ಮಂಗಳವಾರ, ಅಕ್ಟೋಬರ್ 22, 2019
25 °C
ಕೆಎಸ್‌ಸಿಎ ಹುಟ್ಟಿದ್ದ ಸೆಂಟ್ರಲ್‌ ಕಾಲೇಜು ಕ್ರಿಕೆಟ್‌ ಮೈದಾನದ ಪೆವಿಲಿಯನ್‌ ಶಿಥಿಲ, ಅನುದಾನದ ನಿರೀಕ್ಷೆ

ಕಾಯಕಲ್ಪಕ್ಕೆ ಕಾಯುತ್ತಿದೆ ಶತಮಾನ ಕಂಡ ಮೈದಾನ

Published:
Updated:
Prajavani

ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಉದಯಕ್ಕೆ ಕಾರಣವಾದ ಸೆಂಟ್ರಲ್ ಕಾಲೇಜು ಕ್ರಿಕೆಟ್‌ ಮೈದಾನದ ಪೆವಿಲಿಯನ್‌ ಶಿಥಿಲಾವಸ್ಥೆ ತಲುಪಿದೆ.

160 ವರ್ಷ ಪೂರೈಸಿರುವ ಸೆಂಟ್ರಲ್‌ ಕಾಲೇಜಿನ ಕ್ರಿಕೆಟ್‌ ಮೈದಾನದ ಪೆವಿಲಿಯನ್‌ನ ಸಣ್ಣ ಕೋಣೆಯೊಂದರಲ್ಲಿ 1933ರಲ್ಲಿ ಕೆಎಸ್‌ಸಿಎ ಚಟುವಟಿಕೆ ಆರಂಭಿಸಿತ್ತು. ಚಿನ್ನಸ್ವಾಮಿ ಕ್ರೀಡಾಂಗಣ ಆರಂಭವಾಗುವುದಕ್ಕೂ ಮುನ್ನ ಸೆಂಟ್ರಲ್‌ ಕಾಲೇಜು ಮೈದಾನದಲ್ಲೇ ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳು ನಡೆಯುತ್ತಿದ್ದವು. ಒಂದು ಕಾಲದಲ್ಲಿ ಗ್ಯಾರಿಫೀಲ್ಡ್‌ ಸೋಬರ್ಸ್, ನೀಲ್ ಹಾರ್ವೆ, ಎರ‍್ರ ಪಲ್ಲಿ ಪ್ರಸನ್ನ, ಮನ್ಸೂರ್‌ ಅಲಿ ಖಾನ್‌ ಪಟೌಡಿ, ಚಂದ್ರಶೇಖರ್‌ ಅವರಂತಹ ಕ್ರಿಕೆಟ್‌ ದಿಗ್ಗಜರು ಆಡಿದ್ದ ಮೈದಾನ ಇದಾಗಿತ್ತು. ನಗರದ ಪ್ರಮುಖ ಆಟದ ಮೈದಾನವಾಗಿದ್ದ ಇದು ರಣಜಿ ಟ್ರೋಫಿ ಪಂದ್ಯಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದಿತ್ತು.

ಹಂಚಿಹೋಗಿದ್ದ ರಾಜ್ಯದ ವಿವಿಧ ಭಾಗಗಳನ್ನು ಒಗ್ಗೂಡಿಸುವ ಸಲುವಾಗಿ ನಡೆಸಿದ್ದ ಕರ್ನಾಟಕ ಏಕೀಕರಣದ ಮೊದಲ ಸಮಾವೇಶಕ್ಕೆ ಆತಿಥ್ಯ ವಹಿಸಿದ್ದು ಕೂಡಾ ಇದೇ ಮೈದಾನ. 

8 ಎಕರೆ ವಿಸ್ತೀರ್ಣದಲ್ಲಿರುವ ಈ ಮೈದಾನದಲ್ಲಿ ರಾಷ್ಟ್ರಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವಾರು ಕ್ರೀಡಾಕೂಟಗಳು ನಡೆದಿವೆ. ಬೆಂಗಳೂರು ವಿಶ್ವವಿದ್ಯಾಲಯದ ಹಲವು ಕ್ರೀಡಾಕೂಟಗಳ ಜೊತೆಗೆ ಖಾಸಗಿ ಸಂಸ್ಥೆಗಳ ಕ್ರೀಡಾ ಚಟುವಟಿಕೆಗೆ ಇದು ಈಗಲೂ ನೆಲೆ ಒದಗಿಸುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಕ್ರಿಕೆಟ್‌, ಟೆನ್ನಿಸ್‌, ಬ್ಯಾಸ್ಕೆಟ್‌ ಬಾಲ್ ತರಬೇತಿಗಳೂ ಇಲ್ಲಿ ನಡೆಯುತ್ತವೆ. ಹಲವು ಸಮಾವೇಶಗಳು ಹಾಗೂ ಕಾರ್ಯಕ್ರಮಗಳಿಗೂ ಈ ಮೈದಾನ ಬಳಕೆ ಆಗುತ್ತಿದೆ.  ಈ ಮೈದಾನ ಇಂದು ನಿರ್ವಹಣೆ ಕೊರತೆಯಿಂದಾಗಿ ನಶಿಸುವ ಹಂತ ತಲುಪಿದೆ. ಕ್ರಿಕೆಟ್‌ ಪೆವಿಲಿಯನ್‌ ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗೋಡೆಗಳು ಶಿಥಿಲಗೊಂಡಿವೆ. ಪೆವಿಲಿಯನ್‌ನ ಆಸನ ವ್ಯವಸ್ಥೆ ಹಾಳಾಗಿದ್ದು, ಇಲಿಗಳ ಬಿಲಗಳಿಂದ ಕೂಡಿದೆ.  ಮೈದಾನದ ತುಂಬಾ ಹುಲ್ಲು ಬೆಳೆದಿದೆ. ಆಸನಗಳ ಮೇಲೆ ಬೀದಿ ನಾಯಿಗಳು ವಿರಾಜಮಾನವಾಗಿರುವ ದೃಶ್ಯ ಇಲ್ಲಿ ಮಾಮೂಲಿ. ಮೈದಾನದ ನಿರ್ವಹಣೆ ಮತ್ತಅಭಿವೃದ್ಧಿಗೆ ಅನುದಾನದ ಕೊರತೆ ಕಾಡುತ್ತಿದೆ. 

‘ನಿರ್ಲಕ್ಷ್ಯ ಹೀಗೆಯೇ ಮುಂದು ವರಿದರೆ ಈ ಮೈದಾನದ ಕ್ರಿಕೆಟ್‌ ಇತಿಹಾಸದ ಪುಟ ಸೇರಲಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಇಲ್ಲಿ ಕ್ರೀಡಾ ಭ್ಯಾಸ ನಡೆಸುವ ವಿದ್ಯಾರ್ಥಿಗಳು.

‘ಕ್ರೀಡಾ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿರುವ ಹಲವು ದಿಗ್ಗಜರನ್ನು ಹುಟ್ಟುಹಾಕಿದ ಮೈದಾನವಿದು. ಇದು ಮುಂದಿನ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವಂತಿರಬೇಕು. ಮೈದಾನಕ್ಕೆ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯ ಕಲ್ಪಿಸಬೇಕಾದ ಅಗತ್ಯವಿದೆ. ಕ್ರೀಡಾ ಇಲಾಖೆ ಈ ಮೈದಾನವನ್ನು ಅಭಿವೃದ್ಧಿ ಪಡಿಸಬೇಕು’ ಎನ್ನುತ್ತಾರೆ ಸೆಂಟ್ರಲ್‌ ಕಾಲೇಜಿನ ಹಳೆಯ ವಿದ್ಯಾರ್ಥಿ ಚಂದ್ರ ಶೇಖರ್‌. ‘ಒಂದೂವರೆ ಶತಮಾನ ಪೂರೈಸಿರುವ ಈ ಮೈದಾನದ ಕ್ರಿಕೆಟ್‌ ಪೆವಿಲಿಯನ್‌ ಪುರಾತನವಾದದ್ದು ನಿಜ. ಅದನ್ನು ನವೀಕರಿಸುವುದಕ್ಕಿಂತ  ಹೊಸ ಪೆವಿಲಿಯನ್‌ ನಿರ್ಮಿಸುವುದು ಸೂಕ್ತ. ಇದಕ್ಕಾಗಿ ಹೆಚ್ಚು ಅನುದಾನದ ಅಗತ್ಯವಿದೆ. 45 ಎಕರೆ ವ್ಯಾಪ್ತಿಯನ್ನು ಹೊಂದಿರುವ ವಿಶ್ವವಿದ್ಯಾಲಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಸಮಗ್ರ ಯೋಜನೆ ಸಿದ್ಧಪಡಿಸಬೇಕಿದೆ’ ಎಂದು ವಿವಿ ಕುಲಪತಿ ಪ್ರೊ.ಜಾಫೆಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರೀಡೆಗಳ ಅಧ್ಯಯನಕ್ಕೆ ತಜ್ಞರ ಸಮಿತಿ

‘ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಜಾಗತಿಕ ಟೆಂಡರ್‌ ಕರೆದಿದೆ. ಕ್ರೀಡೆ ಒಂದು ಪ್ರತ್ಯೇಕವಾದ ವಿಷಯ. ಕ್ರೀಡೆಗಾಗಿ ತಜ್ಞರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ಪ್ರೊ.ಜಾಫೆಟ್‌ ತಿಳಿಸಿದರು. ‘ಸಮಿತಿಯು ವಿಶ್ವವಿದ್ಯಾಲಯದಲ್ಲಿ ಕ್ರೀಡೆಯ ಅಭಿವೃದ್ಧಿ ಹಾಗೂ ಅಗತ್ಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ವರದಿ ನೀಡಲಿದೆ. ಬಳಿಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಮೂರು ತಿಂಗಳಿನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಅನುದಾನ ಒದಗಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರೀಡಾ ಇಲಾಖೆಗಳನ್ನು ಕೋರುತ್ತೇವೆ’ ಎಂದರು.

* ಹಳೆಯ ಪೆವಿಲಿಯನ್‌ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಹೆಚ್ಚು ಪ್ರಮಾಣದ ಅನುದಾನದ ಅಗತ್ಯ ಇದೆ. ಶೀಘ್ರದಲ್ಲೇ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗುವುದು.

ಪ್ರೊ.ಜಾಫೆಟ್‌, ಕುಲಪತಿ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ

* ಇಂತಹ ಐತಿಹಾಸಿಕ ಮೈದಾನ ನಮ್ಮ ಕಾಲೇಜಿನಲ್ಲಿದೆ ಎಂಬುದು ‌ಹೆಮ್ಮೆಯ ಸಂಗತಿ. ವಿವಿಯು ಕ್ರೀಡಾಸಾಧನೆಯಲ್ಲಿ ಬಹಳಷ್ಟು ಹಿಂದುಳಿದಿದೆ. ಮೈದಾನ ಅಭಿವೃದ್ಧಿ ಪಡಿಸುವುದು ಅತ್ಯಗತ್ಯ.

ಮುನಿ, ಸೆಂಟ್ರಲ್‌ ಕಾಲೇಜು ವಿದ್ಯಾರ್ಥಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)