ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌ಶ್ಯೂರ್‌ ಕಾಮಗಾರಿ– ಕೊಚ್ಚೆಯಾದ ಕಾಟನ್‌ ಪೇಟೆ

ಕಾಮಗಾರಿ ಪರಿಶೀಲಿಸಿದ ಮೇಯರ್‌ l ಆಮೆಗತಿಯ ಕೆಲಸ–ಸ್ಥಳೀಯರ ದೂರು
Last Updated 3 ಜೂನ್ 2019, 20:45 IST
ಅಕ್ಷರ ಗಾತ್ರ

ಬೆಂಗಳೂರು: ಕಾಟನ್‌ಪೇಟೆ ಮುಖ್ಯರಸ್ತೆಯನ್ನುಗೂಡ್‌ಶೆಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆವರೆಗೆ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಮೇಯರ್‌ ಗಂಗಾಂಬಿಕೆ ಸೋಮವಾರ ಪರಿಶೀಲನೆ ನಡೆಸಿದರು. ಕಾಮಗಾರಿಯನ್ನು ಚುರುಕುಗೊಳಿಸುವಂತೆ ಪಾಲಿಕೆಯ ಯೋಜನಾ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

₹ 11.71 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಫೆಬ್ರುವರಿಯಲ್ಲಿ ಆರಂಭಿಸಲಾಗಿತ್ತು. ಕೆಲಸವು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಮೇಯರ್ ಬಳಿ ಅಳಲು ತೋಡಿಕೊಂಡಿದ್ದರು.

‘ಈ ಕೆಲಸ ಆರಂಭವಾದಂದಿನಿಂದ ವ್ಯಾಪಾರವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗಲಂತೂ ರಸ್ತೆಗಳು ಕೆಸರುಮಯವಾಗುತ್ತಿದೆ. ಇಲ್ಲಿನ ಇತರ ರಸ್ತೆಗಳೂ ಕಿರಿದಾಗಿರುವುದರಿಂದ ಅವುಗಳಲ್ಲೂ ವಾಹನ ದಟ್ಟಣೆ ಹೆಚ್ಚುತ್ತಿದೆ. ನಮ್ಮ ಪರಿಸ್ಥಿತಿ ಶೋಚನೀಯವಾಗಿದೆ’ ಎಂದು ಸ್ಥಳೀಯ ವರ್ತಕರು ಸಮಸ್ಯೆ ಹೇಳಿಕೊಂಡರು.

ಇಲ್ಲಿ ರಸ್ತೆಯ ವೈಟ್‌ ಟಾಪಿಂಗ್‌ ಜೊತೆಗೆ ರಾಜಕಾಲುವೆ ದುರಸ್ತಿ ಹಾಗೂ ಒಳಚರಂಡಿ ಕೊಳವೆ ಅಳವಡಿಸುವ ಕಾಮಗಾರಿಗಳೂ ನಡೆಯುತ್ತಿವೆ. 138 ಮೀ ಉದ್ದದ ರಾಜಕಾಲುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇನ್ನು 168 ಮೀ. ಕೆಲಸ ಬಾಕಿ ಇದೆ. ಇನ್ನೊಂದೆಡೆ, ಜಲಮಂಡಳಿಯು ಅಕ್ಕಿಪೇಟೆಯಿಂದ ಪಕ್ಷಿ ಗಾರ್ಡನ್‌ವರೆಗೆ ಒಳಚರಂಡಿ ಕೊಳವೆಗಳನ್ನು ರಸ್ತೆಯ ಎರಡು ಬದಿಗಳಲ್ಲಿ ಅಳವಡಿಸುತ್ತಿದ್ದು, ಇನ್ನೂ 100 ಮೀಟರ್‌ಗಳಷ್ಟು ಕೊಳವೆ ಜೋಡಿಸಬೇಕಿದೆ.ಇವೆರಡು ಕಾಮಗಾರಿಗಳು ಪೂರ್ಣಗೊಳ್ಳದೇ ವೈಟ್‌ಟಾಪಿಂಗ್‌ ನಡೆಸುವುದು ಕಷ್ಟ ಎಂದು ಅಧಿಕಾರಿಗಳು ವಸ್ತುಸ್ಥಿತಿ ವಿವರಿಸಿದರು.

ಒಳಚರಂಡಿ ಕೊಳವೆ ಅಳವಡಿಸುವ ಕೆಲಸ ಪೂರ್ಣಗೊಂಡಿರುವ ಕಡೆ ವೈಟ್‌ಟಾಪಿಂಗ್‌ ಕೆಲಸವನ್ನು ಮೊದಲು ಕೈಗೆತ್ತಿಕೊಳ್ಳಬೇಕು. ರಾಜಕಾಲುವೆ ಕೆಲಸ ನಡೆಯುತ್ತಿರುವ ಕಡೆ ನಂತರ ರಸ್ತೆ ಅಭಿವೃದ್ಧಿಪಡಿಸಿ ಎಂದು ಮೇಯರ್‌ ಸಲಹೆ ನೀಡಿದರು.

ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವುದಾಗಿ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ.ನಾಗರಾಜ್‌ ಭರವಸೆ ನೀಡಿದರು.

ಫುಟ್‌ಪಾತ್‌ನಲ್ಲಿ ಕೆಲವೆಡೆ ಚಪ್ಪಡಿ ಕಿತ್ತು ಹೋಗಿದ್ದವು. ಅವುಗಳನ್ನು ಸರಿಪಡಿಸುವಂತೆ ಮೇಯರ್‌ ಸೂಚನೆ ನೀಡಿದರು. ಮೆಜೆಸ್ಟಿಕ್ ಸುತ್ತಮುತ್ತ ಕೈಗೆತ್ತಿಕೊಂಡಿರುವ ಟೆಂಡರ್ ಶ್ಯೂರ್ ಕಾಮಗಾರಿಯನ್ನೂ ಮೇಯರ್‌ ಪರಿಶೀಲಿಸಿದರು.

ಆಯುರ್ವೇದ ಕಾಲೇಜಿನ ಪಕ್ಕದ ಸರ್ವಿಸ್ ರಸ್ತೆಯನ್ನು 13 ಅಡಿಗಳಷ್ಟು ವಿಸ್ತರಿಸಲಾಗುವುದು. ಮೆಜೆಸ್ಟಿಕ್‌ನಲ್ಲಿ ಇನ್ನೂ ಎರಡು ಕಡೆ ಸ್ಕೈವಾಕ್‌ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಮೌರ್ಯ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಅನುಪಯುಕ್ತ ವಸ್ತುಗಳನ್ನು ಪಾದಚಾರಿ ಮಾರ್ಗದಲ್ಲಿ ರಾಶಿ ಹಾಕಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮೇಯರ್‌ ತಕ್ಷಣವೇ ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.

**

ಚಿಕ್ಕಪೇಟೆ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಸವಾಲಿನಿಂದ ಕೂಡಿದೆ. ದಿನದ ಎಲ್ಲ ಸಮಯದಲ್ಲಿ ಕಾಮಗಾರಿ ಸಾಧ್ಯವಿಲ್ಲ. ಬೇಗೆ ಕೆಲಸದ ಪೂರ್ಣಕ್ಕೆ ಸೂಚಿಸಿದ್ದೇನೆ
- ಗಂಗಾಂಬಿಕೆ, ಮೇಯರ್

**

ಅಂಕಿ ಅಂಶ

1.147 ಕಿ.ಮೀ - ಕಾಟನ್‌ಪೇಟೆ ಮುಖ್ಯ ರಸ್ತೆಯ ಉದ್ದ

₹ 7.73 ಕೋಟಿ - ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯ ಅಂದಾಜು ವೆಚ್ಚ

₹ 3 ಕೋಟಿ - ಒಳಚರಂಡಿ ಕೊಳವೆ ಅಳವಡಿಸುವ ಕಾಮಗಾರಿಯ ಅಂದಾಜು ವೆಚ್ಚ

₹ 98 ಲಕ್ಷ - ರಾಜಕಾಲುವೆ ದುರಸ್ತಿ ಕಾಮಗಾರಿಯ ಅಂದಾಜು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT