ಬಡ್ಡಿ ಆಸೆ ತೋರಿಸಿ ವಂಚನೆ: ‘ಆ್ಯಂಬಿಡೆಂಟ್’ ಆಯ್ತು, ಈಗ ‘ಅಜ್ಮೀರ್‌ ಗ್ರೂಪ್’!

7
ಹೆಚ್ಚಿನ ಬಡ್ಡಿ ಆಸೆ ತೋರಿಸಿ ₹30 ಕೋಟಿ ವಂಚನೆ, ಹಣ ವಾಪಸ್‌ ಕೊಡಿಸುವಂತೆ ಸಿಸಿಬಿ ಮೊರೆ ಹೋದ ಗ್ರಾಹಕರು

ಬಡ್ಡಿ ಆಸೆ ತೋರಿಸಿ ವಂಚನೆ: ‘ಆ್ಯಂಬಿಡೆಂಟ್’ ಆಯ್ತು, ಈಗ ‘ಅಜ್ಮೀರ್‌ ಗ್ರೂಪ್’!

Published:
Updated:

ಬೆಂಗಳೂರು: ‘ಆ್ಯಂಬಿಡೆಂಟ್‌’ ಕಂಪನಿ ವಂಚನೆ ಮಾದರಿಯಲ್ಲೇ ನಗರದ ‘ಅಜ್ಮೀರ್‌ ಗ್ರೂಪ್‌’ ಎಂಬ ಮತ್ತೊಂದು ಕಂಪನಿ, ಹೆಚ್ಚಿನ ಬಡ್ಡಿ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದೆ’ ಎಂದು ಆರೋಪಿಸಿರುವ ಗ್ರಾಹಕರು, ಹಣ ವಾಪಸ್‌ ಕೊಡಿಸುವಂತೆ ಸಿಸಿಬಿ ಪೊಲೀಸರ ಮೊರೆ ಹೋಗಿದ್ದಾರೆ.

ಜಯನಗರ ಬಸ್‌ ನಿಲ್ದಾಣ ಬಳಿ ಕಚೇರಿ ತೆರೆದಿದ್ದ ‘ಅಜ್ಮೀರ್ ಗ್ರೂಪ್’ ವ್ಯವಸ್ಥಾಪಕರಾದ ತಬ್ರೇಜ್ ಪಾಷಾ ಹಾಗೂ ಅಬ್ದುಲ್ ದಸ್ತಗಿರ್, 4 ಸಾವಿರ ಗ್ರಾಹಕರಿಂದ ₹30 ಕೋಟಿ ಸಂಗ್ರಹಿಸಿದ್ದರು ಎನ್ನಲಾಗಿದೆ. ಆ ಹಣವನ್ನು ನಿಗದಿತ ವೇಳೆಯಲ್ಲಿ ವಾಪಸ್ ನೀಡಿರಲಿಲ್ಲ. ಆ ಸಂಬಂಧ ಗ್ರಾಹಕರು, ನಗರ ಪೊಲೀಸ್‌ ಕಮಿಷನರ್‌ ಅವರಿಗೆ ದೂರು ನೀಡಿದ್ದರು.

ಕಮಿಷನರ್‌ ಸೂಚನೆಯಂತೆ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ತಬ್ರೇಜ್ ಪಾಷಾ ಹಾಗೂ ಅಬ್ದುಲ್ ದಸ್ತಗಿರ್ ವಿರುದ್ಧ ಜಯನಗರ ಠಾಣೆಯಲ್ಲಿ ಏಪ್ರಿಲ್ 26ರಂದೇ ಎಫ್‌ಐಆರ್‌ ದಾಖಲಿಸಿದ್ದರು. ಇಬ್ಬರೂ ಆರೋಪಿಗಳು, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಈಗ ಜಾಮೀನು ಅವಧಿ ಮುಕ್ತಾಯವಾಗಿದ್ದು, ಅವರಿಬ್ಬರನ್ನು ಬಂಧಿಸುವಂತೆ ಗ್ರಾಹಕರು ಒತ್ತಾಯಿಸುತ್ತಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಶನಿವಾರ ಬೆಳಿಗ್ಗೆ ಬಂದಿದ್ದ 50ಕ್ಕೂ ಹೆಚ್ಚು ಗ್ರಾಹಕರು, ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ವಿಚಾರಿಸಿದರು.

‘ಆ್ಯಂಬಿಡೆಂಟ್‌’ ಕಂಪನಿ ವಂಚನೆ ಪ್ರಕರಣದಲ್ಲಿ ತ್ವರಿತವಾಗಿ ಆರೋಪಿಗಳನ್ನು ಬಂಧಿಸಿದ್ದೀರಾ. ನಮ್ಮ ಪ್ರಕರಣದಲ್ಲಿ  ಆರೋಪಿಗಳನ್ನು ಬಂಧಿಸಿಲ್ಲವೇಕೆ’ ಎಂದು ಪ್ರಶ್ನಿಸಿದ ಗ್ರಾಹಕರು, ‘ಕೂಡಲೇ ಆರೋಪಿಗಳನ್ನು ಬಂಧಿಸಿ, ನಮ್ಮ ಹಣ ವಾಪಸ್‌ ಕೊಡಿಸಿ’ ಎಂದು ಸಿಸಿಬಿ
ಎಸಿಪಿ ಸುಬ್ರಹ್ಮಣ್ಯ ಅವರನ್ನು ಒತ್ತಾಯಿಸಿದರು. ಸುಬ್ರಹ್ಮಣ್ಯ, ಸೂಕ್ತ ಕ್ರಮದ ಭರವಸೆ ನೀಡಿದರು.

ಶೇ 10ರಿಂದ ಶೇ 15ರಷ್ಟು ಬಡ್ಡಿ: ‘ಹೂಡಿಕೆ ಮಾಡಿದ ಹಣದ ಮೇಲೆ ಶೇ 10ರಿಂದ ಶೇ 15ರಷ್ಟು ಬಡ್ಡಿ ನೀಡುವುದಾಗಿ ಆರೋಪಿಗಳು ಹೇಳಿದ್ದರು. ಅದನ್ನು ನಂಬಿ ಹಣ ಕಟ್ಟಿ ಮೋಸ ಹೋಗಿದ್ದೇವೆ’ ಎಂದು ಗ್ರಾಹಕರು ಹೇಳಿದರು.

‘ನಾಲ್ಕು ತಿಂಗಳ ಸ್ಕೀಮ್ ರೂಪಿಸಿದ್ದ ಆರೋಪಿಗಳು, ಕನಿಷ್ಠ ₹50,000 ಹಾಗೂ ಗರಿಷ್ಠ ಎಷ್ಟು ಬೇಕಾದಷ್ಟು ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದರು. ಬಡವರು ಹಾಗೂ ಮಧ್ಯಮ ವರ್ಗದವರೇ ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ. ಆರೋಪಿಗಳ ವಂಚನೆಯಿಂದಾಗಿ ಅವರೆಲ್ಲರ
ಬದುಕು ಬೀದಿಗೆ ಬಂದಿದೆ’ ಎಂದು ಹೇಳಿದರು. 

‘ಎಚ್ಚೆತ್ತುಕೊಳ್ಳದ ಜನ’

‘ಹಲವು ಕಂಪನಿಗಳು, ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಅಷ್ಟೆಲ್ಲ ಇದ್ದರೂ ಗ್ರಾಹಕರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆರ್‌ಬಿಐ ನಿಯಮಗಳನ್ವಯ ಜನರು ಹಣ ಹೂಡಿಕೆ ಮಾಡಬೇಕು’ ಎಂದರು.

‘ಅಜ್ಮೀರ್‌ ಗ್ರೂಪ್ ಕಂಪನಿಯಿಂದ ವಂಚನೆಗೀಡಾದವರು ಕಚೇರಿಗೆ ಬಂದು ಅಳಲು ತೋಡಿಕೊಂಡಿದ್ದಾರೆ. ಹೆಚ್ಚಿನ ಲಾಭದ ಆಸೆಗಾಗಿ ಅವರೆಲ್ಲ, ಹಣ ಹೂಡಿಕೆ ಮಾಡಿದ್ದರು. ಆ ಗ್ರಾಹಕರಿಗೆ ಹಣ ವಾಪಸ್‌ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಕಂಪನಿಯಿಂದ ಜನರಿಗೆ ಪಂಗನಾಮ

ಹೊಸಕೋಟೆ: ಕಂಪನಿಯೊಂದು ಪಟ್ಟಣದ ನಾಗರಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ರಾತ್ರೋರಾತ್ರಿ ಪರಾರಿಯಾಗಿದ್ದು, ಹಣ ಕಳೆದುಕೊಂಡವರಲ್ಲಿ ಮಹಿಳೆಯರು ಹೆಚ್ಚಿನವರಾಗಿದ್ದಾರೆ.

ಕಳೆದ 3 ತಿಂಗಳ ಕೆಳಗೆ ಇಲ್ಲಿನ ಪ್ರವಾಸಿ ಮಂದಿರ ರಸ್ತೆಯಲ್ಲಿ ಎಸ್.ಬಿ. ಸಲ್ಯೂಷನ್ಸ್ ಹೆಸರಿನಲ್ಲಿ ಕಂಪನಿ ಆರಂಭವಾಗಿತ್ತು. ಕಂಪನಿಯ ಸದಸ್ಯರಾಗಲು ಆರಂಭದಲ್ಲಿ ₹4,100 ಕಟ್ಟಬೇಕಿತ್ತು. ಪ್ರತಿ ಸದಸ್ಯರಿಗೆ 50 ಹಾಳೆಯ ಪುಸ್ತಕ ನೀಡುತ್ತಿದ್ದರು. ವಾರಕ್ಕೊಮ್ಮೆ ಕಂಪನಿಯವರು ತಿಳಿಸಿದಷ್ಟು ಹಾಳೆಗಳಲ್ಲಿ ಕೊಟ್ಟ ಅಂಕಿಗಳನ್ನು ಭರ್ತಿ ಮಾಡಿಕೊಂಡು ಹೋದವರಿಗೆ ಪ್ರತಿ ಹಾಳೆಗೆ ₹50 ನೀಡುತ್ತಿದ್ದರು. ಅಲ್ಲದೆ ಕಂಪನಿಯ ಚೈನ್ ಲಿಂಕ್ ಯೋಜನೆ ಅಡಿ ಸದಸ್ಯರು ಇನ್ನೊಬ್ಬ ಸದಸ್ಯರನ್ನು ಸೇರ್ಪಡೆ ಮಾಡಿಸಿದಲ್ಲಿ ₹1 ಸಾವಿರ ಕೊಡುವುದಾಗಿ ಆಮಿಷ ಒಡ್ಡಿತ್ತು.

ಹಣದ ಆಸೆಗೆ ಬಲಿಯಾದ ನಾಗರಿಕರು ಸದಸ್ಯತ್ವ ಹೆಚ್ಚಿಸುವಲ್ಲಿ ಶ್ರಮಿಸಿದರು. ಪ್ರಾರಂಭದಲ್ಲಿ ತಕ್ಷಣವೇ ₹1 ಸಾವಿರ ನೀಡುತ್ತಿದ್ದ ಕಂಪನಿ ದಿನ ಕಳೆದಂತೆ ಹಣ ಕೊಡಲು ವಿಳಂಬ ಮಾಡುತ್ತಿತ್ತು. ಕೇವಲ ಹೊಸಕೋಟೆ ಮಾತ್ರವಲ್ಲದೆ ಬೆಂಗಳೂರು ಪೂರ್ವ ತಾಲ್ಲೂಕು, ಮಾಲೂರು, ಕೋಲಾರ, ಚಿಂತಾಮಣಿ ಮುಂತಾದ ಕಡೆಗಳಿಂದಲೂ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಸದಸ್ಯತ್ವ ಪಡೆದುಕೊಂಡಿದ್ದರು ಎನ್ನಲಾಗಿದೆ.

‘ಕೂಡಿಟ್ಟ ಹಣ ತಂದು ಕಟ್ಟಿ ಸದಸ್ಯನಾದೆ. ಈಗ ಹಣವೂ ಇಲ್ಲ, ಜತೆಗೆ ನಾನು ನೋಂದಣಿ ಮಾಡಿಸಿದ ಮತ್ತೊಬ್ಬರೂ ಹಣ ಹಿಂದಿರುಗಿಸುವಂತೆ ನನಗೆ ಒತ್ತಾಯಿಸುತ್ತಿದ್ದು ದಿಕ್ಕು ತೋಚದಾಗಿದೆ’ ಎಂದು ಹಿರಂಡಹಳ್ಳಿಯ ಲಕ್ಷ್ಮಮ್ಮ ಅಳಲು ತೋಡಿಕೊಂಡರು. ಹಣ ಕಳೆದುಕೊಂಡ ಎಲ್ಲ ಮಹಿಳೆಯರ ಕತೆಯೂ ಇದೇ ಆಗಿತ್ತು. ತಮ್ಮ ಹಣ ಪಡೆಯುವಲ್ಲಿ ಸಹಾಯ ಮಾಡುವಂತೆ ನೊಂದವರು ಪೊಲೀಸರ ಮೊರೆ ಹೋಗಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !