ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಹೊರದಬ್ಬಲು ಷಡ್ಯಂತ್ರ: ಜಾಧವ ಆರೋಪ

ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಹೇಳಿಕೆ
Last Updated 23 ಜನವರಿ 2019, 20:17 IST
ಅಕ್ಷರ ಗಾತ್ರ

ಚಿಂಚೋಳಿ: ‘ನಾನು ಕಾಂಗ್ರೆಸ್‌ ಪಕ್ಷ ಬಿಟ್ಟಿಲ್ಲ, ಆದರೆ ಕೆಲವರು ನನ್ನನ್ನು ಕಾಂಗ್ರೆಸ್‌ನಿಂದ ಹೊರದಬ್ಬಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಶಾಸಕ ಡಾ. ಉಮೇಶ ಜಾಧವ ಆರೋಪಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಾನು ಈಗಲೂ ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದೇನೆ. ನನ್ನ ರಕ್ತದ ಕಣ ಕಣದಲ್ಲಿ ಕಾಂಗ್ರೆಸ್‌ ಇದೆ. ನಮ್ಮ ಕುಟುಂಬವೂ ಕಾಂಗ್ರೆಸ್‌ ಕುಟುಂಬವಾಗಿದೆ. ಆದರೆ, ಇಂತಹ ಕುಟುಂಬದಿಂದ ಬಂದ ನನ್ನನ್ನುಮತ್ತು ನನ್ನ ಕ್ಷೇತ್ರವನ್ನು ನಿರ್ಲಕ್ಷಿಸಲಾಗುತ್ತಿದೆ. ಇದರಿಂದ ನನಗೆ ನೋವಾಗಿದೆ’ ಎಂದರು.

‘ನಾನು ಪಕ್ಷ ತೊರೆಯದಿದ್ದರೂ ಕಾಂಗ್ರೆಸ್‌ ಎಸ್‌ಸಿ ಎಸ್‌ಟಿ ಘಟಕದ ಸಭೆಯಲ್ಲಿಯ ಬ್ಯಾನರ್‌ನಲ್ಲಿ ನನ್ನ ಭಾವಚಿತ್ರ ತೆಗೆಸುತ್ತಾರೆ. ಪಕ್ಷದಲ್ಲಿದ್ದಾಗಲೂ ನನ್ನ ಮನೆಯ ಮುಂದೆಯೇ ಕೆಲವರು ಪ್ರತಿಭಟನೆ ನಡೆಸಿ ತೇಜೋವಧೆ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿರುವ ಶಾಸಕರು ಹಲವರಿದ್ದಾರೆ. ನಾನೆಂದೂ ಪಕ್ಷದ ವಿರುದ್ಧ ಹೇಳಿಕೆ ನೀಡಿಲ್ಲ. ಹೀಗಿದ್ದರೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದವರ ವಿರುದ್ಧ ಪ್ರತಿಭಟನೆ ನಡೆಸಿಲ್ಲ ಏಕೆ’ ಎಂದು ಪ್ರಶ್ನಿಸಿದರು.

‘ನಾನು ಕೇಂದ್ರ ಸರ್ಕಾರದ ಹುದ್ದೆಯಲ್ಲಿ ಇದ್ದವನು. ಜನಸೇವೆಗಾಗಿ ರಾಜಕೀಯಕ್ಕೆ ಬಂದು ಎರಡು ಬಾರಿ ಗೆಲುವು ಸಾಧಿಸಿ ಸಾಮಾನ್ಯ ಜನರೊಂದಿಗೆ ಸದಾ ಕಾಲ ಕ್ಷೇತ್ರದಲ್ಲಿದ್ದೇನೆ. ನನಗೆ ಹಣ ಗಳಿಕೆಯೇ ಉದ್ದೇಶವಾಗಿದ್ದರೆ ನಾನೇಕೆ ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿ ಸುತ್ತಿ ಜನರ ನೋವು ನಲಿವುಗಳಲ್ಲಿ ಭಾಗಿಯಾಗುತ್ತಿದ್ದೆ’ ಎಂದು
ಪ್ರಶ್ನಿಸಿದರು.

ಖರ್ಗೆವಿರುದ್ಧ ಅಸಮಾಧಾನ

‘ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆಗಬೇಕು ಎಂಬುದು ಜನರ ಬೇಡಿಕೆ. ಆದರೆ ಈ ಬಗ್ಗೆ ನಾವು ಉನ್ನತ ಸ್ಥಾನದಲ್ಲಿರುವವರಿಗೆ ಹೇಳಿದರೆ ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ಹಿರಿಯ ನಾಯಕರಾದವರು ನಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಚರ್ಚಿಸಿಲ್ಲ. 8 ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಒಮ್ಮೆಯೂ ಚಿಂಚೋಳಿಗೆ ಬಂದಿಲ್ಲ’ ಎಂದು ಶಾಸಕ ಜಾಧವ ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ ಮುಖಂಡರು ನನ್ನನ್ನು ಬಹಳ ದಿನಗಳಿಂದ ಸಂಪರ್ಕಿಸುತ್ತಿರುವುದು ನಿಜ. ಆದರೆ ಈ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕರು ಏನು ಮಾಡುತ್ತಿದ್ದಾರೆ? ಒಮ್ಮೆಯಾದರೂ ಕರೆಸಿ ಮಾತನಾಡಿಸಿಲ್ಲ. ಹೀಗಾದರೆ ಹೇಗೆ? ಕಾಂಗ್ರೆಸ್‌ ಪಕ್ಷದವರು ಎಂದರೆ ಒಂದು ಕುಟುಂದ ಸದಸ್ಯರಂತೆ ಕಾಣಬೇಕಲ್ಲವೇ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT