ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಂಧನ

ಶನಿವಾರ, ಮಾರ್ಚ್ 23, 2019
34 °C
ಸರ್ಕಾರಿ ಕೆಲಸದ ಆಮಿಷವೊಡ್ಡಿ ₹80 ಲಕ್ಷ ವಂಚನೆ

ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಂಧನ

Published:
Updated:
Prajavani

ಬೆಂಗಳೂರು: ಸರ್ಕಾರಿ ಕೆಲಸದ ಆಮಿಷವೊಡ್ಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡು ವಂಚಿಸಿದ್ದ ಆರೋಪದಡಿ ಗದಗ ಜಿಲ್ಲೆಯ ನರಗುಂದದ ‘ಶ್ರೀ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆ’ ಅಧ್ಯಕ್ಷ ವೀರನಗೌಡ ಬಸನಗೌಡ ಪಾಟೀಲ ಎಂಬುವರನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ವಿಜಯಪುರ, ಗದಗ, ಬಾಗಲಕೋಟೆ, ಕೊಪ್ಪಳ ಹಾಗೂ ರಾಮನಗರ ಜಿಲ್ಲೆಯ 15ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದ ವೀರನಗೌಡ, ಅವರೆಲ್ಲರಿಂದ ಸುಮಾರು ₹80 ಲಕ್ಷ ಪಡೆದುಕೊಂಡಿದ್ದರು. ಕೆಲಸ ಕೊಡಿಸದೆ, ಹಣವನ್ನು ವಾಪಸು ನೀಡದೇ ವಂಚಿಸಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಆರೋಪಿಯಿಂದ ವಂಚನೆಗೀಡಾಗಿದ್ದ ಕನಕಪುರದ ನಿವಾಸಿ ಶಿವು ಎಂಬುವರು ಮಾ. 7ರಂದು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು. ಆ ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಕಮಿಷನರ್‌ ಅವರು ಸಿಸಿಬಿಗೆ ವರ್ಗಾಯಿಸಿದ್ದರು’ ಎಂದರು.

ಮುಖ್ಯಮಂತ್ರಿಗೆ ದೂರು ನೀಡಿದ್ದ ಅಭ್ಯರ್ಥಿಗಳು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಫೆ. 18ರಂದು ನಡೆಸಿದ್ದ ಜನತಾ ದರ್ಶನಕ್ಕೆ ಬಂದಿದ್ದ ಅಭ್ಯರ್ಥಿಗಳು, ಆರೋಪಿ ವೀರನಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಮಾರಸ್ವಾಮಿ, ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

‘ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ನಿಮಗೂ ಕೆಲಸ ಕೊಡಿಸುತ್ತೇನೆ. ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ’ ಎಂದು ವೀರನಗೌಡ ಹೇಳುತ್ತಿದ್ದರು. ಅದನ್ನು ನಂಬುತ್ತಿದ್ದ ಅಭ್ಯರ್ಥಿಗಳನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಿಗೆ ಕರೆಸಿಕೊಂಡು ಹಣ ಪಡೆಯುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಆರೋಪಿಯು ಮತ್ತಷ್ಟು ಅಭ್ಯರ್ಥಿಗಳಿಗೆ ವಂಚಿಸಿರುವ ಮಾಹಿತಿ ಇದ್ದು, ಅದನ್ನು ತಿಳಿದುಕೊಳ್ಳುತ್ತಿದ್ದೇವೆ. ಅವರಿಂದ ಯಾರಿಗಾದರೂ ವಂಚನೆ ಆಗಿದ್ದರೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದು ದೂರು ನೀಡಬಹುದು’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !