ಚೆಕ್ ಬೌನ್ಸ್ ಪ್ರಕರಣ ಆರೋಪಿಗೆ ಜೈಲು

ಬುಧವಾರ, ಏಪ್ರಿಲ್ 24, 2019
28 °C
ನ್ಯಾಯಾಧೀಶರ ಕಾರ್ಯವೈಖರಿಗೆ ಹೈಕೋರ್ಟ್ ಅತೃಪ್ತಿ

ಚೆಕ್ ಬೌನ್ಸ್ ಪ್ರಕರಣ ಆರೋಪಿಗೆ ಜೈಲು

Published:
Updated:
Prajavani

ಬೆಂಗಳೂರು: ಚೆಕ್ ಬೌನ್ಸ್‌ ಪ್ರಕರಣವೊಂದರಲ್ಲಿ ಆರೋಪಿಯೊಬ್ಬರು 50 ದಿನಗಳ ಜೈಲು ವಾಸ ಅನುಭವಿಸಬೇಕಾಗಿ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌, ನಾಗಮಂಗಲ ಮ್ಯಾಜಿಸ್ಟ್ರೇಟ್ ಕೋರ್ಟ್‌ ನ್ಯಾಯಾಧೀಶರ ಕಾರ್ಯ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದೆ.

‘ಜಾಮೀನು ರಹಿತ ವಾರಂಟ್‌ ಹೊರಡಿಸಲಾದ ಪ್ರಕರಣಗಳಲ್ಲಿ ರಿಕಾಲ್‌ಗಾಗಿ ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಗಳನ್ನು ಆಯಾ ದಿನವೇ ವಿಚಾರಣೆ ನಡೆಸಬೇಕು. ಆದರೆ, ಈ ಪ್ರಕರಣದಲ್ಲಿ ನ್ಯಾಯಾಧೀಶರ ಕಾರ್ಯವೈಖರಿ ಅನ್ಯಾಯಕ್ಕೆ ಒಂದು ಉತ್ಕೃಷ್ಟ ಉದಾಹರಣೆಯಂತಿದೆ’ ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಬಿಂಡಿಗನವಿಲೆ ಹೋಬಳಿಯ ಅದ್ದಿಹಳ್ಳಿ ಹ್ಯಾಂಡ್‌ಪೋಸ್ಟ್‌ನ ಗುಣವೆಂಕಟರಮಣೇಗೌಡ ಎಂಬುವರು ಚೆಕ್‌ಬೌನ್ಸ್‌ ಪ್ರಕರಣವೊಂದರಲ್ಲಿ ಆರೋಪಿ.

‘ಗುಣವೆಂಕಟರಮಣೇಗೌಡ ಅವರು ನಿಯಮಿತವಾಗಿ ಕೋರ್ಟ್‌ ವಿಚಾರಣೆಗೆ ಹಾಜರಾಗದ ಕಾರಣ ಅವರ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಲಾಗಿತ್ತು. ಈ ವಾರಂಟ್‌ ರಿಕಾಲ್‌ ಮಾಡುವಂತೆ ಸಲ್ಲಿಸಲಾದ ಅವರ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶರು ನ್ಯಾಯೋಚಿತವಾಗಿ ವಿಚಾರಣೆ ನಡೆಸದೇ ಅವರು 50 ದಿನ ಜೈಲು ವಾಸ ಅನುಭವಿಸುವಂತೆ ಮಾಡಿರುವುದು ಸರಿಯಲ್ಲ’ ಎಂದು ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನ್ಯಾಯಾಧೀಶರು ರಿಕಾಲ್‌ ಅರ್ಜಿಯನ್ನು ಸೂಕ್ತ ಸಮಯದಲ್ಲಿ ಪರಿಗಣಿಸದೇ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದಕ್ಕೆ ತಮ್ಮ ಆದೇಶದಲ್ಲಿ ನಿರ್ದಿಷ್ಟ ಕಾರಣಗಳನ್ನು ನಮೂದಿಸಿಲ್ಲ. ಹೀಗಾಗಿ ಆರೋಪಿಯ ಮೂಲಭೂತ ಹಕ್ಕುಗಳ ರಕ್ಷಣೆಯ ಉಲ್ಲಂಘನೆಯಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

‘ಈ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಬಹುದಾಗಿತ್ತು. ಅಷ್ಟಕ್ಕೂ ಅವರು ಮೊದಲು ಜಾಮೀನು ಪಡೆದಿದ್ದರು. ಆದರೆ, ನಿಯಮಿತವಾಗಿ ಹಾಜರಾಗದ ಕಾರಣ ಅವರ ವಿರುದ್ಧ ವಾರಂಟ್‌ ಹೊರಡಿಸಲಾಗಿತ್ತು. ಆದರೆ, ರಿಕಾಲ್‌ ವಾರಂಟ್‌ ರದ್ದುಗೊಳಿಸುವಂತೆ ಕೋರಿದ ಅರ್ಜಿಯನ್ನು ನ್ಯಾಯಾಧೀಶರು ಅಂದೇ ವಿಚಾರಣೆ ನಡೆಸದೇ ಆರೋಪಿಗೆ ಅನ್ಯಾಯ ಮಾಡಿದಂತಾಗಿದೆ’ ಎಂದು ವಿವರಿಸಲಾಗಿದೆ.

‘ಅರ್ಜಿದಾರ ಆರೋಪಿಯು ವಾರಂಟ್‌ ರಿಕಾಲ್‌ಗೆ ಸಲ್ಲಿಸುವ ಅರ್ಜಿಯನ್ನು ತಕ್ಷಣವೇ ವಿಚಾರಣೆ ನಡೆಸಿ. ಈ ಕುರಿತಂತೆ ಕೈಗೊಂಡ ಮುಂದಿನ ಕ್ರಮಗಳನ್ನು ಹೈಕೋರ್ಟ್‌ಗೆ ತಿಳಿಸಿ’ ಎಂದೂ ನ್ಯಾಯಪೀಠ ನಿರ್ದೇಶಿಸಿದೆ.

‘ಈ ನ್ಯಾಯಾಧೀಶರ ನ್ಯಾಯದಾನ ಪ್ರಕ್ರಿಯೆಯ ವೈಖರಿಯನ್ನು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು’ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನ್ಯಾಯಪೀಠ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !