ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಬಿ ಬಲೆಗೆ ಬಿತ್ತು ನೇಪಾಳದ ಜಾಲ

ಕೆಲಸ ಕೊಡಿಸುವುದಾಗಿ ನಂಬಿಸಿ ಕರೆ ತಂದಿದ್ದ 35 ಮಹಿಳೆಯರ ರಕ್ಷಣೆ
Last Updated 12 ಡಿಸೆಂಬರ್ 2018, 20:24 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನೇಪಾಳದ 35 ಮಹಿಳೆಯರನ್ನು ಬೆಂಗಳೂರಿಗೆ ಕರೆತಂದಿದ್ದ ಮಾನವ ಸಾಗಣೆ ಜಾಲವೊಂದು ಸಿಸಿಬಿ ಬಲೆಗೆ ಬಿದ್ದಿದೆ.

ಕಾಟನ್‌ಪೇಟೆ ಮುಖ್ಯರಸ್ತೆಯ ‘ಸುಧಾ’ ಲಾಡ್ಜ್‌ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಸಿಸಿಬಿ ಎಸಿಪಿ ಮೋಹನ್‌ಕುಮಾರ್ ನೇತೃತ್ವದ ತಂಡವು ನೇಪಾಳದ ಕಿಶನ್ ಗಾಲೆ (29), ಲಕ್ಷ್ಮಣ್ ಗಾಲೆ (29), ರಾಕೇಶ್ ಶರ್ಮಾ (38) ಹಾಗೂ ತಾಗ್ ಬಹದ್ದೂರ್ ತಾಪ (32) ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿಗಳಾದ ಆಂಧ್ರಪ್ರದೇಶದ ವೆಂಕಟೇಶ್ವರ ರಾವ್ ಹಾಗೂ ನೇಪಾಳದ ಬಿ.ನವರಾಜ್ ಅಲಿಯಾಸ್ ನಾರಾಯಣ ಬನ್ಸಾಲ್ ತಲೆಮರೆಸಿಕೊಂಡಿದ್ದಾರೆ.

ಕೆಲಸದ ಆಮಿಷ: ಬಂಧಿತರೆಲ್ಲ ನೇಪಾಳದಲ್ಲಿ ಕಾರು ಚಾಲಕರಾಗಿದ್ದಾರೆ. ಆಗಾಗ್ಗೆ ನಗರಕ್ಕೆ ಬಂದು ಹೋಗುತ್ತಿದ್ದ ನವರಾಜ್‌ಗೆ ವೆಂಕಟೇಶ್ವರ ರಾವ್ ಜತೆ ಗೆಳೆತನ ಬೆಳೆದಿತ್ತು. ಒಮನ್, ಕುವೈತ್ ಹಾಗೂ ಸೌದಿ ಅರೇಬಿಯಾದ ಕೆಲ ಕಂಪನಿಗಳ ಜತೆ ಒಡನಾಟ ಇಟ್ಟುಕೊಂಡಿರುವ ರಾವ್, ಸ್ವಚ್ಛತಾ ಕೆಲಸಗಳಿಗಾಗಿ ಮಹಿಳೆಯರನ್ನು ಕಳುಹಿಸಿಕೊಡುವುದಾಗಿ ಆ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನವರಾಜ್‌ಗೆ ಹಣದಾಸೆ ತೋರಿಸಿದ ಆತ, ನೇಪಾಳದಿಂದ ಮಹಿಳೆಯರನ್ನು ಕರೆತರುವ ಜವಾಬ್ದಾರಿಯನ್ನು ಆತನಿಗೆ ವಹಿಸಿದ್ದ. ಅಂತೆಯೇ ಆತ ಒಬ್ಬೊಬ್ಬ ಸಹಚರನ ಜತೆ ಐದಾರು ಮಹಿಳೆಯರಂತೆ 35 ಮಂದಿಯನ್ನು ರೈಲಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದ. ಎಲ್ಲರನ್ನೂ ಲಾಡ್ಜ್‌ನ ‘613’ ಹಾಗೂ ‘614’ ಸಂಖ್ಯೆಯ ಕೊಠಡಿಗಳಲ್ಲಿ ಇರಿಸಲಾಗಿತ್ತು.

‘ವಿದೇಶದ ಕಂಪನಿಗಳಲ್ಲಿ ನಮ್ಮ ಪರಿಚಯಸ್ಥರಿದ್ದಾರೆ. ತಿಂಗಳಿಗೆ ನಿಮಗೆ ₹ 25 ಸಾವಿರ ಸಂಬಳ ಹಾಗೂ ವಸತಿ ವ್ಯವಸ್ಥೆ ಕೊಡುತ್ತಾರೆ’ ಎಂದು ಮಹಿಳೆಯರನ್ನು ನಂಬಿಸಿದ್ದ ನವರಾಜ್ ಹಾಗೂ ರಾವ್, ಒಬ್ಬೊಬ್ಬರಿಂದ ₹ 10 ಸಾವಿರ ಪಡೆದು ವಿದೇಶಕ್ಕೆ ಕಳುಹಿಸುವ ತಯಾರಿಯಲ್ಲಿದ್ದರು. ಬಂಧಿತರಿಂದ ಎರಡು ಲ್ಯಾಪ್‌ಟಾಪ್, ಆರು ಮೊಬೈಲ್‌, ಸಿಮ್ ಕಾರ್ಡ್‌ಗಳು, ಆರು ನಕಲಿ ಸೀಲ್‌ಗಳು, ಪ್ರಿಂಟರ್ ಹಾಗೂ ಪಾಸ್‌ಪೋರ್ಟ್‌ಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT