ಪರಿಶಿಷ್ಟ ಕ್ರೈಸ್ತ, ಮುಸ್ಲಿಮರನ್ನೂ ಎಸ್‌ಸಿಗೆ ಸೇರಿಸಲು ಒತ್ತಾಯ

7

ಪರಿಶಿಷ್ಟ ಕ್ರೈಸ್ತ, ಮುಸ್ಲಿಮರನ್ನೂ ಎಸ್‌ಸಿಗೆ ಸೇರಿಸಲು ಒತ್ತಾಯ

Published:
Updated:

ಬೆಂಗಳೂರು: ಪರಿಶಿಷ್ಟ ಜಾತಿ ಮೂಲದ ಕ್ರೈಸ್ತರು ಮತ್ತು ಮುಸ್ಲಿಮರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸುವ ಮಸೂದೆಯನ್ನು ಅನುಮೋದಿಸಬೇಕು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಭಾರತ ಕ್ಯಾಥಲಿಕ್ ಬಿಷಪ್ ಸಮ್ಮೇಳನ ಒತ್ತಾಯಿಸಿದೆ. 

ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸಮ್ಮೇಳನದ ರಾಷ್ಟ್ರೀಯ ಕಾರ್ಯದರ್ಶಿ ಫಾದರ್‌ ದೇವ ಸಗಾಯರಾಜ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪರಿಶಿಷ್ಟ ಜಾತಿ ಮೂಲದ ಕ್ರೈಸ್ತ ಮತ್ತು ಮುಸ್ಲಿಮರು 1950ರಿಂದಲೂ ತಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಅವರು ಅಸ್ಪೃಶ್ಯ ಸಮುದಾಯಗಳಲ್ಲಿ ಜನಿಸಿದವರಾಗಿದ್ದು ಈಗಲೂ ಅದರ ನೋವನ್ನು ಅನುಭವಿಸುತ್ತಿದ್ದಾರೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಇದನ್ನು  ಹಿಂದುಳಿದ ವರ್ಗಗಳ ಆಯೋಗಗಳು ಗುರುತಿಸಿ ಅವರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿವೆ ಎಂದು ಸಮಾವೇಶ ಹೇಳಿದೆ. 

ಭಾರತ ಸರ್ಕಾರದ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗಕ್ಕಾಗಿ ಪ್ರೊ.ಸತೀಶ್ ದೇಶಪಾಂಡೆಯವರು ಸಿದ್ಧಪಡಿಸಿದ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳಲ್ಲಿ ದಲಿತರು, ಪ್ರಸಕ್ತ ಸಾಮಾಜಿಕ ಮತ್ತು ವೈಜ್ಞಾನಿಕ ಜ್ಞಾನದ ಸ್ಥಿತಿಗತಿಯ ವರದಿಯಲ್ಲಿ, ‘ದಲಿತ ಮುಸ್ಲಿಮರು ಮತ್ತು ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡುವುದನ್ನು ನಿರಾಕರಿಸುವುದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರವಿಲ್ಲ’ ಎಂದು ವಿವರಿಸಲಾಗಿದೆ. ಹೀಗಾಗಿ ಎಲ್ಲ ಅರ್ಹತೆ ಇರುವ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10 ಮೀಸಲಾತಿ ಕಲ್ಪಿಸುವ ಮಸೂದೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ದೊರೆತಿರುವುದು ಸಾಮಾಜಿಕ ನ್ಯಾಯ ಸಲ್ಲಿಕೆಯಲ್ಲಿ ಆಗಿರುವ ಪಕ್ಷಪಾತ ಎಂದು ಸಮ್ಮೇಳನ ಬಣ್ಣಿಸಿದೆ.

ಆರ್ಥಿಕವಾಗಿ ಹಿಂದುಳಿದವರಿಗಾಗಿ ವಿವಿಧ ಯೋಜನೆಗಳು ಇದ್ದರೂ ಸರ್ಕಾರ ಈ ಮಸೂದೆಯ ಕುರಿತು ಆಸಕ್ತಿ ವಹಿಸಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳು ದೇಶದಲ್ಲಿನ ಜಾತಿ ವ್ಯವಸ್ಥೆಯಿಂದ ಪ್ರಭಾವಿತವಾಗಿಲ್ಲ. ಯಾವುದೇ ವೈಜ್ಞಾನಿಕ ಅಧ್ಯಯನ ಮಾಡದೆ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂದು ಆಕ್ಷೇಪ ಎತ್ತಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !