ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರನಗರಿ ಎಂಬ ‘ಮಾಯಾಜಿಂಕೆ’

ಸಿ.ಎಂ. ಬದಲಾದಾಗಲೆಲ್ಲ ಬದಲಾಗುವ ಫಿಲ್ಮ್‌ ಸಿಟಿ ಸ್ಥಳ
Last Updated 23 ಸೆಪ್ಟೆಂಬರ್ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿತ್ರನಗರಿ’ ನಿರ್ಮಾಣಕ್ಕೆ ಬಾಲಗ್ರಹ ಹಿಡಿದಿದ್ದು, ರಾಜ್ಯ ಸರ್ಕಾರದ ಧೋರಣೆಗೆ ಕಲಾವಿದರು ಹಾಗೂ ಸಿನಿಮಾಸಕ್ತರು ಅಸಮಾಧಾನಗೊಂಡಿದ್ದಾರೆ.

ಪ್ರಸ್ತುತ ಪರಭಾಷೆ ಸಿನಿಮಾಗಳ ಹಾವಳಿಯಿಂದ ಚಿತ್ರೋದ್ಯಮ ನಲುಗಿದೆ. ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ದೊರೆಯದೆ ನಿರ್ಮಾಪಕರು ಅಡಕತ್ತರಿಗೆ ಸಿಲುಕಿದ್ದಾರೆ. ಕನ್ನಡ ಚಿತ್ರರಂಗದ ಪಾಲಿಗೆ ವರವಾಗಬೇಕಿದ್ದ ಚಿತ್ರನಗರಿ ಮರೀಚಿಕೆಯಾಗಿದೆ. ಮುಖ್ಯಮಂತ್ರಿಗಳು ಬದಲಾದಂತೆ ಚಿತ್ರನಗರಿಯ ಸ್ಥಳವೂ ಬದಲಾಗುತ್ತಿದೆ. ಈ ಧೋರಣೆಯು ಚಿತ್ರರಂಗದ ಬೆಳವಣಿಗೆ ಮೇಲೂ ಪರಿಣಾಮ ಬೀರಿದೆ.

ಚಿತ್ರನಗರಿಯ ಕಲ್ಪನೆ ಮೂಡಿದ್ದು, ದಿವಂಗತ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಆಗ ಕನ್ನಡ ಚಿತ್ರರಂಗದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಹೆಸರಘಟ್ಟದ ಬಳಿ 302 ಎಕರೆ ಜಮೀನನ್ನು ನಿಗದಿಪಡಿಸಲಾಯಿತು. ಈ ಪೈಕಿ 25 ಎಕರೆಯನ್ನು ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಮತ್ತು 10 ಎಕರೆಯನ್ನು ಕಲಾಗ್ರಾಮಕ್ಕೆ ನೀಡಲಾಯಿತು. ಉಳಿದ 267 ಎಕರೆಯಲ್ಲಿ ಖಾಸಗಿ ಸಹಭಾಗಿತ್ವದಡಿ ಚಿತ್ರನಗರಿ, ಗಾಲ್ಫ್‌ ರೆಸಾರ್ಟ್‌ ಮತ್ತು ಥೀಮ್‌ ಪಾರ್ಕ್‌ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಕನ್ನಡ ಚಿತ್ರರಂಗವು ಈ ಜಮೀನಿನ ಸದ್ಬಳಕೆಗೆ ಮುಂದಾಗಲಿಲ್ಲ. ಪ್ರಸ್ತುತ ಈ ಪ್ರದೇಶದಲ್ಲಿ ಚಿತ್ರರಂಗದ ಚಟುವಟಿಕೆಗಳಿಗೆ ಹೈಕೋರ್ಟ್‌ ನಿರ್ಬಂಧ ಹೇರಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಬಳಿ ಚಿತ್ರನಗರಿಗಾಗಿ 108 ಎಕರೆ ಮಂಜೂರಾಯಿತು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸೇರಿದ ಈ ಜಾಗ ಇನ್ನೂ ಪ್ರವಾಸೋದ್ಯಮ ಇಲಾಖೆಗೆ ವರ್ಗಾವಣೆಯೇ ಆಗಿಲ್ಲ. ಆ ಬಳಿಕ ಕಂದಾಯ ಇಲಾಖೆಯಿಂದಲೂ ಹಕ್ಕು ಬದಲಾವಣೆಯಾಗಬೇಕಿದೆ.

‘ಕೆಐಎಡಿಬಿಯಿಂದ 30 ವರ್ಷದ ಅವಧಿಗೆ ಪ್ರವಾಸೋದ್ಯಮ ಇಲಾಖೆಗೆ ಈ ಜಮೀನನ್ನು ಭೋಗ್ಯಕ್ಕೆ ನೀಡಲು ನಿರ್ಧರಿಸಲಾಗಿದೆ. ಆದರೆ, ಅಭಿವೃದ್ಧಿಪಡಿಸಿರುವ ಜಮೀನಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಭೋಗ್ಯದ ಶುಲ್ಕ ಪಾವತಿಸುವಂತೆ ಕೆಐಎಡಿಬಿ ಪಟ್ಟು ಹಿಡಿದಿದೆ. ಉಚಿತವಾಗಿ ಜಮೀನು ನೀಡಬೇಕು ಎಂದು ಪ್ರವಾಸೋದ್ಯಮ ಇಲಾಖೆಯು ಬೇಡಿಕೆ ಇಟ್ಟಿದೆ. ಹಾಗಾಗಿ, ಜಮೀನಿನ ಹಸ್ತಾಂತರ ವಿಳಂಬವಾಗಿದೆ’ ಎನ್ನುತ್ತವೆ ಮೂಲಗಳು.

ರಾಮನಗರದಲ್ಲಿ ನಿರ್ಮಾಣ: ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಮನಗರದಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಘೋಷಿಸಿದರು. ಇದಕ್ಕಾಗಿ ಬಜೆಟ್‌ನಲ್ಲಿ ₹ 40 ಲಕ್ಷ ಅನುದಾನವನ್ನೂ ಮೀಸಲಿಟ್ಟರು. ಆದರೆ, ಸೂಕ್ತ ಸ್ಥಳ ಲಭ್ಯವಾಗಲಿಲ್ಲ. ಹಾಗಾಗಿ, ಅನುದಾನವು ಸರ್ಕಾರಕ್ಕೆ ವಾಪಸ್‌ ಹೋಗಿದೆ.

ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರ‍ಪ್ಪ ಅವರು ರೋರಿಚ್‌ ಎಸ್ಟೇಟ್‌ನಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದು, ಮತ್ತೆ ಗೊಂದಲ ಸೃಷ್ಟಿಯಾಗಿದೆ.

***

‘ವರನಟ ರಾಜಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಅವರ ಬಹುತೇಕ ಚಿತ್ರಗಳ ಶೂಟಿಂಗ್‌ ನಡೆದಿರು

ವುದು ಮೈಸೂರಿನಲ್ಲಿಯೇ. 10 ಕಿ.ಮೀ. ಅಂತರದಲ್ಲಿ 250 ಶೂಟಿಂಗ್‌ ಲೊಕೇಶನ್‌ಗಳಿವೆ. ನದಿ ಪ್ರದೇಶವಿದೆ. ಉದ್ದೇಶಿತ ಚಿತ್ರನಗರಿ ಸ್ಥಳಕ್ಕೆ ಸಮೀಪದಲ್ಲಿಯೇ ವಿಮಾನ ನಿಲ್ದಾಣವಿದೆ. ರಾಮನಗರದಲ್ಲಿ ಸಿನಿಮಾ ವಿಶ್ವವಿದ್ಯಾಲಯ ನಿರ್ಮಿಸುವುದಾಗಿ ಈ ಹಿಂದೆ ಸರ್ಕಾರ ಹೇಳಿತ್ತು. ಹಿಮ್ಮಾವು ಬಳಿಯೇ ಚಿತ್ರನಗರಿ ನಿರ್ಮಿಸುವುದು ಸೂಕ್ತ. ಕನ್ನಡ ನಿರ್ಮಾಪಕರ ಬಳಿ ರಾಮೋಜಿ ಫಿಲ್ಮ್‌ಸಿಟಿಯಂತಹ ಚಿತ್ರನಗರಿ ನಿರ್ಮಾಣ ಮಾಡುವಷ್ಟು ಹಣವಿಲ್ಲ. ಸರ್ಕಾರವೇ ನಿರ್ಮಿಸಬೇಕು’

–ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು,ನಿರ್ದೇಶಕ ಹಾಗೂ ನಿರ್ಮಾಪಕ

‘ರಾಜ್ಯ ಸರ್ಕಾರ ಅಂತಿಮವಾಗಿ ಎಲ್ಲಿ ಚಿತ್ರನಗರಿ ನಿರ್ಮಿಸುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಚಿತ್ರರಂಗದ

ಬೆಳವಣಿಗೆ ದೃಷ್ಟಿಯಿಂದ ತ್ವರಿತವಾಗಿ ಕ್ರಮವಹಿಸಬೇಕು. ರೋರಿಚ್‌ ಎಸ್ಟೇಟ್‌ನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಅಪಸ್ವರ ಎದ್ದಿದೆ. ಶೀಘ್ರವೇ, ಮಂಡಳಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿಗೆ ನಿಯೋಗದ ಮೂಲಕ ತೆರಳಿ ಚರ್ಚಿಸಲಾಗುವುದು’

–ಜೈರಾಜ್‌ ಡಿ.ಆರ್., ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

‘ನಾನು ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ಚಿತ್ರನಗರಿ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ.

ಆಳುವವರ ದೂರದೃಷ್ಟಿಯ ಕೊರತೆಯಿಂದ ಹಿನ್ನೆಡೆಯಾಗಿದೆ. ಸರ್ಕಾರ ಬದಲಾದಂತೆ ಸ್ಥಳವೂ ಬದಲಾಗುತ್ತಿರುವುದು ವಿಪರ್ಯಾಸ’

–ನಾಗತಿಹಳ್ಳಿ ಚಂದ್ರಶೇಖರ್‌, ನಿರ್ದೇಶಕ

***

1980ರ ದಶಕ: ಹೆಸರಘಟ್ಟದಲ್ಲಿ ಫಿಲ್ಮಂ ಸಿಟಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಘೋಷಣೆ

2004: ಹೆಸರಘಟ್ಟದಲ್ಲಿ ಫಿಲಂ ಸಿಟಿ ಸ್ಥಾಪನೆಯ ಪ್ರಸ್ತಾಪಕ್ಕೆ ಎಸ್‌.ಎಂ.ಕೃಷ್ಣ ಅವರಿಂದ ಮರುಜೀವ.

2017: ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವುದಾಗಿ ಸಿದ್ದರಾಮಯ್ಯ ಘೋಷಣೆ

2018: ರಾಮನಗರದಲ್ಲಿ ಚಿತ್ರನಗರಿ ಆರಂಭಿಸುವುದಾಗಿ ಎಚ್‌.ಡಿ.ಕುಮಾರಸ್ವಾಮಿ ಪ್ರಕಟ

2019: ರೋರಿಚ್‌ ಎಸ್ಟೇಟ್‌ನಲ್ಲಿ ಫಿಲಂ ಸಿಟಿ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಸ್ತಾಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT