ಶುಕ್ರವಾರ, ಆಗಸ್ಟ್ 23, 2019
22 °C
ಟಿಪ್ಪುನಗರ, ಡಿ.ಜೆ.ಹಳ್ಳಿ, ಬೆಟ್ಟದಾಸನಪುರದಲ್ಲಿ ಕಾರ್ಯಾಚರಣೆ

ಒಂಟೆ ಸಹಿತ ಐದು ಜಾನುವಾರುಗಳ ರಕ್ಷಣೆ

Published:
Updated:
Prajavani

ಬೆಂಗಳೂರು: ನಗರದ ಹಲವೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಂಟೆ ಸಹಿತ ಐದು ಜಾನುವಾರುಗಳನ್ನು ರಕ್ಷಿಸಿದ್ದಾರೆ.

‘ಚಾಮರಾಜಪೇಟೆ ಬಳಿಯ ಟಿಪ್ಪುನಗರದ 2ನೇ ಅಡ್ಡರಸ್ತೆಯಲ್ಲಿ ಅಪರಿಚಿತನೊಬ್ಬ ಒಂಟೆಯನ್ನು ಸಾಗಿಸುತ್ತಿದ್ದ. ಗಸ್ತಿನಲ್ಲಿದ್ದ ಸಿಬ್ಬಂದಿಯನ್ನು ನೋಡಿದ ಆತ, ರಸ್ತೆಯಲ್ಲಿ ಒಂಟೆ ಬಿಟ್ಟು ಪರಾರಿಯಾಗಿದ್ದಾನೆ’ ಎಂದು ಚಾಮರಾಜಪೇಟೆ ಪೊಲೀಸರು ಹೇಳಿದರು.

‘ಒಂಟೆಯ ಕಾಲು ಹಾಗೂ ಮೂಗನ್ನು ಕಟ್ಟಿ ಹಾಕಿ ಹಿಂಸಿಸಲಾಗಿದೆ. ಬ್ರಕೀದ್ ಹಬ್ಬಕ್ಕೆ ಬಲಿ ಕೊಡುವ ಸಲುವಾಗಿ ಒಂಟೆಯನ್ನು ತೆಗೆದುಕೊಂಡು ಹೊರಟಿರುವ ಬಗ್ಗೆ ಅನುಮಾನವಿದೆ. ಪರಾರಿಯಾದ ಆ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಮಾಲೀಕರಿಲ್ಲದ ಹಸುಗಳು: ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯ ಶ್ಯಾಂಪುರದ ಎಲ್‌.ಆರ್. ಬಂಡೆ ಮುಖ್ಯರಸ್ತೆಯಲ್ಲಿ ಒಂದು ಹಸು ಹಾಗೂ ಅಂಬೇಡ್ಕರ್ ಆಸ್ಪತ್ರೆ ಬಳಿ ಎರಡು ಹಸುಗಳನ್ನು ರಕ್ಷಿಸಲಾಗಿದೆ.

‘ನೀರು ಹಾಗೂ ಆಹಾರ ನೀಡದೇ ಸಾರ್ವಜನಿಕ ರಸ್ತೆಗಳಲ್ಲಿ ಹಸುಗಳನ್ನು ಬಿಡಲಾಗಿತ್ತು. ಗಸ್ತಿನಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಸಮೀರ್ ಪಾಷ, ನಯಾಜ್ ಪಾಷ ಹಾಗೂ ಕಾನ್‌ಸ್ಟೆಬಲ್ ವಿಠ್ಠಲ್ ದಡ್ಡಿ ಹಸುಗಳನ್ನು ರಕ್ಷಿಸಿದ್ದಾರೆ. ಅವುಗಳ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ’ ಎಂದು ಡಿ.ಜೆ.ಹಳ್ಳಿ ಪೊಲೀಸರು ಹೇಳಿದರು.

ಮನೆ ಮುಂದೆ ಕಟ್ಟಿದ್ದ ಎತ್ತು: ಎಲೆಕ್ಟ್ರಾನಿಕ್‌ ಸಿಟಿ ಠಾಣೆ ವ್ಯಾಪ್ತಿಯ ಬೆಟ್ಟದಾಸನಪುರದಲ್ಲಿ ಮನೆಯೊಂದರ ಮುಂದೆ ಕಟ್ಟಲಾಗಿದ್ದ ಎತ್ತನ್ನು ಪೊಲೀಸರು ರಕ್ಷಿಸಿದ್ದಾರೆ.

‘ಹೆಡ್ ಕಾನ್‌ಸ್ಟೆಬಲ್ ವೆಂಕಟೇಶ್, ಇದೇ 10ರಂದು ಬೆಟ್ಟದಾಸನಪುರ ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದರು. ಇಮ್ತಿಯಾಜ್ ಎಂಬುವರ ಮನೆ ಎದುರು ಎತ್ತು ಕಟ್ಟಲಾಗಿತ್ತು. ಮನೆಯಲ್ಲಿ ಯಾರೂ ಇರಲಿಲ್ಲ. ಅಕ್ಕ–ಪಕ್ಕದವರನ್ನು ವಿಚಾರಿಸಿದಾಗ, ಹತ್ಯೆ ಮಾಡಲು ಎತ್ತನ್ನು ತಂದಿರುವ ಮಾಹಿತಿ ಸಿಕ್ಕಿತು’ ಎಂದು ಪೊಲೀಸರು ಹೇಳಿದರು.

‘ಸಾರ್ವಜನಿಕರ ಸಹಾಯದಿಂದ ಎತ್ತನ್ನು ರಕ್ಷಿಸಲಾಗಿದೆ. ಆರೋಪಿ ಇಮ್ತಿಯಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ’ ಎಂದರು.

ಒಂಟೆ ರಕ್ಷಿಸಲು ದೂರು

‘ಕೆ.ಜೆ.ಹಳ್ಳಿಯ ಹಿಲಾಲ್ ಸ್ಟ್ರೀಟ್‌ನಲ್ಲಿ ಒಂಟೆಯೊಂದನ್ನು ಕಟ್ಟಲಾಗಿದ್ದು, ಮೇವು ಹಾಗೂ ನೀರು ನೀಡದೇ ಹಿಂಸಿಸಲಾಗುತ್ತಿದೆ. ಅದನ್ನು ರಕ್ಷಿಸಿ’ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಲಾಲಸಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಬಕ್ರೀದ್ ಹಬ್ಬಕ್ಕೆ ಬಲಿ ನೀಡಲು ಒಂಟೆ ತಂದಿರುವ ಅನುಮಾನವಿದೆ. ಒಂಟೆಗಳನ್ನು ಸಾಯಿಸಲು ನಿರ್ಬಂಧವಿದ್ದು, ಆ ಬಗ್ಗೆ  ರಾಜಸ್ಥಾನ ಹೈಕೋರ್ಟ್‌ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿ ಒಂಟೆ ಬಲಿ ಕೊಡಲು ತರಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

‘ದೂರಿನ ನಂತರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂಬ ಆರೋಪವಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಕೆ.ಜೆ.ಹಳ್ಳಿ ಪೊಲೀಸರು ನಿರಾಕರಿಸಿದರು.

Post Comments (+)