ಈ ಬಾಲಕನಿಗೆ ಗೊತ್ತು ಎಲ್ಲ ಲೋಕಸಭಾ ಕ್ಷೇತ್ರಗಳ ಹೆಸರು

ಸೋಮವಾರ, ಏಪ್ರಿಲ್ 22, 2019
29 °C
‘ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ’

ಈ ಬಾಲಕನಿಗೆ ಗೊತ್ತು ಎಲ್ಲ ಲೋಕಸಭಾ ಕ್ಷೇತ್ರಗಳ ಹೆಸರು

Published:
Updated:
Prajavani

ಬೆಂಗಳೂರು: ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ಹೆಸರು ಹೇಳುವುದೇ ಕಷ್ಟ. ಆದರೆ, ಈ ಬಾಲಕ ದೇಶದ 543 ಲೋಕಸಭಾ ಕ್ಷೇತ್ರಗಳ ಹೆಸರುಗಳನ್ನು ಹತ್ತೇ ನಿಮಿಷಗಳಲ್ಲಿ ಅರಳು ಹುರಿದಂತೆ ಹೇಳುತ್ತಾನೆ. ಅಂದ ಹಾಗೆ ಈ ಬಾಲಕನಿಗಿನ್ನೂ ಏಳು ವರ್ಷ.

ಈ ಬಾಲಕನ ಹೆಸರು ಇಂದ್ರಜಿತ್‌. ಈ ಪುಟಾಣಿ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಅಂಚೆಯ ಮುದುವಾಲ ಗ್ರಾಮದ ಪ್ರತಿಭೆ. ಶಿವಮೊಗ್ಗದ ರಾಯಲ್ ಡೈಮಂಡ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿ.

‘ಚುನಾವಣಾ ಆಯೋಗ ತನ್ನದೇ ಶೈಲಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ.
ನನ್ನ ಮಗನೂ ವಿಶಿಷ್ಟ ಶೈಲಿಯಲ್ಲಿ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾನೆ’ ಎಂದು ಬಾಲಕನ ತಂದೆ ಶಿವಕುಮಾರ್‌ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಮುಂದೆ ಇಂದ್ರಜಿತ್‌ ನೆನಪಿನ ಶಕ್ತಿಯನ್ನು ಪ್ರದರ್ಶಿಸಿದನು. ಒಂದನೇ ಸಂಖ್ಯೆಯ ಲೋಕಸಭಾ ಕ್ಷೇತ್ರವಾದ ಆಂಧ್ರಪ್ರದೇಶದ ಅರಕು ಕ್ಷೇತ್ರದಿಂದ ಹಿಡಿದು 543 ನೇ ಕ್ಷೇತ್ರವಾದ ಪುದುಚೇರಿವರೆಗೂ ಎಲ್ಲ ಕ್ಷೇತ್ರಗಳ ಹೆಸರನ್ನು ತಪ್ಪಿಲ್ಲದೇ ಹೇಳಿದನು.

2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇಂದ್ರಜಿತ್‌ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರುಗಳನ್ನೂ ತಪ್ಪಿಲ್ಲದೇ ಹೇಳುತ್ತಿದ್ದ. ಶಿವಮೊಗ್ಗ ಜಿಲ್ಲೆಯ ಚುನಾವಣಾಧಿಕಾರಿಯಾಗಿದ್ದ ಎಂ.ಲೋಕೇಶ್ ಅವರು  ಆತನನ್ನು ಜಿಲ್ಲಾ ಚುನಾವಣಾ ಜಾಗೃತಿ ರಾಯಭಾರಿಯನ್ನಾಗಿ ಘೋಷಿಸಿದ್ದರು.

‘ನನ್ನ ಮಗ ಚಿಕ್ಕಂದಿನಿಂದಲೂ ಬಲು ಚೂಟಿ. ಏನೇ ಹೇಳಿದರೂ ತಕ್ಷಣ ಅದನ್ನು ಗ್ರಹಿಸಿ ಮನನ ಮಾಡಿಕೊಳ್ಳುತ್ತಾನೆ. ಕೆಲವು ತಿಂಗಳ ಹಿಂದೆ ಮಗನಿಗೆ ಲೋಕಸಭಾ ಕ್ಷೇತ್ರಗಳ ಹೆಸರನ್ನು ಕಲಿಸಲು ಆರಂಭಿಸಿದೆ. ಆತನೇ ಉತ್ಸಾಹದಿಂದ ಎಲ್ಲಾ ಕ್ಷೇತ್ರಗಳ ಹೆಸರನ್ನು ಕಲಿತಿದ್ದಾನೆ’ ಎಂದು ಶಿವಕುಮಾರ್ ತಿಳಿಸಿದರು.

 **

ಮತದಾರರಲ್ಲಿ ಜಾಗೃತಿ ಮೂಡಿಸಲು ನನ್ನಿಂದಾದ ಕೊಡುಗೆ ನೀಡುತ್ತಿದ್ದೇವೆ. ಭವಿಷ್ಯದಲ್ಲಿ ಐಎಎಸ್‌ ಅಧಿಕಾರಿ ಆಗಬೇಕೆಂಬುದು ನನ್ನ ಕನಸು
–ಇಂದ್ರಜಿತ್‌

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !