಲೀಟರ್‌ ನೀರು ಕಾವೇರಿ ನದಿಯಿಂದ ಬಳಕೆದಾರನಿಗೆ ತಲುಪಲು ತಗಲುವ ಅಂದಾಜು ವೆಚ್ಚ

* 3.71 ಲಕ್ಷ ನಗರದಲ್ಲಿನ ಕೊಳವೆಬಾವಿಗಳು

* 40 ಕೋಟಿ ಲೀಟರ್ಕೊಳವೆಬಾವಿಗಳಿಂದ ಪ್ರತಿದಿನ ಸಿಗುತ್ತಿರುವ ನೀರಿನ ಅಂದಾಜು ಪ್ರಮಾಣ

ಸಿಗುತ್ತಿಲ್ಲ ಅಗತ್ಯದಷ್ಟು ನೀರು

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವ್ಯಕ್ತಿಯೊಬ್ಬರ ದಿನಬಳಕೆಗೆ 135 ಲೀ. ನೀರು ಬೇಕು. ಆದರೆ ಜಲಮಂಡಳಿ 110 ಲೀ. ನೀರನ್ನು ಪೂರೈಸಲು ಮಾತ್ರ ಶಕ್ತವಾಗಿದೆ. ಹಾಗಾಗಿ ಸಾರ್ವಜನಿಕರು ಕೊಳವೆಬಾವಿಗಳ ನೀರಿನ ಮೇಲೆಯೂ ಅವಲಂಬಿತರಾಗಿದ್ದಾರೆ.

ಕೊಳವೆಬಾವಿಯ ನೀರನ್ನು ಬಹುತೇಕರು ಸ್ನಾನ ಮಾಡಲು, ಬಟ್ಟೆ, ವಾಹನ, ಪಾತ್ರೆ ತೊಳೆಯಲು, ಉದ್ಯಾನಕ್ಕಾಗಿ ಬಳಸುತ್ತಾರೆ. ಕುಡಿಯುವ ನೀರಿಗಾಗಿ ಶುದ್ಧೀಕರಣ ಘಟಕಗಳು, ಕ್ಯಾನ್‌ಗಳಲ್ಲಿ ಮಾರಾಟವಾಗುವ ನೀರನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ.

ಬೇಸಿಗೆಯಲ್ಲಿ ಕೊಳವೆಬಾವಿಗಳು ಸಹ ಬತ್ತುತ್ತಿರುವುದರಿಂದ ಜನರು ಟ್ಯಾಂಕರ್‌ ನೀರಿಗೆ ಮೊರೆಹೋಗುತ್ತಿದ್ದಾರೆ.

ಎಲ್ಲೆಲ್ಲಿದೆ ನೀರಿನ ಸಮಸ್ಯೆ

ಸಿಡೇದಹಳ್ಳಿ ಟಿ.ದಾಸರಹಳ್ಳಿ ಸಮೀಪದ ಸಿಡೇದಹಳ್ಳಿಗೆ ಕಾವೇರಿ ನೀರು ಪೂರೈಸಲು ಕೊಳವೆಗಳನ್ನು ಜೋಡಿಸಿದ್ದಾರೆ. ಆದರೆ, ಮನೆಗಳಿಗೆ ನೀರಿನ ಸಂಪರ್ಕ ನೀಡಿಲ್ಲ. ಇಲ್ಲಿ ನೀರಿನ ಸಮಸ್ಯೆ ಬಹಳ ಇದೆ. ಈ ಕುರಿತು ಸ್ಥಳೀಯ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದರೂ, ಸ್ಪಂದಿಸುತ್ತಿಲ್ಲ.

–ಪುರುಷೋತ್ತಮ ಗೌಡ


* ಸಂಪಿಗೆ ಬಡಾವಣೆ

ಪಟ್ಟೇಗಾರಪಾಳ್ಯ ಮುಖ್ಯರಸ್ತೆಯ ಸಂಪಿಗೆ ಬಡಾವಣೆಗೆ ಎರಡು ತಿಂಗಳುಗಳಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿ.

–ಎಂ.ಜಿ.ಮಮತಾ

* ಉಲ್ಲಾಳು

ಉಲ್ಲಾಳು ವಾರ್ಡ್‌ನ ನಾಗದೇವನಹಳ್ಳಿ, ಚಿಕ್ಕ ಗೊಲ್ಲರಹಟ್ಟಿಯ ಮಾರಮ್ಮ ದೇವಸ್ಥಾನ ಮುಂಭಾಗದಲ್ಲಿ ಕೊಳವೆಬಾವಿಗಳು ಇವೆ. ಇವುಗಳಲ್ಲಿ ನೀರು ಸಹ ಉತ್ತಮವಾಗಿ ಬರುತ್ತದೆ. ವಾಲ್ವ್‌ಮ್ಯಾನ್‌ ಲಂಚದ ಆಸೆಯಿಂದಾಗಿ ನೀರನ್ನು ಸರಿಯಾಗಿ ಬಿಡುತ್ತಿಲ್ಲ.

–ಗಂಗಪ್ಪ

* ಕೋಣನಕುಂಟೆ

ವಸಂತಪುರ ವಾರ್ಡ್‌ನ ಕೊಣನಕುಂಟೆ ಕ್ರಾಸ್‌ನಲ್ಲಿ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಸಂಬಂಧಪಟ್ಟವರು ಸಮಸ್ಯೆಯನ್ನು ಪರಿಹರಿಸಿ.

–ಅರುಣ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT