ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡು ಹಾರಿಸಿ ಕುಖ್ಯಾತ ಸರಗಳ್ಳರಿಬ್ಬರ ಸೆರೆ

* 20ಕ್ಕೂ ಹೆಚ್ಚು ಕಡೆ ಕಳ್ಳತನ ಎಸಗಿದ್ದರು * ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದ ಪೊಲೀಸರು
Last Updated 20 ಮೇ 2019, 19:12 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳರ ಹಾವಳಿಗೆ ಕಡಿವಾಣ ಹಾಕಲು ಗಸ್ತು ತಿರುಗುತ್ತಿದ್ದ ಉತ್ತರ ವಿಭಾಗದ ಪೊಲೀಸರು, ಕುಖ್ಯಾತ ಸರಗಳ್ಳರಿಬ್ಬರನ್ನು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

ದೆಹಲಿಯ ಕರಣ್‌ ಸಿಂಗ್ (24) ಹಾಗೂ ಸುರೇಂದ್ರ ಗುಪ್ತ (26) ಬಂಧಿತ ಆರೋಪಿಗಳು. ಗುಂಡೇಟಿನಿಂದ ಅವರಿಬ್ಬರ ಕಾಲುಗಳಿಗೆ ಗಾಯವಾಗಿದ್ದು, ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಂದ ಹಲ್ಲೆಗೀಡಾಗಿರುವ ಸಬ್‍ ಇನ್‌ಸ್ಪೆಕ್ಟರ್ ಪ್ರಭು, ಪ್ರೊಬೇಷನರಿ ಪಿಎಸ್‌ಐ ರಾಜಾಸಾಬ್, ಕಾನ್‍ಸ್ಟೆಬಲ್‌ಗಳಾದ ಗಣೇಶ್ ಹಾಗೂ ಪ್ರಕಾಶ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿರುತ್ತಿದ್ದ ಆರೋಪಿಗಳು, ಬೈಕ್‌ ಕಳವು ಮಾಡುತ್ತಿದ್ದರು. ಅದರಲ್ಲೇ ಸುತ್ತಾಡಿ ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರಗಳವು ಮಾಡುತ್ತಿದ್ದರು. ಬಾಗಲಗುಂಟೆ, ಪೀಣ್ಯ, ಸೋಲದೇವನಹಳ್ಳಿ ಸೇರಿದಂತೆ ಹಲವು ಠಾಣೆಗಳ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಸರಗಳವು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

ಸಿನಿಮೀಯ ರೀತಿಯ ಕಾರ್ಯಾಚರಣೆ: ‘ರಾಜೀವ್ ಭಟ್‌ ಎಂಬುವರನ್ನುಭಾನುವಾರ ರಾತ್ರಿ ಅಡ್ಡಗಟ್ಟಿದ್ದ ಆರೋಪಿಗಳು, ಮೊಬೈಲ್ ಹಾಗೂ ಹಣ ಸುಲಿಗೆ ಮಾಡಿದ್ದರು. ಸೋಮವಾರ ನಸುಕಿನಲ್ಲಿ ಬಾಗಲಕುಂಟೆಯ ಎಂ.ಎಸ್.ರಾಮಯ್ಯ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದ ಆರೋಪಿಗಳು, ಮಹಿಳೆಯೊಬ್ಬರ ಸರವನ್ನು ಕಸಿಯಲು ಯತ್ನಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಮಹಿಳೆಯನ್ನು ತಳ್ಳಿ ಅಲ್ಲಿಂದ ಪರಾರಿಯಾಗಿದ್ದರು. ಆ ಬಗ್ಗೆ ಮಹಿಳೆ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು.’

‘ಕಳ್ಳರ ಬಗ್ಗೆ ಉತ್ತರ ವಿಭಾಗದ ಠಾಣೆಗಳ ಗಸ್ತು ಸಿಬ್ಬಂದಿಗೆ ವಿಷಯ ರವಾನಿಸಿ ಹುಡುಕಾಟ ಆರಂಭಿಸಲಾಗಿತ್ತು. ಎರಡು ವಿಶೇಷ ತಂಡಗಳನ್ನೂ ರಚಿಸಲಾಗಿತ್ತು. ಸೋಲದೇವನಹಳ್ಳಿ ಬಳಿಯ ತಮ್ಮೇನಹಳ್ಳಿಯಲ್ಲಿ ಆರೋಪಿಗಳು ಬೈಕ್‌ನಲ್ಲಿ ಹೊರಟಿದ್ದರು. ಸ್ಥಳಕ್ಕೆ ಹೋದ ಪೊಲೀಸರು, ಅವರಿಬ್ಬರನ್ನು ಹಿಡಿಯಲು ಮುಂದಾಗಿದ್ದರು. ಆರೋಪಿಗಳು ತಪ್ಪಿಸಿಕೊಂಡಿದ್ದರು. ಸಿಬ್ಬಂದಿ ಅವರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದರು’ ಎಂದು ಶಶಿಕುಮಾರ್ ವಿವರಿಸಿದರು.

‘ಅರ್ಧದಲ್ಲೇ ಬೈಕ್‌ ಬಿಟ್ಟು ಆರೋಪಿಗಳು ಓಡಲಾರಂಭಿಸಿದ್ದರು. ಅವರನ್ನು ಹಿಡಿಯಲು ಹೋದ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ಗಳಿಗೆ ಚಾಕುವಿನಿಂದ ಇರಿದಿದ್ದರು. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದ ನಂದಿನಿ ಲೇಔಟ್ ಇನ್‌ಸ್ಪೆಕ್ಟರ್‌ ಲೋಹಿತ್, ಶರಣಾಗುವಂತೆ ಆರೋಪಿಗಳಿಗೆ ಸೂಚಿಸಿದ್ದರು. ಆದರೆ, ಅವರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು’

‘ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಇನ್‌ಸ್ಪೆಕ್ಟರ್ ಲೋಹಿತ್ ಹಾಗೂ ಬಾಗಲಗುಂಟೆ ಇನ್‌ಸ್ಪೆಕ್ಟರ್ ಶಿವಸ್ವಾಮಿ, ಆರೋಪಿಗಳ ಕಾಲಿಗೆ ತಲಾ ಎರಡು ಸುತ್ತು ಗುಂಡು ಹಾರಿಸಿದ್ದರು’ ಎಂದು ಶಶಿಕುಮಾರ್ ತಿಳಿಸಿದರು.

ವೇಶ್ಯೆಯರನ್ನೇ ಪತ್ನಿಯೆಂದು ಮನೆ ಬಾಡಿಗೆ

‘ದೆಹಲಿಯಿಂದ ವಿಮಾನದಲ್ಲಿನಗರಕ್ಕೆ ಬರುತ್ತಿದ್ದ ಆರೋಪಿಗಳು, ಇಲ್ಲಿಯೇ 2–3 ತಿಂಗಳು ಮನೆ ಬಾಡಿಗೆ ಮಾಡಿಕೊಂಡು ವಾಸವಿರುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ವೇಶ್ಯೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ಅವರನ್ನೇ ತಮ್ಮ ಪತ್ನಿಯರು ಎಂದು ಮಾಲೀಕನಿಗೆ ಸುಳ್ಳು ಹೇಳಿ ಮನೆ ಬಾಡಿಗೆ ಪಡೆಯುತ್ತಿದ್ದರು. ಬ್ಯಾಡರಹಳ್ಳಿಯ ಮನೆಯಲ್ಲಿ ಉಳಿದಿದ್ದರು. ಆ ಮನೆಯ ಮೇಲೂ ದಾಳಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಕದ್ದ ಚಿನ್ನಾಭರಣ ಜಪ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಗಳ ಜೊತೆಗಿದ್ದ ಮಹಿಳೆಯರಿಬ್ಬರು, ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.

ಆರೋಪಿಗಳ ಸುಳಿವು ಕೊಟ್ಟ ಕ್ಯಾಮೆರಾಗಳು!

ಬೈಕ್ ಹಾಗೂ ಜೀಪಿನಲ್ಲಿ ಆರೋಪಿಗಳನ್ನು ಬೆನ್ನಟ್ಟಿದ್ದ ಪೊಲೀಸರಿಗೆ, ಆಯಾ ಠಾಣೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳೇ ನಿಖರ ಸುಳಿವು ನೀಡಿದವು.

‘ಆರೋಪಿಗಳು ಸಾಗುತ್ತಿದ್ದ ರಸ್ತೆಯಲ್ಲಿದ್ದ ಕ್ಯಾಮೆರಾ ದೃಶ್ಯಗಳನ್ನು ವಿಳಾಸದ ಸಮೇತ ವಾಟ್ಸ್‌ಆ್ಯಪ್‌ನಲ್ಲಿ ಪೊಲೀಸರಿಗೆ ರವಾನಿಸಲಾಗುತ್ತಿತ್ತು. ಅದು ಆರೋಪಿಗಳನ್ನು ಬೆನ್ನಟ್ಟಿ ಹಿಡಿಯಲು ನೆರವಾಯಿತು’ ಎಂದು ಡಿಸಿಪಿ ಶಶಿಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT