ಹೋಟೆಲ್‌ಗೆ ನುಗ್ಗಿ ಸರ ಕಿತ್ತಿದ್ದವರ ಸೆರೆ

7
28 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಂಗಳೂರಿನ ಯುವಕ

ಹೋಟೆಲ್‌ಗೆ ನುಗ್ಗಿ ಸರ ಕಿತ್ತಿದ್ದವರ ಸೆರೆ

Published:
Updated:
Deccan Herald

ಬೆಂಗಳೂರು: ಹೋಟೆಲ್‌ಗೆ ನುಗ್ಗಿ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿರುವ ಮಲ್ಲೇಶ್ವರ ಪೊಲೀಸರು, ₹ 3.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ಜಪ್ತಿ ಮಾಡಿದ್ದಾರೆ.

ಮಂಗಳೂರಿನ ಮಹಮದ್ ರಫೀಕ್ ಹಾಗೂ ತೌಸಿಫ್ ಸಾದಿಕ್ ಬಂಧಿತರು. ತಿರುಪತಿಯ ನಿರ್ಮಲಾ, ನ.14ರಂದು ಮಲ್ಲೇಶ್ವರದ ‘ಜಿ.ಎಂ.ರಿಜಾಯ್ಸ್‌’ ಹೋಟೆಲ್‌ನಲ್ಲಿ ನಿಗದಿಯಾಗಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹಿಂದಿನ ದಿನವೇ ನಗರಕ್ಕೆ ಬಂದಿದ್ದರು. ಶೇಷಾದ್ರಿಪುರದ ಗಣೇಶ್ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಅವರು, ಬೆಳಿಗ್ಗೆ 6 ಗಂಟೆ ಸುಮಾರಿಗೆ ಹೋಟೆಲ್‌ಗೆ ಹೊರಟಿದ್ದರು.

ಲಾಡ್ಜ್ ಬಳಿ ಅವರು ಆಟೊ ಹತ್ತಿದ್ದನ್ನು ನೋಡಿದ ಸರಗಳ್ಳರು, ಬೈಕ್‌ನಲ್ಲಿ ಹಿಂಬಾಲಿಸಿ ಹೋಗಿದ್ದರು. ನಿರ್ಮಲಾ ಹೋಟೆಲ್ ಬಳಿ ಇಳಿದು ಒಳಗೆ ಹೋಗುತ್ತಿದ್ದಂತೆಯೇ ರಫೀಕ್‌ ಕೂಡ ಒಳನುಗ್ಗಿದ್ದ. ಅವರು ಲಿಫ್ಟ್‌ಗಾಗಿ ಕಾಯುತ್ತಿದ್ದಾಗ, ಏಕಾಏಕಿ ಸರ ಕಿತ್ತುಕೊಂಡು ಸಹಚರನ ಜತೆ ಪರಾರಿಯಾಗಿದ್ದ. ಈ ಸಂಬಂಧ ನಿರ್ಮಲಾ ಮಲ್ಲೇಶ್ವರ ಠಾಣೆಗೆ ದೂರು ಕೊಟ್ಟಿದ್ದರು.

ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ರಫೀಕ್‌ನ ಚಹರೆ ಸಿಕ್ಕಿತು. ಕೂಡಲೇ ಅವರು ಆ ಫೋಟೊವನ್ನು ಎಲ್ಲ ಠಾಣೆಗಳಿಗೂ ರವಾನಿಸಿ ಮಾಹಿತಿ ಕೋರಿದ್ದರು. ಆಗ ಮಂಗಳೂರು ನಗರ, ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆತನ ವಿರುದ್ಧ 25 ಸರಗಳವು ಹಾಗೂ ಮೂರು ದರೋಡೆ ಪ್ರಕರಣಗಳು ದಾಖಲಾಗಿರುವ ವಿಚಾರ ಗೊತ್ತಾಯಿತು. ಜತೆಗೆ, ಆತನ ಮನೆ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯೂ ಸಿಕ್ಕಿತು.

ಆ ಸುಳಿವು ಆಧರಿಸಿ ಮಂಗಳೂರಿನಲ್ಲೇ ರಫೀಕ್‌ನನ್ನು ವಶಕ್ಕೆ ಪಡೆದ ಪೊಲೀಸರು, ಆತ ನೀಡಿದ ಸುಳಿವು ಆಧರಿಸಿ ಬಂಟ್ವಾಳದಲ್ಲಿ ತೌಸಿಫ್‌ನನ್ನೂ ಬಂಧಿಸಿದರು. ‘ಕದ್ದ ಸರಗಳನ್ನು ಪರಿಚಿತರಿಗೆ ಮಾರಾಟ ಮಾಡಿದ್ದ ಆರೋಪಿಗಳು, ಆ ಹಣವನ್ನು ದುಷ್ಚಟಗಳಿಗೆ ವ್ಯಯಿಸಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !