ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಸೊಸೈಟಿಗೆ 50ರ ಸಂಭ್ರಮ

Last Updated 24 ಜನವರಿ 2019, 19:02 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್‌ಪೀಡಿತರ ಚಿಕಿತ್ಸೆಗಾಗಿ 1968ರಲ್ಲಿ ಆರಂಭಿಸಲಾದಕರ್ನಾಟಕ ಕ್ಯಾನ್ಸರ್‌ ಸೊಸೈಟಿಗೆ ಇದೀಗ ಸುವರ್ಣ ಸಂಭ್ರಮ.

ಕಿದ್ವಾಯಿಗಿಂತ ಸಾಕಷ್ಟು ಮುಂಚಿತವಾಗಿ ಸ್ಥಾಪನೆಗೊಂಡ ಈ ಸಂಸ್ಥೆ ನಗರದ ಮೊದಲ ಕ್ಯಾನ್ಸರ್‌ ಚಿಕಿತ್ಸಾ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ. ಕ್ಯಾನ್ಸರ್‌ ಪೀಡಿತ ಜನರ ಮನಸ್ಸಿನ ಒತ್ತಡ ಕಡಿಮೆ ಮಾಡುವುದು, ಖಿನ್ನತೆ ನಿವಾರಿಸುವುದು, ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿದೆ.

ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ಹಾಗೂ ಆರೋಗ್ಯ ಇಲಾಖೆಯ ಸಚಿವರು ಈ ಸಂಸ್ಥೆಯ ಪ್ರಮುಖ ಪೋಷಕರು. ಡಾ.ಎಂ.ಶಿವರಾಂ, ಡಾ.ಎಂ.ಗುರುದಾಸ್‌, ಡಾ.ಎಂ.ಸಿರ್ಸಿ, ಡಾ.ಎಂ.ಕೃಷ್ಣ ಭಾರ್ಗವ, ಡಾ. ತಿಮ್ಮಪ್ಪಯ್ಯ, ಡಾ.ಬಿ.ಎಸ್‌.ಶ್ರೀನಾಥ್‌ ಅವರಂತಹ ವೈದ್ಯರ ಪಡೆ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿತು.

ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ಚಿಕಿತ್ಸಾ ಸೌಲಭ್ಯವನ್ನೂ ನೀಡುತ್ತಿದೆ.ರಾಜ್ಯದಾದ್ಯಂತ ಸೇವಾ ಶಿಬಿರಗಳನ್ನು ನಡೆಸುತ್ತಿದೆ.

ಬೃಹತ್‌ ಯುವ ಚಳವಳಿ: ಸಂಸ್ಥೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಕ್ಯಾನ್ಸರ್‌ ಜಾಗೃತಿ ಮೂಡಿಸಲು ರಾಜ್ಯದ ಪದವಿ ಕಾಲೇಜುಗಳಲ್ಲಿ 500 ಯುವ ಸಂಘಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ‘ಕ್ಯಾನ್ಸರ್‌ ವಿರುದ್ಧ ಯುವ ಸಂಘಗಳು’ ಅಭಿಯಾನದಡಿ ಇವು ಕಾರ್ಯನಿರ್ವಹಿಸಲಿವೆ. ತಂಬಾಕು ಬಳಸದಂತೆ ಜಾಗೃತಿ, ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಲಿವೆ.

ರೋಗದ ಬಗ್ಗೆ ಜಾಗೃತಿ, ಪರೀಕ್ಷೆ, ಚಿಕಿತ್ಸೆ ಮತ್ತು ಮೌಲ್ಯಮಾಪನ ಪರಿಕಲ್ಪನೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್‌ ಆರೈಕೆ ನಡೆಯಲಿದೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳ ಪ್ರಮುಖ ಆಸ್ಪತ್ರೆಗಳಲ್ಲಿ, ಕ್ಯಾನ್ಸರ್‌ ಸೊಸೈಟಿಯ ಕೇಂದ್ರ ಕಚೇರಿ ಮತ್ತು ಅಪೋಲೊ ಆಸ್ಪತ್ರೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮುಂದೆ ಇತರ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಸಂಸ್ಥೆ
ಹೇಳಿದೆ.

ಸಮಗ್ರ ಮಾಹಿತಿ ಕೇಂದ್ರ: ಸಂಸ್ಥೆಯಲ್ಲಿ ಮಾಹಿತಿ ಕೆಂದ್ರದ ಸ್ಥಾಪನೆಯಾಗಲಿದೆ. ಇಲ್ಲಿ ಕ್ಯಾನ್ಸರ್‌ ಪೀಡಿತರಿಗೆ ಸಿಗುವ ಆರ್ಥಿಕ ಸೌಲಭ್ಯಗಳು ವಿಮಾ ಸೌಲಭ್ಯ, ಆಯುಷ್ಮಾನ್‌ ಭಾರತ ಯೋಜನೆ ಅಡಿ ರೋಗಿಗಳ ನೋಂದಣಿ ಸೇರಿದಂತೆ ಹಲವು ಬಗೆಯ ಸಮಗ್ರ ನೆರವು ನೀಡುವ ಕೇಂದ್ರ ಸ್ಥಾಪನೆಯಾಗಲಿದೆ.

₹50 ಲಕ್ಷದ ಮೂಲನಿಧಿ ಸ್ಥಾಪನೆ: ಸುವರ್ಣ ಮಹೋತ್ಸವದ ಜ್ಞಾಪಕಾರ್ಥ ಮೂಲನಿಧಿ ಸ್ಥಾಪನೆಗೆ ಸಂಸ್ಥೆ ಮುಂದಾಗಿದೆ. ಯೋಜನೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಅದುದಾನಿಗಳಿಂದ ನಿಧಿ ಸಂಗ್ರಹಿಸುವ ಮೂಲಕ ₹50 ಲಕ್ಷ ಮೂಲನಿಧಿ ಸ್ಥಾಪಿಸುವ ಗುರಿ ಹೊಂದಿದೆ.

27ರಂದು ಸುವರ್ಣ ಮಹೋತ್ಸವ

ಸೊಸೈಟಿಯ ಸುವರ್ಣ ಮಹೋತ್ಸವವು ಭಾರತೀಯ ವಿಜ್ಞಾನ ಸಂಸ್ಥೆ ಆವರಣದ ಜೆ.ಎನ್‌. ಟಾಟಾ ಸಭಾಂಗಣದಲ್ಲಿ ಜ. 27ರಂದು ಸಂಜೆ 5ಕ್ಕೆ ನಡೆಯಲಿದೆ.

ಸೊಸೈಟಿಯ ಅಧ್ಯಕ್ಷ ಸಿ.ಕೆ.ಎ.ಎನ್‌.ಶಾಸ್ತ್ರಿ, ಸಲಹೆಗಾರ ಡಾ.ನಿಂಗೇಗೌಡ ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಮಹೋತ್ಸವದ ಮಾಹಿತಿ ನೀಡಿದರು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್‌ ಪರೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ವಿಜ್ಞಾನಿ ಡಾ.ಸಿ.ಎನ್‌.ಆರ್‌.ರಾವ್‌, ಮೇಯರ್‌ ಗಂಗಾಂಬಿಕೆ,ಅದಮ್ಯ ಚೇತನಾ ಟ್ರಸ್ಟ್‌ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಭಾಗವಹಿಸಲಿದ್ದಾರೆ ಎಂದರು. ಅಪೋಲೊ ಇನ್ಸ್‌ಟಿಟ್ಯೂಟ್‌ ಆಫ್‌ ಕಲರೆಕ್ಟಲ್‌ ಸರ್ಜರಿಯ ಹಿರಿಯ ಸಲಹೆಗಾರ ಡಾ.ಶ್ರೀನಿವಾಸ ನರಸಿಂಹಯ್ಯ ಆಶಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT