ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಿಂದ ಕಲುಷಿತ ನೀರು ಪೂರೈಕೆ

ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ– ನಾಗರಿಕರ ಆರೋಪ
Last Updated 3 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೀರೂರು: ಭದ್ರಾ ಜಲಾಶಯದಿಂದ ಕಡೂರು ಮತ್ತು ಬೀರೂರು ಪಟ್ಟಣಗಳಿಗೆ ಪೂರೈಕೆ ಆಗುತ್ತಿರುವ ಕುಡಿಯುವ ನೀರು ಕಳೆದ ಒಂದು ತಿಂಗಳಿನಿಂದ ಕಲುಷಿತವಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಪ್ರತಿಕೂಲ ಬೀರುತ್ತಿದೆ ಎಂಬ ದೂರು ಕೇಳಿಬಂದಿದೆ.

ಯೋಜನೆ ಜಾರಿಯಾಗಿ ವರ್ಷಗಳ ನಂತರ ಪ್ರತಿ 6 ತಿಂಗಳ ಅವಧಿಗೆ ಜಾಕ್‍ವೆಲ್ ನಿರ್ವಹಣೆ ಬೀರೂರು ಪುರಸಭೆಯದ್ದು ಮತ್ತು ಶುದ್ಧೀಕರಣ ಘಟಕದ ನಿರ್ವಹಣೆ ಕಡೂರು ಪುರಸಭೆಯದ್ದು ಎನ್ನುವ ಅಲಿಖಿತ ಒಪ್ಪಂದಕ್ಕೆ ಬರಲಾಗಿದ್ದು ಅದರ ಅನ್ವಯ ನಿರ್ವಹಣೆ ನಡೆಯುತ್ತಿದೆ. ಜಲಾಶಯಕ್ಕೆ ಹೊಸ ನೀರು ಬಂದ ಸಮಯದಲ್ಲಿ ಶುದ್ಧೀಕರಣ ಘಟಕದಲ್ಲಿ ಸಂಗ್ರಹಗೊಂಡ ಹೂಳನ್ನು ತೆರವುಗೊಳಿಸದ ಕಾರಣ ಪೂರೈಕೆ ಆಗುತ್ತಿರುವ ನೀರಿನಲ್ಲಿ ಮಣ್ಣು ಮಿಶ್ರಿತವಾಗುತ್ತಿದೆ. ಈ ಘಟಕ ನಿರ್ವಹಿಸಬೇಕಾದ ಕಡೂರು ಪುರಸಭೆಯು ಅಲ್ಲಿ ನಿರ್ವಹಣೆ ಮಾಡುವವರಿಗೆ ಸೂಕ್ತ ನಿರ್ದೇಶನ ನೀಡಿದ್ದರೂ ಕರ್ತವ್ಯಲೋಪ ಎಸಗಲಾಗುತ್ತಿದೆ. ಇದಕ್ಕೆ ಮೇಲ್ವಿಚಾರಣೆಯ ಕೊರತೆ ಕಾರಣ ಎನ್ನುವುದು ಅಧಿಕಾರಿ ವರ್ಗದ ಹೇಳಿಕೆ.

ಜಲ ಶುದ್ಧೀಕರಣ ಘಟಕಕ್ಕೆ ಹರಿಸಲಾದ ನೀರನ್ನು ಎರಡು ಹಂತಗಳಲ್ಲಿ ಶುದ್ಧೀಕರಿಸಿ ನಿರ್ಮಲಗೊಂಡ ನಂತರ ಮತ್ತೊಂದು ಟ್ಯಾಂಕ್‍ಗೆ ಹರಿಸಲಾಗುವುದು, ಅಲ್ಲಿ ಪಿಎಸಿ (ಪಾಲಿ ಅಲ್ಯುಮಿನಿಯಂ ಕ್ಲೋರೈಡ್) ಪೌಡರ್ ಮತ್ತು ಅಲಂ (ಸ್ಫಟಿಕ) ಅನ್ನು ನೀರನ್ನು ಮತ್ತಷ್ಟು ತಿಳಿಗೊಳಿಸಲು ಬಳಸಲಾಗುವುದು. ಇದರ ಪೂರೈಕೆಯಲ್ಲಿ ಕೂಡಾ ಅಸಮರ್ಪಕತೆ ಇರುವುದರಿಂದ ಶುದ್ಧ ನೀರು ದೊರೆಯುತ್ತಿಲ್ಲ. ಅಲ್ಲದೆ, ಬೀರೂರು ಸಮೀಪದ ದೊಡ್ಡಘಟ್ಟದ ಬಿಪಿ ಟ್ಯಾಂಕ್‍ನಲ್ಲಿ ಕೂಡಾ ಮಣ್ಣು ಸಂಗ್ರಹಗೊಂಡಿದ್ದು, ಇದು ನೀರನ್ನು ಇನ್ನಷ್ಟು ಕಲುಷಿತಗೊಳಿಸುತ್ತಿದೆ. ಈ ವಾರದ ಆರಂಭದಲ್ಲಿ ಶುದ್ಧೀಕರಣ ಘಟಕದ ಬಳಿ ಸ್ಲಡ್ಜ್ (ಮಣ್ಣು ಸಂಗ್ರಹ) ತೆರವುಗೊಳಿಸಿದ್ದು, ಕ್ರಮೇಣ ಶುದ್ಧ ನೀರು ಬರಲಿದೆ. ಆದರೆ, ಜಲಾಶಯದ ಬಳಿ ಹೊಸದಾಗಿ ಮಳೆಯಾಗುತ್ತಿದ್ದು ಹರಿದು ಬರುತ್ತಿರುವ ನೀರು ಕೆಂಪಾಗಿದೆ. ಹಾಗಾಗಿ, ನೀರನ್ನು ಪೂರ್ಣಪ್ರಮಾಣದಲ್ಲಿ ಶುದ್ಧೀಕರಿಸುವುದು ಅಸಾಧ್ಯವಾಗುತ್ತಿದೆ ಎನ್ನುವ ಮಾಹಿತಿ ಇದೆ.

2008ರಲ್ಲಿ ಸರ್ಕಾರದ ಅನುಮೋದನೆ ಪಡೆದು ಏಳು ವರ್ಷಗಳ ಹಿಂದೆ ಅನುಷ್ಠಾನಗೊಂಡ ಯೋಜನೆ ಹಲವು ಏಳುಬೀಳುಗಳ ನಡುವೆ ಸಾಗಿಬಂದಿದೆ. ಸುಮಾರು ₹ 5ಕೋಟಿ ಇದ್ದ ವಿದ್ಯುತ್ ಬಿಲ್‍ ಬಾಕಿ ಕೂಡಾ ಬೇರೆ ಪುರಸಭೆಗಳ ಅನುದಾನ ತಂದು ತೀರಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಡೂರು ಮತ್ತು ಬೀರೂರು ಪುರಸಭೆಗಳು ಯೋಜನೆ ನಿರ್ವಹಣೆ ಮಾಡುವಷ್ಟು ಆರ್ಥಿಕತೆ ಹೊಂದಿಲ್ಲದ ಕಾರಣ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೇ ಯೋಜನೆಯ ನಿರ್ವಹಣೆ ಮಾಡಲಿ ಎಂದು ಜಿಲ್ಲಾಧಿಕಾರಿಯ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಆದರೆ, ಎರಡೂ ಪುರಸಭೆಗಳು ಹೆಚ್ಚುವರಿ ಕಾಮಗಾರಿಯ ₹ 1.44ಕೋಟಿ ಬಾಕಿ ಉಳಿಸಿಕೊಂಡಿದ್ದು ಮಂಡಳಿಯಲ್ಲಿ ಹಣವಿಲ್ಲದ ಕಾರಣ ಇದು ಕಷ್ಟಸಾಧ್ಯ ಎನ್ನುವುದು ಕೂಡಾ ಮಂಡಳಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಇದೇ ಯೋಜನೆಯಲ್ಲಿ ಕಡೂರು-ಬೀರೂರು ಸಮೀಪದ 34 ಹಳ್ಳಿಗಳಿಗೆ ನೀರು ಒದಗಿಸುವ ಉದ್ದೇಶವೂ ಇದ್ದು, ದೊಡ್ಡಘಟ್ಟ ಬಿಪಿ ಟ್ಯಾಂಕ್ ಬಳಿ ಮತ್ತು ಕಡೂರು ಹೊರವಲಯದ ಆದರ್ಶನಗರ ಸಮೀಪ ಟ್ಯಾಪಿಂಗ್ ಪಾಯಿಂಟ್ ಸ್ಥಾಪಿಸಿದ್ದು ಅಲ್ಲಿಂದ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಬಾಕಿ ಇದೆ. ಇದಕ್ಕೆ ಪೂರ್ವಭಾವಿಯಾಗಿ ಹಳ್ಳಿಗಳಲ್ಲಿ ಸಂಗ್ರಹಾಗಾರ ನಿರ್ಮಾಣ ಕಾರ್ಯ ಯಾವ ಹಂತ ತಲುಪಿದೆ ಎನ್ನುವುದರ ಆಧಾರದ ಮೇಲೆ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬೀರೂರು ಪುರಸಭೆ ಮುಖ್ಯಾಧಿಕಾರಿ ಕೆ.ಎಂ.ಸತ್ಯನಾರಾಯಣ, ‘ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್ ಮತ್ತು ಪುರಸಭೆ ಎಂಜಿನಿಯರ್ ಶನಿವಾರವೇ ಸ್ಥಳಕ್ಕೆ ತೆರಳಿ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದಾರೆ. ಈವರೆಗೆ ಡಬ್ಲ್ಯುಟಿಪಿ (ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್) ನಿರ್ವಹಣೆ ಬೀರೂರು ಪುರಸಭೆಗೆ ಸೇರಿತ್ತು. ಸೆ.1ರಿಂದ ಕಡೂರಿಗೆ ಸೇರುತ್ತದೆ. ಆದರೂ ನಾವು ಶುದ್ಧ ನೀರು ಪೂರೈಕೆಗೆ ಹಬ್ಬದ ದಿನದವರೆಗೂ ಶ್ರಮಿಸಿದ್ದೇವೆ. ಇನ್ನು ಬಿಪಿ ಟ್ಯಾಂಕ್ ಮತ್ತು ಸಂಪ್‍ಗಳಲ್ಲಿ ಮಣ್ಣು ತೆರವಿಗೆ ಟೆಂಡರ್ ಆಗಿದ್ದು ತುಮಕೂರಿನ ಗುತ್ತಿಗೆದಾರರು ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ವಿದ್ಯುತ್ ಪೂರೈಕೆ ಕುರಿತು ಪ್ರತಿಕ್ರಿಯಿಸಿದ ಕಡೂರು ಪುರಸಭೆ ಮುಖ್ಯಾಧಿಕಾರಿ ಮಂಜಪ್ಪ, ‘ಕಳೆದ ವರ್ಷ ಮೆಸ್ಕಾಂನ ₹ 1ಕೋಟಿ ಬಿಲ್ ಸರ್ಕಾರದ ವತಿಯಿಂದ ಪಾವತಿಸಲಾಗಿದೆ. ಈ ಬಾರಿಯೂ ಬಾಕಿ ₹ 1 ಕೋಟಿವರೆಗೆ ಇದೆ. ಮೆಸ್ಕಾಂ ಬಿಲ್ ಪಾವತಿಗೆ ಬೇಡಿಕೆ ಇಡುತ್ತದೆ. ಆದರೆ, ಸಾರ್ವಜನಿಕ ಉಪಯೋಗಿ ಕೆಲಸ ಆಗಿರುವುದರಿಂದ ತೀರಾ ಕಠಿಣ ಕ್ರಮ ಅನುಸರಿಸುವುದು ಕಡಿಮೆ. ಪುರಸಭೆಗಳೂ ಸಮರ್ಪಕ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ವಹಿಸುತ್ತಿದೆ. ಹಲವು ಲೋಪಗಳು ಅನಿರೀಕ್ಷಿತವಾಗಿ ಉಂಟಾದಾಗ ಸಮಸ್ಯೆ ಸಹಜ’ ಎಂದು ತಿಳಿಸಿದರು.

ಒಟ್ಟಾರೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಲಿ ಎನ್ನುವುದು ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT