ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಪತ್ರ; ಎಫ್‌ಐಆರ್

ಶನಿವಾರ, ಏಪ್ರಿಲ್ 20, 2019
29 °C

ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಪತ್ರ; ಎಫ್‌ಐಆರ್

Published:
Updated:

ಬೆಂಗಳೂರು: ₹28 ಸಾವಿರ ಪ್ರಾಯೋಜಕತ್ವದ ಹಣ ಪಡೆಯುವುದಕ್ಕಾಗಿ ಬ್ಯಾಂಕ್ ಆಫ್‌ ಇಂಡಿಯಾದ ವಲಯ ಕಚೇರಿಯ ವ್ಯವಸ್ಥಾಪಕರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಹೆಸರಿನಲ್ಲಿ ನಕಲಿ ಶಿಫಾರಸು ಪತ್ರ ನೀಡಲಾಗಿದ್ದು, ಆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.‌

‘ನಕಲಿ ಪತ್ರದ ಸಂಬಂಧ ವಿಜಯಭಾಸ್ಕರ್‌ ಅವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಕೃತ್ಯ ನಡೆದಿರುವ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ನಮ್ಮ ಠಾಣೆಗೆ ವರ್ಗಾಯಿಸಲಾಗಿದೆ. ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.

‘ಜಯದೀಬನ್ ರಾಮಮೂರ್ತಿ ಎಂಬಾತ, 2019ರ ಜ. 14ರಂದು ಕೆ.ಜಿ.ರಸ್ತೆಯಲ್ಲಿರುವ ಬ್ಯಾಂಕ್ ಆಫ್‌ ಇಂಡಿಯಾದ ವಲಯ ಕಚೇರಿ ವ್ಯವಸ್ಥಾಪಕ ಈಶ್ವರಪ್ಪ ಅವರನ್ನು ಭೇಟಿಯಾಗಿದ್ದ. ‘ನಾನು ಪ್ಯಾರಾ ಬ್ಯಾಡ್ಮಿಂಟನ್ – 2019’ರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದೇನೆ. ₹28 ಸಾವಿರ ಪ್ರಾಯೋಜಕತ್ವದ ಹಣ ನೀಡಿ’ ಎಂದು ಮನವಿ ಸಲ್ಲಿಸಿದ್ದ. ಮುಖ್ಯ ಕಾರ್ಯದರ್ಶಿಯವರ ನಕಲಿ ಶಿಫಾರಸು ಪತ್ರವನ್ನೂ ಕೊಟ್ಟಿದ್ದ’ ಎಂದರು.

‘ಮುಖ್ಯ ಕಾರ್ಯದರ್ಶಿಯವರ ಸೋಗಿನಲ್ಲಿ ಈಶ್ವರಪ್ಪ ಅವರಿಗೆ ಕರೆ ಮಾಡಿದ್ದ ಆತ, ‘ಮನವಿ ಸಲ್ಲಿಸಿರುವ ವ್ಯಕ್ತಿಗೆ ಪ್ರಾಯೋಜಕತ್ವದ ಹಣ ನೀಡಿ’ ಎಂದಿದ್ದ. ಅನುಮಾನಗೊಂಡ ಈಶ್ವರಪ್ಪ, ಮುಖ್ಯ ಕಾರ್ಯದರ್ಶಿ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿ ವಿಜಯ್‌ಭಾಸ್ಕರ್‌ ಅವರಿಗೆ ವಿಷಯ ತಿಳಿಸಿದ್ದರು. ನಕಲಿ ಪತ್ರವನ್ನೂ ತೋರಿಸಿದ್ದರು’ ಎಂದು ಪೊಲೀಸರು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !