ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಚಿನ್ನಕ್ಕೆ ಸಾಲ ಸಿಬಿಐಗೆ ದೂರು

₹ 12.51 ಕೋಟಿ ಮಂಜೂರು ಮಾಡಿದ ಬ್ಯಾಂಕ್ ಅಧಿಕಾರಿ!
Last Updated 23 ಮೇ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಚಿನ್ನ ಅಡಮಾನ ಇಟ್ಟುಕೊಂಡು ಸಾಲ ಮಂಜೂರು ಮಾಡಿದ ಆರೋಪ ಸಂಬಂಧ ಬ್ಯಾಂಕ್‌ ಆಫ್‌ ಬರೋಡ, ಕೆಂಗೇರಿ ಶಾಖೆ ಹಿಂದಿನ ವ್ಯವಸ್ಥಾಪಕ ಟಿ.ಎಲ್‌‍ಪ್ರವೀಣ್‌ ಕುಮಾರ್‌ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ.

ಪ್ರವೀಣ್‌ ಕುಮಾರ್‌ 2017ರ ಡಿಸೆಂಬರ್‌ 13ರಿಂದ 2018ರ ಜುಲೈ 7ರವರೆಗೆ ಕೆಂಗೇರಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಗೋಕುಲಂ ಶಿಕ್ಷಣ ಟ್ರಸ್ಟ್‌ ಚೇರ್‌ಮನ್‌ ಎಸ್‌.ಕೆ. ಸುಬ್ರಮಣ್ಯ ನಾಯ್ಡು ಅವರ ಜೊತೆ ಶಾಮೀಲಾಗಿ 186 ಪ್ರಕರಣಗಳಲ್ಲಿ ನಕಲಿ ಚಿನ್ನ ಅಡಮಾನ ಇಟ್ಟುಕೊಂಡು ₹ 12.51 ಕೋಟಿ ಸಾಲ ವಿತರಿಸಿದ ಆರೋಪಕ್ಕೆ ಒಳಗಾಗಿದ್ದಾರೆ.

ಕುತೂಹಲದ ಸಂಗತಿ ಎಂದರೆ ಸಾಲ ಪಡೆದವರೂ ಅಪರಿಚಿತರು. ಇವರಿಗೆ ಗ್ಯಾರಂಟಿ ಕೊಟ್ಟಿರುವವರೂ ಅಪರಿಚಿತರು! ಒಟ್ಟು 57 ಜನರಿಗೆ ಸಾಲ ಕೊಡಲಾಗಿದೆ. ಬ್ಯಾಂಕ್‌ ನಿಯಮದಂತೆ ಬ್ಯಾಂಕ್‌ ಮ್ಯಾನೇಜರ್‌ಗೆ ₹ 10 ಲಕ್ಷದವರೆಗೆ ಸಾಲ ಮಂಜೂರು ಮಾಡಲು ಮಾತ್ರ ಅಧಿಕಾರವಿದ್ದು, 44 ಪ್ರಕರಣಗಳಲ್ಲಿ ಈ ನಿಯಮ ಉಲ್ಲಂಘಿಸಲಾಗಿದೆ ಎಂದು ಸಿಬಿಐ ದೂರಿದೆ.

ಬ್ಯಾಂಕಿನ ಮಾನ್ಯತೆ ಪಡೆದ ಚಿನ್ನದ ಮೌಲ್ಯಮಾಪಕ ಹಾಗೂ ಅಡವಿಟ್ಟುಕೊಂಡ ಚಿನ್ನವನ್ನು ವಶದಲ್ಲಿಟ್ಟುಕೊಳ್ಳುವ ಸಹ ಅಧಿಕಾರಿ ಸಹಿಯನ್ನು ಪ್ರವೀಣ್‌ ಕುಮಾರ್‌ ಫೋರ್ಜರಿ ಮಾಡಿದ್ದಾರೆ. ಆ ಮೂಲಕ ಬ್ಯಾಂಕಿಗೆ ₹ 10.68 ಕೋಟಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬ್ಯಾಂಕ್‌ ಆಫ್‌ ಬರೋಡದ ಉಪ ಪ್ರಧಾನ ವ್ಯವಸ್ಥಾಪಕರಾದ ಲಲಿತ್‌ ತ್ಯಾಗಿ ಕಳೆದ 14ರಂದು ಈ ಸಂಬಂಧ ನೀಡಿದ ದೂರಿನ ಮೇಲೆ ಕ್ರಿಮಿನಲ್‌ ಸಂಚು, ಫೋರ್ಜರಿ, ನಂಬಿಕೆ ದ್ರೋಹದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT