ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಂಬಲ್‌’ ಚಿತ್ರ ಪ್ರದರ್ಶನ ತಡೆ ಕೋರಿ ರಿಟ್ ಅರ್ಜಿ: ನೋಟಿಸ್‌

Last Updated 19 ಫೆಬ್ರುವರಿ 2019, 19:29 IST
ಅಕ್ಷರ ಗಾತ್ರ

ಬೆಂಗಳೂರು: ‘ನೀನಾಸಂ ಸತೀಶ್ ನಟನೆಯ ಚಂಬಲ್ ಚಿತ್ರದ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ತಡೆ ನೀಡಬೇಕು’ ಎಂದು ಕೋರಿ ಮೃತ ಐಎಎಸ್ ಅಧಿಕಾರಿ ಡಿ.ಕೆ. ರವಿ ಪೋಷಕರು ಸಲ್ಲಿಸಿರುವ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ನೀನಾಸಂ ಸತೀಶ್ ಹಾಗೂ ಚಿತ್ರತಂಡ ಸೇರಿದಂತೆ 9 ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಡಿ.ಕೆ. ರವಿ ತಾಯಿ ಗೌರಮ್ಮ ಹಾಗೂ ತಂದೆ ಕರಿಯಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿ, ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ, ನಿರ್ಮಾಪಕರಾದ ಎನ್‌.ದಿನೇಶ್‌ ಕುಮಾರ್ ಹಾಗೂ ಮ್ಯಾಥ್ಯೂ ವರ್ಗೀಸ್‌, ನಿರ್ದೇಶಕ ಜಾಕೊಬ್‌ ವರ್ಗಿಸ್‌, ಚಿತ್ರದ ನಾಯಕ ನಟ ನೀನಾಸಂ ಸತೀಶ್, ನಾಯಕಿ ಸೋನುಗೌಡ, ವಿತರಕರಾದ ಜಾಕೋಬ್‌ ಫಿಲಂಸ್‌ಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಲಾಗಿದೆ.

ಅರ್ಜಿದಾರ ಮನವಿ ಏನು?: ‘ಸಿನಿಮಾದ ಟ್ರೇಲರ್ ಗಮನಿಸಿದರೆ ಅದು ನಮ್ಮ ಮಗನ ಜೀವನ ಆಧರಿಸಿಯೇ ನಿರ್ಮಿಸಿರುವ ಚಿತ್ರ ಎಂಬಂತಿದೆ. ಇದರಲ್ಲಿ ನಮ್ಮ ಮಗನ ವ್ಯಕ್ತಿತ್ವ ಹಾಗೂ ಚಾರಿತ್ರ್ಯಕ್ಕೆ ಧಕ್ಕೆ ಬರುವ ರೀತಿ
ಯಲ್ಲಿ ಚಿತ್ರಿಸಲಾಗಿದೆ. ಒಂದು ವೇಳೆ ಚಿತ್ರ ಬಿಡುಗಡೆಯಾಗಿ ಪ್ರದರ್ಶನ ಕಂಡರೆ ಡಿ.ಕೆ. ರವಿ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಆದ್ದರಿಂದ ಚಿತ್ರದ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಇದೇ 23ರಂದು ರಾಜ್ಯ ಹಾಗೂ ಹೊರರಾಜ್ಯಗಳ ಚಿತ್ರಮಂದಿರಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಅರ್ಜಿದಾರರ ಪರ ವಕೀಲ ಎನ್.ಪಿ. ಅಮೃತೇಶ್ ವಕಾಲತ್ತು ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT