ಕಾರಿಗೆ ಆಂಬುಲೆನ್ಸ್ ಡಿಕ್ಕಿ; ಐವರ ದುರ್ಮರಣ

ಸೋಮವಾರ, ಜೂನ್ 24, 2019
25 °C
ವಿಮಾನ ರದ್ದಾಗಿದ್ದರಿಂದ ಮನೆಗೆ ಮರಳುತ್ತಿದ್ದ ಕುಟುಂಬ * ಕೋಗಿಲು ಕ್ರಾಸ್ ಮೇಲ್ಸೇತುವೆಯಲ್ಲಿ ದುರಂತ

ಕಾರಿಗೆ ಆಂಬುಲೆನ್ಸ್ ಡಿಕ್ಕಿ; ಐವರ ದುರ್ಮರಣ

Published:
Updated:
Prajavani

ಬೆಂಗಳೂರು: ಯಲಹಂಕದ ಕೋಗಿಲು ಕ್ರಾಸ್ ಮೇಲ್ಸೇತುವೆಯಲ್ಲಿ ಆಂಬುಲೆನ್ಸ್ ಹಾಗೂ ಕಾರಿನ ನಡುವೆ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಪಶ್ಚಿಮ ಬಂಗಾಳದ ದೀಪಂಕರ್ ಡೇ (44), ಅವರ ಪತ್ನಿ ಸ್ವಾಗತಾ ಚೌಧರಿ (42), ಮಗ ಧ್ರುವ ಡೇ (14), ಸ್ವಾಗತಾ ಅಕ್ಕ ಸುಜಯಾ ಚೌಧರಿ (45) ಹಾಗೂ ಅವರ ತಾಯಿ ಜಯಂತಿ ಚೌಧರಿ (65) ಮೃತಪಟ್ಟವರು. ಆಂಬುಲೆನ್ಸ್ ಚಾಲಕ ಚನ್ನಬಸಪ್ಪ ಹಾಗೂ ಸ್ಟಾಫ್‌ ನರ್ಸ್ ಪ್ರವೀಣ್ ಕುಮಾರ್ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ವಿಮಾನ ರದ್ದಾಯ್ತು: ನಗರದ ಖಾಸಗಿ ಕಂಪನಿ ಒಂದರಲ್ಲಿ ವ್ಯವಸ್ಥಾಪಕರಾಗಿದ್ದ ದೀಪಂಕರ್, ಕುಟುಂಬ ಸದಸ್ಯರ ಜತೆ ಆರ್‌.ಟಿ.ನಗರದಲ್ಲಿ ನೆಲೆಸಿದ್ದರು. ಸುಜಯಾ ಚೆನ್ನೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಶುಕ್ರವಾರ ತಂಗಿ (ಸ್ವಾಗತಾ) ಮನೆಗೆ ಬಂದಿದ್ದರು. ಭಾನುವಾರ ರಾತ್ರಿ ಚೆನ್ನೈಗೆ ಹಿಂದಿರುಗಬೇಕಿದ್ದ ಅವರು, ವಿಮಾನ ಟಿಕೆಟ್ ಕಾಯ್ದಿರಿಸಿದ್ದರು.

ಸುಜಯಾ ಅವರನ್ನು ಕಳುಹಿಸಲು ನಾಲ್ಕೂ ಮಂದಿ ಕಾರಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ತೆರಳಿದ್ದರು. ಆದರೆ, ವಿಪರೀತ ಮಳೆ ಸುರಿಯುತ್ತಿದ್ದ ಕಾರಣ ವಿಮಾನ ಹಾರಾಟ ರದ್ದಾಗಿತ್ತು. ‘ಈಗ ಹೊರಡಬೇಕಿದ್ದ ವಿಮಾನ, ಬೆಳಿಗ್ಗೆ 7 ಗಂಟೆಗೆ ಚೆನ್ನೈಗೆ ಹಾರಲಿದೆ’ ಎಂದು ಏರ್‌ಲೈನ್ಸ್ ಸಿಬ್ಬಂದಿ ಹೇಳಿದ್ದರಿಂದ ಐದೂ ಮಂದಿ ಮನೆಗೆ ಮರಳುತ್ತಿದ್ದರು.

ಅಬ್ಬರದ ಮಳೆ ನಡುವೆಯೇ ರಾತ್ರಿ 12 ಗಂಟೆ ಸುಮಾರಿಗೆ ಕಾರು ಚಾಲನೆ ಮಾಡಿಕೊಂಡು ಬಂದ ದೀಪಂಕರ್, ಕೋಗಿಲು ಕ್ರಾಸ್ ಮೇಲ್ಸೇತುವೆ ಏರಿದ್ದರು. ಇದೇ ವೇಳೆ ದೇವನಹಳ್ಳಿ ಕಡೆಗೆ ಹೊರಟಿದ್ದ ಆಂಬುಲೆನ್ಸ್ ಚಾಲಕ, ಲಾರಿಯನ್ನು ಹಿಂದಿಕ್ಕುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡರು. ಇದರಿಂದ ಅಡ್ಡಾದಿಡ್ಡಿ ಸಾಗಿದ ಆಂಬುಲೆನ್ಸ್, ವಿಭಜಕಕ್ಕೆ ಅಪ್ಪಳಿಸಿ ಪಕ್ಕದ ರಸ್ತೆಗೆ ಬಂದಿತು. ಆಗ ಕಾರಿಗೆ ಡಿಕ್ಕಿಯಾಗಿ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾದವು.

ಇತರೆ ವಾಹನಗಳ ಸವಾರರು ತಕ್ಷಣ ರಕ್ಷಣೆಗೆ ಧಾವಿಸಿದರಾದರೂ, ಕಾರಿನಲ್ಲಿದ್ದ ನಾಲ್ವರ ದೇಹಗಳು ಅಪ್ಪಚ್ಚಿಯಾಗಿದ್ದವು. ಗಂಭೀರ ಗಾಯಗೊಂಡಿದ್ದ ಧ್ರುವನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸ್ವಲ್ಪ ಸಮಯದಲ್ಲೇ ಆತನೂ ಕೊನೆಯುಸಿರೆಳೆದ ಎಂದು ಪೊಲೀಸರು ವಿವರಿಸಿದರು.

ಲಾರಿ ಚಾಲಕನ ಯಡವಟ್ಟು: ‘ತುರ್ತು ಕರೆ ಬಂದಿದ್ದರಿಂದ ಹೆಬ್ಬಾಳಕ್ಕೆ ಹೋಗಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಆ ನಂತರ ದೇವನಹಳ್ಳಿ ಘಟಕಕ್ಕೆ ವಾಪಸಾಗುತ್ತಿದ್ದಾಗ, ಲಾರಿ ಚಾಲಕ ವಾಹನವನ್ನು ಒಮ್ಮೆಲೆ ಬಲಕ್ಕೆ ತೆಗೆದುಕೊಂಡ. ಆಗ ದಿಕ್ಕು ದೋಚದಂತಾಯಿತು. ಹಿಂದೆ ವಾಹನಗಳು ವೇಗವಾಗಿ ಬರುತ್ತಿದ್ದವು. ನಾನು ಒಮ್ಮೆಲೇ ಬ್ರೇಕ್ ಹಾಕಿದ್ದರೆ, ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಅದನ್ನು ತಪ್ಪಿಸುವ ಸಲುವಾಗಿ, ನಾನೂ ವಾಹನವನ್ನು ಸ್ವಲ್ಪ ಬಲಕ್ಕೆ ತೆಗೆದುಕೊಳ್ಳಲು ಯತ್ನಿಸಿದೆ. ಆದರೆ, ವಾಹನ ಪಕ್ಕದ ರಸ್ತೆಗೆ ಹೋದಾಗ ಕಾರು ಬಂದು ಗುದ್ದಿತು’ ಎಂದು ಆಂಬುಲೆನ್ಸ್ ಚಾಲಕ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

ಸ್ವಾಗತಾ ಚೌಧರಿ ಅವರು ಹೆಬ್ಬಾಳದ ಜೈನ್ ಹೆರಿಟೇಜ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರೆ, ಧ್ರುವ 8ನೇ ತರಗತಿ ಉತ್ತೀರ್ಣನಾಗಿ ಬೇಸಿಗೆ ರಜೆ ಕಳೆಯುತ್ತಿದ್ದ.

ಗಂಡ, ಮಕ್ಕಳ ಆಕ್ರಂದನ

ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಸುಜಯಾ ಗಂಡ ಪ್ರವೀಣ್ ಕುಮಾರ್ ಹಾಗೂ ಅವರ ಇಬ್ಬರು ಮಕ್ಕಳು ಬೆಳಿಗ್ಗೆಯೇ ಆಸ್ಪತ್ರೆ ಬಳಿ ಬಂದಿದ್ದರು. ‘ಅಮ್ಮನನ್ನು ನೋಡಬೇಕು. ಅವರ ಮುಖವನ್ನು ಒಮ್ಮೆ ತೋರಿಸಿ’ ಎಂದು ಅಳುತ್ತಿದ್ದ ಮಕ್ಕಳಿಗೆ ಪ್ರವೀಣ್ ತಬ್ಬಿ ಸಾಂತ್ವನ ಹೇಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

‘ದಿಗಿಲು ಬಡಿದಂತಾಯಿತು’

‘ಪ್ರವೀಣ್ ನಾಯರ್ ನಾಯರ್‌ ಸಮುದಾಯದವನು. ಆತ ಸುಜಯಾ ಅವರನ್ನು 20 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ. ಚೆನ್ನೈನಲ್ಲಿ ನಾಯರ್ ಸಮುದಾಯದವರೆಲ್ಲ ಸೇರಿ ಒಂದು ಸಂಘ ಕಟ್ಟಿದ್ದೇವೆ. ಬೆಳಿಗ್ಗೆ 5 ಗಂಟೆಗೇ ಕರೆ ಮಾಡಿದ ಸಂಘದ ಮುಖಂಡರು, ‘ಸುಜಯಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪ್ರವೀಣ್ ಜತೆ ಬೆಂಗಳೂರಿಗೆ ಹೋಗಿ ಬಾ’ ಎಂದರು. ಸಾವಿನ ಸುದ್ದಿ ಕೇಳಿ ದಿಗಿಲು ಬಡಿದಂತಾಯಿತು’ ಎಂದು ಹೇಳುತ್ತ ಪ್ರವೀಣ್ ಸ್ನೇಹಿತ ಸದಾನಂದ ದುಃಖತಪ್ತರಾದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !