ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಬೆಂಗಳೂರು ನಿರ್ಮಾಣಕ್ಕೆ ₹8,015 ಕೋಟಿ: ರಾಜ್ಯ ಸಚಿವ ಸಂಪುಟ ಅಸ್ತು

ಸಿಎಂ, ಡಿಸಿಎಂ ವಿವೇಚನೆಗೆ ₹500 ಕೋಟಿ
Last Updated 30 ಜನವರಿ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ನವ ಬೆಂಗಳೂರು’ ನಿರ್ಮಾಣಕ್ಕೆ ₹8,015 ಕೋಟಿ ಅನುದಾನ ನೀಡಲು ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಜತೆಗೆ, ಮುಂದಿನ ಮೂರು ವರ್ಷಗಳಲ್ಲಿ ಬಿಬಿಎಂ‍ಪಿಯು ಯಾವುದೇ ಹೊಸ ಕ್ರಿಯಾಯೋಜನೆಗಳನ್ನು ಸಲ್ಲಿಸಬಾರದು ಎಂಬ ಷರತ್ತು ವಿಧಿಸಿದೆ.

ಬೆಂಗಳೂರಿನ ಅಭಿವೃದ್ಧಿಗೆ ₹8,036 ಕೋಟಿ ನೀಡಲು ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಕೆಲವು ಯೋಜನೆಗಳಿಗೆ ಅನುದಾನ ಹೆಚ್ಚಾಗಿದೆ ಹಾಗೂ ಕೆಲವಕ್ಕೆ ಕಡಿಮೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ, ಪ‍್ರಸ್ತಾವ ಪರಿಷ್ಕರಣೆ ಮಾಡಿ ಅನುಮೋದನೆ ನೀಡಲಾಗಿದೆ. ಇದರಲ್ಲಿ ತ್ಯಾಜ್ಯ ನಿರ್ವಹಣೆ, ವೈಟ್‌ ಟಾ‍ಪಿಂಗ್ ಹಾಗೂ ಗ್ರೇಡ್‌ ಸಪರೇಟರ್‌ಗಳ ಕಾಮಗಾರಿಗಳ ಅನುದಾನ ಕಡಿತಗೊಳಿಸಲಾಗಿದೆ.

ರಕ್ಷಣಾ ಇಲಾಖೆಯಿಂದ ಪಡೆದುಕೊಳ್ಳಬೇಕಿರುವ ಜಮೀನುಗಳಲ್ಲಿ ಮೂರು ವರ್ಷಗಳ ಒಳಗೆ ಯೋಜನೆ ಅನುಷ್ಠಾನಗೊಳಿಸಬೇಕಿದೆ. ಹಾಗಾಗಿ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಹೆಚ್ಚಿಸಲಾಗಿದೆ. ಜತೆಗೆ, ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟು ₹300 ಕೋಟಿ ಹಾಗೂ ಉಪಮುಖ್ಯಮಂತ್ರಿ ವಿವೇಚನೆಗೆ ಒಳಪಟ್ಟು ₹200 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.

ಈ ಅನುದಾನವನ್ನು ಮೂರು ವರ್ಷಗಳಲ್ಲಿ ಬಳಸಬೇಕು ಎಂದು ಸೂಚಿಸಲಾಗಿದೆ. ಈ ಕ್ರಿಯಾಯೋಜನೆಗೆ ಎರಡು ಹಂತಗಳಲ್ಲಿ ಟೆಂಡರ್‌ ಕರೆಯಬೇಕು. ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಗಳ ಪ್ರಕಾರ ಕಾಮಗಾರಿಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಗಿದೆ.

ಕಾಮಗಾರಿ ಪ್ರಕ್ರಿಯೆ ಹೇಗೆ: ಕೆಟಿಪಿಪಿ ಕಾಯ್ದೆಯಂತೆ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಟೆಂಡರ್‌ ಕರೆದು ಅರ್ಹ ಸಮಾಲೋಚಕರನ್ನು ನೇಮಿಸಲಾಗುತ್ತದೆ.

ಸಮಾಲೋಚಕರು ಕರಡು ವಿಸ್ತೃತಾ ಯೋಜನಾ ವರದಿ ತಯಾರಿಸಿದ ಬಳಿಕ ಪಾಲಿಕೆಯ ತಜ್ಞರ ತಾಂತ್ರಿಕ ಸಮಿತಿ ಮುಂದೆ ಮಂಡಿಸಿ ವಿಸ್ತೃತ ಯೋಜನಾ ವರದಿ ಪೂರ್ಣಗೊಳಿಸಬೇಕು. ಮೂಲ ಕಾಮಗಾರಿಯ ₹10 ಕೋಟಿಗೆ ಕಡಿಮೆಯಿಲ್ಲದಂತೆ ಟೆಂಡರ್‌ ಕರೆಯಬೇಕು ಎಂದು ಸೂಚಿಸಲಾಗಿದೆ.

‘ನಮ್ಮ ಮೆಟ್ರೊ, ಎಲಿವೇಟೆಡ್‌ ಕಾರಿಡಾರ್‌ ಕಾಮಗಾರಿಗೆ ಕೊಟ್ಟಿರುವ ಅನುದಾನ ಇದರಲ್ಲಿ ಸೇರಿಲ್ಲ. ಇದು ಬಿಬಿಎಂಪಿಗೆ ಕೊಟ್ಟ ಅನುದಾನ. ಬಿಡಿಎ, ಜಲಮಂಡಳಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

**

ಕಾಮಗಾರಿ ಅನುಷ್ಠಾನಕ್ಕೆ ಗುರಿ ನಿಗದಿ

* ಟೆಂಡರ್‌ ಪ್ರಕ್ರಿಯೆ ಮೂಲಕ ಸಮಾಲೋಚಕರ ನೇಮಕ; 2019ರ ಫೆಬ್ರುವರಿ ಅಂತ್ಯ

* ವಿಸ್ತೃತಾ ಯೋಜನಾ ವರದಿ ತಯಾರಿಕೆ ಹಾಗೂ ತಾಂತ್ರಿಕ ಸಮಿತಿಗಳ ಅನುಮೋದನೆ; 2019ರ ಏಪ್ತಿಲ್‌ ಅಂತ್ಯ

* ಟೆಂಡರ್‌ ಪ್ರಕ್ರಿಯೆ ಹಾಗೂ ಕಾರ್ಯಾನುಷ್ಠಾನ ಆರಂಭ; 2019ರ ಡಿಸೆಂಬರ್‌ ಅಂತ್ಯ

ಎನ್‌ಐಇ ವಿ.ವಿ ಮಸೂದೆಗೆ ಒಪ್ಪಿಗೆ

ಮೈಸೂರಿನ ಹಳೆಯ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಂದಾಗಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ (ಎನ್‌ಐಇ) ಅನ್ನು ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೆ ಏರಿಸುವ ಕರಡು ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಂಸ್ಥೆಯ ಹಳೆ ವಿದ್ಯಾರ್ಥಿಯೂ ಆಗಿರುವ ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಅವರು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರನ್ನು ಕಳೆದ ವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಈ ಸಂಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನಾಗಿ ಮಾಡಬೇಕು. ಹಾಗಾಗಿ, ವಿಶ್ವವಿದ್ಯಾಲಯದ ಮಾನ್ಯತೆ ನೀಡಬೇಕು ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT