ಚಿತ್ರಸಂತೆಗೆ ಭರ್ಜರಿ ಪ್ರತಿಕ್ರಿಯೆ

7

ಚಿತ್ರಸಂತೆಗೆ ಭರ್ಜರಿ ಪ್ರತಿಕ್ರಿಯೆ

Published:
Updated:
Prajavani

ಬೆಂಗಳೂರು: ಚಿತ್ರಕಲಾ ಪರಿಷತ್‌ ವತಿಯಿಂದ ಭಾನುವಾರ ನಗರದಲ್ಲಿ ನಡೆದ ಚಿತ್ರಸಂತೆಗೆ ಕಲಾಸಕ್ತರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಶಿವಾನಂದ ಸರ್ಕಲ್‌ ಪ್ರದೇಶದಿಂದ ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ ರಸ್ತೆ, ರೇಸ್‌ಕೋರ್ಸ್‌ ರಸ್ತೆಯವರೆಗೆ ಬಣ್ಣ ಬಣ್ಣದ ಚಿತ್ರ ಚಿತ್ತಾರದ ಚೌಕಟ್ಟುಗಳು ಪ್ರದರ್ಶನ ಹಾಗೂ ಮಾರಾಟಕ್ಕಿದ್ದವು. 16 ರಾಜ್ಯಗಳಿಂದ 1,500ರಷ್ಟು ಕಲಾವಿದರು ಆಗಮಿಸಿ ತಮ್ಮ ಕೃತಿಗಳನ್ನು ಪ್ರದರ್ಶಿಸಿದರು. 4 ಲಕ್ಷಕ್ಕೂ ಹೆಚ್ಚು ಜನ ಸಂತೆಗೆ ಬಂದಿದ್ದಾರೆ’ ಎಂದು ಚಿತ್ರಸಂತೆಯ ಅಧ್ಯಕ್ಷ ಹರೀಶ್‌ ಪದ್ಮನಾಭ ಹೇಳಿದರು. 

ಸಾವಿರಾರು ಜನ ಪ್ರದರ್ಶನಕ್ಕೆ ಭೇಟಿ ನೀಡಿದರು. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಗಾಂಧಿ ಕುಟೀರ ಮಾದರಿ ನಿರ್ಮಿಸಲಾಗಿತ್ತು. ಅಪರೂಪದ ಛಾಯಾಚಿತ್ರಗಳು, ಗಾಂಧೀಜಿ ಜೀವನದ ಘಟನಾವಳಿಗಳ ವಿವರ ಪ್ರದರ್ಶಿಸಲಾಗಿತ್ತು.

ಸಂತ್ರಸ್ತರಿಗೆ ಕಲಾಕೃತಿ ಕೊಡುಗೆ: ಸಂತೆಯಲ್ಲಿ ಭಾಗವಹಿಸಿದ್ದ 300ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್‌ಗೆ ನೀಡಿ, ಅವುಗಳ ಮಾರಾಟದಿಂದ ಬಂದ ಹಣವನ್ನು ಕೊಡಗು– ಕೇರಳ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ಕೋರಿದರು. 

‘ಕಲಾಕೃತಿಗಳನ್ನು ಸಂಗ್ರಹಿಸಲಾಗುತ್ತಿದೆ. ಅವುಗಳನ್ನು ಪರಿಷತ್‌ ಆವರಣದಲ್ಲೇ ಇರುವ ಆರ್ಟ್‌ಮಾರ್ಟ್‌ನಲ್ಲಿ ಮಾರಾಟಕ್ಕೆ ಇರಿಸಲಾಗುವುದು. ಚಿತ್ರಸಂತೆಯ ಸಮಿತಿ ಪದಾಧಿಕಾರಿಗಳು ಸೇರಿ ಆ ಕೃತಿಗಳಿಗೆ ಬೆಲೆ ನಿಗದಿಪಡಿಸಲಿದ್ದಾರೆ. ಅದರ ಮಾರಾಟದಿಂದ ಬಂದ ಹಣವನ್ನು ಪರಿಹಾರ ನಿಧಿಗೆ ಕಳುಹಿಸುತ್ತೇವೆ’ ಎಂದು ಹರೀಶ್‌ ಹೇಳಿದರು.

***
ಅಕೌಂಟಿಂಗ್‌ ಕೆಲಸ ಮಾಡುವ ನಾನು ಭಾರತಕ್ಕೆ ಪ್ರವಾಸ ಬಂದಿದ್ದೇನೆ. ದೇಶದ ಪ್ರಮುಖ ಕಲಾಪ್ರಕಾರಗಳನ್ನು ಒಂದೇ ರಸ್ತೆಯಲ್ಲಿ ನೋಡುವ ಅವಕಾಶ ಸಿಕ್ಕಿದ್ದು, ನಿಜಯಕ್ಕೂ ಅದೃಷ್ಟದ ವಿಚಾರ.
-ಹೇಲನ್‌ ಡುಗ್ಗರ್‌, ಯುಎಸ್‌ಎ

 *
ರಚನೆಗಳನ್ನು ಜನ ಪ್ರೋತ್ಸಾಹಿಸಿದ್ದರಿಂದ ತುಂಬಾ ಖುಷಿಯಾಯಿತು. ತಿಂಗಳುಗಟ್ಟಲೇ ಕುಳಿತು ರಚಿಸಿದ ಕಲಾಕೃತಿಗಳಿಂದ ನಿರೀಕ್ಷಿಸಿದಷ್ಟು ಆದಾಯ ಬರಲಿಲ್ಲ.
-ಪಿ.ರಮೇಶ್ ಗುಜಾರ್‌, ಕಲಾವಿದ, ಪುಣೆ

 *
ಕೆಲವೊಂದು ರಚನೆಗಳು ಚಿತ್ರಗಳೆಂದೇ ಗೊತ್ತಾಗಲಿಲ್ಲ. ಅಷ್ಟೊಂದು ನೈಜವಾಗಿದ್ದವು. ಈ ಮೇಳದಲ್ಲಿ ಕುಟುಂಬದೊಂದಿಗೆ ಸುತ್ತಿ, ಹಂಪಿಯ ಸ್ಮಾರಕವೊಂದರ ಚಿತ್ರ ಖರೀದಿಸಿದೆ.
-ಮೇಘಾ ಮೇಲಗಿರಿ, ಬನ್ನೇರುಘಟ್ಟ

 *
ಬಹುತೇಕರು ಕಲಾಕೃತಿಗಳ ಸೈಜ್‌ ಮತ್ತು ಪ್ರೈಜ್‌ ನೋಡುತ್ತಾರೆ. ಈ ಸಂತೆಯಲ್ಲಿ ನನಗೆ ಕಲಾವಿಮರ್ಶಕರೇ ಸಿಗಲಿಲ್ಲ.
-ಕೊಂಡಾ ಶ್ರೀನಿವಾಸ್‌, ಕಲಾವಿದ, ಹೈದರಾಬಾದ್

 *
ನನಗೂ ಡ್ರಾಯಿಂಗ್‌ ಅಂದರೆ ಇಷ್ಟ. ಕೃಷ್ಣ, ಲೋಟಸ್‌, ಜಿರಾಫೆ ಬಿಡಿಸಲು ನನಗೆ ಬರುತ್ತೆ. ಇಲ್ಲಿ ಡಿಫರೆಂಟ್‌ ಚಿತ್ರಗಳನ್ನು ನೋಡಿದೆ. ತುಂಬಾ ಖುಷಿಯಾಯಿತು.
-ಕಾನಿಷ್ಕಾ, 2ನೇ ತರಗತಿ

 *
ಕುಂಚಗಳನ್ನು ಬಳಸದೆ, ಕೇವಲ ಕೈ ಬೆರಳ ಚಳಕದಿಂದ ರಚಿಸಿದ್ದ ಚಿತ್ರಗಳನ್ನು ಮಾರಾಟಕ್ಕಿಟ್ಟಿದ್ದೆ. ಬಹುತೇಕರು ನನ್ನ ಚಿತ್ರಗಳನ್ನು ಮೆಚ್ಚಿಕೊಂಡರು.
-ಶ್ವೇತಾ ಏಕ್ತಾರೆ, ಕಲಾವಿದೆ, ಪುಣೆ

 *
ನಾನು ಓದಿದ್ದು ಫ್ಯಾಷನ್‌ ಟೆಕ್ನಾಲಜಿ. ಈಗ ತಂಜಾವೂರು ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದೇನೆ. ಸಂತೆಗೆ 20ಕ್ಕೂ ಹೆಚ್ಚು ರಚನೆಗಳನ್ನು ತಂದಿದ್ದೆ.
-ಸತ್ಯಾ, ಕಲಾವಿದೆ, ಕೊಯಮತ್ತೂರು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !