ಯಾರದ್ದೋ ಫ್ಲ್ಯಾಟ್ ಇನ್ಯಾರಿಗೋ ಬಾಡಿಗೆ !

ಶನಿವಾರ, ಮಾರ್ಚ್ 23, 2019
24 °C
ಸಾಫ್ಟ್‌ವೇರ್ ಉದ್ಯೋಗಿಗಳಿಗೆ ವಂಚಿಸಿದ್ದ ಆರೋಪಿ ಸೆರೆ

ಯಾರದ್ದೋ ಫ್ಲ್ಯಾಟ್ ಇನ್ಯಾರಿಗೋ ಬಾಡಿಗೆ !

Published:
Updated:
Prajavani

ಬೆಂಗಳೂರು: ಯಾರದ್ದೋ ಫ್ಲ್ಯಾಟ್‌ಗಳನ್ನು ಇನ್ಯಾರಿಗೋ ಬಾಡಿಗೆ ಕೊಟ್ಟು ಲಕ್ಷಾಂತರ ರೂಪಾಯಿ ಮುಂಗಡ ಪಡೆದು ವಂಚಿಸುತ್ತಿದ್ದ ಮೊಹಮದ್ ಅಬ್ದುಲ್ ರಹೀಂ (47) ಎಂಬಾತನನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ರಹೀಂ, 15 ವರ್ಷಗಳ ಹಿಂದೆ ನಗರಕ್ಕೆ ಬಂದು ಬಿಟಿಎಂ ಲೇಔಟ್‌ನಲ್ಲಿ ನೆಲೆಸಿದ್ದ. 2017ರಿಂದ ಈ ದಂಧೆ ಪ್ರಾರಂಭಿಸಿದ ಆರೋಪಿ, ಇದುವರಿಗೆ 12 ಮಂದಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ₹ 20 ಲಕ್ಷ ವಂಚಿಸಿದ್ದಾನೆ. ಹೆಚ್ಚಿನ ವಿಚಾರಣೆಗಾಗಿ ರಹೀಂನನ್ನು ಆರು ದಿನ ‍ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

ಮಾರತ್ತಹಳ್ಳಿಯ ಕೆಲ ಅಪಾರ್ಟ್‌ಮೆಂಟ್ ಸಮುಚ್ಚಯಗಳಿಗೆ ಹೋಗುತ್ತಿದ್ದ ಆರೋಪಿ, ‘ನಾನು ಸ್ಕಿಲ್ ಡೆವಲಪ್‌ಮೆಂಟ್ ತರಬೇತುದಾರನಾಗಿದ್ದು, ಎರಡು ತಿಂಗಳ ಮಟ್ಟಿಗೆ ಫ್ಲ್ಯಾಟ್ ಬಾಡಿಗೆ ಬೇಕು’ ಎಂದು ಮಾಲೀಕರಿಗೆ ನಂಬಿಸಿ ಬಾಡಿಗೆ ಪಡೆದುಕೊಳ್ಳುತ್ತಿದ್ದ.

ನಂತರ ಎಲ್ಲ ಕೊಠಡಿಗಳ ಫೋಟೊ ತೆಗೆದು ‘99 acres’, ‘comman floor.com’, ‘magic brics’ ಎಂಬ ವೆಬ್‌ಸೈಟ್‌ಗಳಲ್ಲಿ ಹಾಕುತ್ತಿದ್ದ. ‘ನಾನು ಅಪಾರ್ಟ್‌ ಮೆಂಟ್‌ನ ಮಾಲೀಕ. ಕಡಿಮೆ ಬೆಲೆಗೆ ಫ್ಲ್ಯಾಟ್‌ಗಳು ಬಾಡಿಗೆಗೆ ಇವೆ’ ಎಂದು ಜಾಹೀರಾತು ಪ್ರಕಟಿಸುತ್ತಿದ್ದ.

ಅದನ್ನು ನೋಡಿ ಕರೆ ಮಾಡುತ್ತಿದ್ದವರನ್ನು ಕರೆಸಿಕೊಂಡು ಫ್ಲ್ಯಾಟ್ ತೋರಿಸುತ್ತಿದ್ದ ಆರೋಪಿ, ₹ 3 ಲಕ್ಷ ಮುಂಗಡ ಪಡೆದು ತಿಂಗಳ ನಂತರ ಫ್ಲ್ಯಾಟ್‌ಗೆ ಬರುವಂತೆ ಹೇಳಿ ಕಳುಹಿಸುತ್ತಿದ್ದ. ಇದೇ ರೀತಿ ಒಂದೇ ಫ್ಲ್ಯಾಟನ್ನು ಹಲವರಿಗೆ ತೋರಿಸಿ ಸುಲಿಗೆ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾನಾ ಹೆಸರು: ರಹೀಂ ಪ್ರತಿಯೊಬ್ಬರ ಬಳಿ ಹಣ ಪಡೆಯುವಾಗಲೂ ಒಂದೊಂದು ಹೆಸರಿನಿಂದ ತನ್ನನ್ನು ಪರಿಚಯ ಮಾಡಿಕೊಂಡಿದ್ದ. ರಾಹುಲ್ ರಾಹಿಲ್, ಎಂ.ಎ.ಆರ್.ನೌಮನ್ ಸಲ್ಮಾನ್, ಎಂ.ಎ.ಆರ್.ಸಾರಿಕ್, ರಾಕೀಬ್, ರಿಶಾನ್, ಫೈಝಿ ಹಾಗೂ ಯಾಸಿರ್ ಎಂಬ ಹೆಸರುಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಮಾಲೀಕರಿಗೆ ಶಾಕ್ 
ಎಚ್‌.ಬಿ.ಜಗನ್ನಾಥ್ ಎಂಬುವರು 2018ರ ಆಗಸ್ಟ್‌ನಲ್ಲಿ ರಹೀಂಗೆ ಫ್ಲ್ಯಾಟ್‌ ಬಾಡಿಗೆ ಕೊಟ್ಟಿದ್ದರು. ನವೆಂಬರ್‌ನಲ್ಲಿ ಅವರು ಬಾಡಿಗೆ ಕೇಳಲು ಹೋದಾಗ ನಾಲ್ವರು ಯುವಕರು ಆ ಫ್ಲ್ಯಾಟ್‌ನಲ್ಲಿದ್ದರು.

ವರನ್ನು ವಿಚಾರಿಸಿದಾಗ, ‘ರಹೀಂ ಎಂಬುವರಿಗೆ ₹ 2 ಲಕ್ಷ ಮುಂಗಡ ಕೊಟ್ಟು ಬಾಡಿಗೆ ಬಂದಿದ್ದೇವೆ. ಅಲ್ಲದೆ, ತಿಂಗಳಿಗೆ ₹ 40 ಸಾವಿರದಂತೆ ಈಗಾಗಲೇ ಮೂರು ತಿಂಗಳ ಬಾಡಿಗೆಯನ್ನೂ ಕೊಟ್ಟಿದ್ದೇವೆ’ ಎಂದು ಹೇಳಿದ್ದರು. ಆ ವಿಚಾರ ಕೇಳಿ ಗಾಬರಿಗೊಂಡ ಮಾಲೀಕರು, ಕೂಡಲೇ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.

**

ರಹೀಂನಿಂದ ವಂಚನೆಗೆ ಒಳಗಾದವರು ಮಾರತ್ತಹಳ್ಳಿ ಠಾಣೆಗೆ (080 25639999) ಅಥವಾ ಇನ್‌ಸ್ಪೆಕ್ಟರ್‌ಗೆ (94808–01615) ಕರೆ ಮಾಡಿ ದೂರು ನೀಡಬಹುದು.
–ಅಬ್ದುಲ್ ಅಹದ್, ವೈಟ್‌ಫೀಲ್ಡ್ ಡಿಸಿಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !