ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಂಬಲ್‌’ ಚಿತ್ರ ಪ್ರದರ್ಶನ ತಡೆಗೆ ಹೈಕೋರ್ಟ್‌ ನಕಾರ

Last Updated 21 ಫೆಬ್ರುವರಿ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ. ರವಿ ಜೀವನಾಧಾರಿತ ಚಿತ್ರ ಎಂದು ಆಕ್ಷೇಪಿಸಲಾಗಿರುವ ‘ಚಂಬಲ್’ ಚಲನಚಿತ್ರ ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

‘ಕೇಂದ್ರ ಸೆನ್ಸಾರ್‌ ಮಂಡಳಿ ನೀಡಿರುವ ಅನುಮತಿ ಅನುಸಾರ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಚಿತ್ರದ ಸಿ.ಡಿಯನ್ನು ಇದೇ 25ಕ್ಕೆ ಕೋರ್ಟ್‌ಗೆ ಸಲ್ಲಿಸಿ’ ಎಂದು ಚಿತ್ರ ನಿರ್ಮಾಪಕರಿಗೆ ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ನಿರ್ದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎನ್‌.ಪಿ.ಅಮೃತೇಶ್‌, ‘ಚಿತ್ರವನ್ನು ಡಿ.ಕೆ.ರವಿ ಮತ್ತು ಅವರ ಕುಟುಂಬದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಚಿತ್ರದ ಟ್ರೇಲರ್‌ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಆದ್ದರಿಂದ ಚಿತ್ರ ಬಿಡುಗಡೆಗೆ ತಡೆ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್‌ ಜನರಲ್ ಸಿ.ಶಶಿಕಾಂತ್‌, ‘ಚಿತ್ರಕ್ಕೆ 2018ರ ನವೆಂಬರ್‌ 30ರಂದು ಸೆನ್ಸಾರ್ ಪ್ರಮಾಣಪತ್ರ ನೀಡಲಾಗಿದೆ. ಈತನಕ ಅರ್ಜಿದಾರರು ಈ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಅಂತೆಯೇ ಅರ್ಜಿದಾರರು ಆರೋಪಿಸಿರುವಂತೆ ಇದರಲ್ಲಿ ಯಾವುದೇ ಆಕ್ಷೇಪಾರ್ಹ ಅಥವಾ ಕಾನೂನ ಬಾಹಿರ ಅಂಶಗಳಿಲ್ಲ’ ಎಂದು ತಿಳಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಚಿತ್ರ ಬಿಡುಗಡೆಗೆ ಇನ್ನೊಂದು ದಿನವಷ್ಟೇ ಬಾಕಿ ಇದೆ. ಈ ಹಂತದಲ್ಲಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿತು. ವಿಚಾರಣೆಯನ್ನು ಮಾರ್ಚ್ 8ಕ್ಕೆ ಮುಂದೂಡಲಾಗಿದೆ.

ಆದೇಶ ಪ್ರಕಟವಾದ ನಂತರ ಡಿ.ಕೆ.ರವಿ ಅವರ ತಾಯಿ ಗೌರಮ್ಮ, ಕೋರ್ಟ್‌ ಕಾರಿಡಾರ್‌ನಲ್ಲಿ ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT