35 ಮಹಿಳೆಯರ ಸರ ಕಳವು: ಸೆರೆ

ಶುಕ್ರವಾರ, ಮಾರ್ಚ್ 22, 2019
26 °C

35 ಮಹಿಳೆಯರ ಸರ ಕಳವು: ಸೆರೆ

Published:
Updated:
Prajavani

ಬೆಂಗಳೂರು: ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ 35 ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿದ್ದ ಚಾಲಾಕಿ ಚೋರರಿಬ್ಬರು ಕೆಂಪೇಗೌಡನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ತಮಿಳುನಾಡಿನ ಅರುಣ್ ಕುಮಾರ್ (33) ಹಾಗೂ ಕಾರ್ತಿಕ್ (30) ಬಂಧಿತ ಸರಗಳ್ಳರು. ಇವರಿಬ್ಬರು ಕದ್ದು ತರುತ್ತಿದ್ದ ಮಾಲನ್ನು ವಿಲೇವಾರಿ ಮಾಡುತ್ತಿದ್ದ ಬೊಮ್ಮಸಂದ್ರದ ಜಯಕುಮಾರ್ (37) ಎಂಬಾತನನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದೇವೆ. ಆರೋಪಿಗಳಿಂದ ₹ 40 ಲಕ್ಷ ಮೌಲ್ಯದ 1 ಕೆ.ಜಿ 220 ಗ್ರಾಂ ಚಿನ್ನ ಹಾಗೂ ಎರಡು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.

ಅರುಣ್ ಮತ್ತೀಕೆರೆಯ ಗೋಕುಲ ಸ್ಟ್ರೀಟ್‌ನಲ್ಲಿ ನೆಲೆಸಿದ್ದರೆ, ಕಾರ್ತಿಕ್ ಸರ್ಜಾಪುರದಲ್ಲಿ ವಾಸವಿದ್ದ. ಆರು ತಿಂಗಳ ಹಿಂದೆ ಎರಡು ಬಜಾಜ್ ಪಲ್ಸರ್ ಬೈಕ್‌ಗಳನ್ನು ಕಳವು ಮಾಡಿದ್ದ ಇವರು, ಅವುಗಳ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿದ್ದರು. ನಂತರ ಒಂದು ಬೈಕನ್ನು ತಮಿಳುನಾಡಿನಲ್ಲಿ, ಇನ್ನೊಂದು ಬೈಕನ್ನು ಬೆಂಗಳೂರಿನಲ್ಲಿ ಸರಗಳ್ಳತನ ಮಾಡಲು ಬಳಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನಗರದಲ್ಲಿ ಕುಮಾರಸ್ವಾಮಿ ಲೇಔಟ್, ಜೆ.ಪಿ.ನಗರ, ಹನುಮಂತನಗರ, ತಿಲಕ್‌ನಗರ, ಜಯನಗರ ಹಾಗೂ ಜೆ.ಪಿ.ನಗರ ಠಾಣೆಗಳ ವ್ಯಾಪ್ತಿಯಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದ ಇವರು, ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಚಾಕುವಿನಿಂದ ಬೆದರಿಸಿ ಸರ ಕಿತ್ತುಕೊಂಡು ಹೋಗುತ್ತಿದ್ದರು. ಆ ಸರಗಳನ್ನು ಸ್ನೇಹಿತ ಜಯಕುಮಾರ್‌ಗೆ ಕೊಟ್ಟು, ಆತನ ಪತ್ನಿಯ ಮೂಲಕ ವಿಲೇವಾರಿ ಮಾಡಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

‘ಕೃತ್ಯ ನಡೆದ ಸ್ಥಳಗಳ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಇಬ್ಬರೇ ವ್ಯಕ್ತಿಗಳು ಎಲ್ಲ ಕಡೆ ಸರ ದೋಚುತ್ತಿರುವುದು ಖಾತ್ರಿಯಾಯಿತು. ಅವರ ಬಂಧನಕ್ಕೆ ವಿ.ವಿ.ಪುರ ಎಸಿಪಿ ವಲಿಪಾಷಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸರಗಳವು ನಡೆದಿದ್ದ ರಸ್ತೆಗಳಲ್ಲೇ ಸಿಬ್ಬಂದಿ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ, ಆರೋಪಿಗಳು ಮತ್ತೆ ಕೃತ್ಯ ಎಸಗಲು ಬಂದು ಸಿಕ್ಕಿಬಿದ್ದರು’ ಎಂದು ಡಿಸಿಪಿ ಮಾಹಿತಿ ನೀಡಿದರು.

17 ಬೈಕ್ ಕದ್ದವರ ಬಂಧನ

ದುಬಾರಿ ಬೆಲೆಯ ಬೈಕ್‌ಗಳನ್ನು ಕಳವು ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಮಹಮದ್ ಮುಜಾಹಿದ್, ಮುನೀರ್ ಪಾಷಾ ಹಾಗೂ ಎ.ಮೋಗನ್ ಎಂಬುವರನ್ನು ಬಂಧಿಸಿರುವ ವಿ.ವಿ.ಪುರ ಪೊಲೀಸರು, ಆರೋಪಿಗಳಿಂದ ಎಂಟು ಬುಲೆಟ್ ಸೇರಿದಂತೆ 17 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ತಮಿಳುನಾಡಿನಿಂದ ಬಸ್‌ನಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು, ರಾತ್ರಿ ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡಿ ಬುಲೆಟ್, ಪಲ್ಸರ್, ಡಿಯೊ, ಯಮಹಾ ಆರ್‌–ಎಕ್ಸ್‌ನಂತಹ ಬೈಕ್‌ಗಳನ್ನು ಗುರುತಿಸಿಕೊಳ್ಳುತ್ತಿದ್ದರು.

ನಂತರ ನಕಲಿ ಕೀ ಬಳಸಿ ಅಥವಾ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ಕೊನೆಗೆ ನಂಬರ್ ಪ್ಲೇಟ್ ಬದಲಾಯಿಸಿ, ಸ್ಥಳೀಯರಿಗೆ ₹ 10 ಸಾವಿರಕ್ಕೆ ಒಂದು ಬೈಕ್‌ನಂತೆ ಮಾರಿಬಿಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !