ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲೆ ಎಸ್‌.ಧರಣಿ ಸಾವಿನ ಪ್ರಕರಣ: ಎಸಿ‍ಪಿ, ಇನ್‌ಸ್ಪೆಕ್ಟರ್‌, ಎಎಸ್‌ಐಗಳ ತಲೆದಂಡ?

ತನಿಖೆಯಲ್ಲಿ ಲೋಪ ಎಸಗಿದ ಪೊಲೀಸರು
Last Updated 21 ಮಾರ್ಚ್ 2019, 20:19 IST
ಅಕ್ಷರ ಗಾತ್ರ

ಬೆಂಗಳೂರು: ಯುವ ವಕೀಲೆ ಎಸ್‌. ಧರಣಿ ಸಾವಿನ ಪ್ರಕರಣದಲ್ಲಿ ಮೂವರುಎಸಿ‍ಪಿ, ಇಬ್ಬರು ಇನ್‌ಸ್ಪೆಕ್ಟರ್‌, ಇಬ್ಬರು ಪಿಎಸ್‌ಐ ಹಾಗೂ ಮೂವರು ಎಎಸ್‌ಐಗಳು ಕರ್ತವ್ಯ ಲೋಪ ಎಸಗಿದ್ದು, ಸದ್ಯದಲ್ಲೇ ಅವರೆಲ್ಲರ ತಲೆದಂಡವಾಗುವ ಸಾಧ್ಯತೆ ಇದೆ.

ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಂಡಿರುವ ಸಿಐಡಿಯ ವಿಶೇಷ ತಂಡ, ಪೊಲೀಸರ ಕರ್ತವ್ಯ ಲೋಪವನ್ನು ಪುರಾವೆ ಸಮೇತ ಪತ್ತೆ ಹಚ್ಚಿ ಡಿಜಿಪಿಪ್ರವೀಣ್‌ ಸೂದ್ ಅವರಿಗೆ ವರದಿ ನೀಡಿದೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಇದೇ ವರದಿಯನ್ನು ಉಲ್ಲೇಖಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕೋರಿ ಪ್ರವೀಣ್‌ ಸೂದ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ವರದಿ ನೀಡಿದ್ದಾರೆ. ‘ಈಗಾಗಲೇ ಆಂತರಿಕವಾಗಿ ಇಲಾಖಾ ವಿಚಾರಣೆ ಆರಂಭವಾಗಿದ್ದು, ಸದ್ಯದಲ್ಲೇ ಶಿಸ್ತುಕ್ರಮದ ಆದೇಶ ಹೊರಬೀಳಲಿದೆ’ ಎಂದು ಪೊಲೀಸ್‌ ಉನ್ನತ ಮೂಲಗಳು ತಿಳಿಸಿವೆ.

‘ಧರಣಿ ಹಾಗೂ ಆರೋಪಿಗಳ ಕುಟುಂಬಕ್ಕೆ ಜಾಗದ ವಿಷಯವಾಗಿ ವೈಮನಸ್ಸು ಉಂಟಾಗಿತ್ತು. ಆ ಬಗ್ಗೆ ದೂರು– ಪ್ರತಿ ದೂರು ದಾಖಲಾಗಿದ್ದವು. ಅವುಗಳ ತನಿಖೆಯಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಧರಣಿ ಅವರ ಮನೆಯ ಕಾಂಪೌಂಡ್ ಒಡೆದಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ಆ ಬಗ್ಗೆ ಧರಣಿಯವರ ತಾಯಿ ದೇವಿ, ಮಹದೇವಪುರ ಠಾಣೆಗೆ 2017ರ ಸೆ.8ರಂದು ಮೊದಲ ಬಾರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಎನ್‌ಸಿಆರ್ (ಗಂಭೀರವಲ್ಲದ ಅಪರಾಧ) ದಾಖಲಿಸಿಕೊಂಡು ಪ್ರಕರಣವನ್ನೇ ಅಂತ್ಯಗೊಳಿಸಿದ್ದರು. ಅದಾದ ನಂತರವೂ ಎರಡೂ ಕುಟುಂಬದವರು ದೂರು– ಪ್ರತಿ ದೂರು ದಾಖಲಿಸಿದ್ದರು. ಅವುಗಳ ದಾಖಲಾತಿಯಲ್ಲೂ ಕಾನೂನು ಪಾಲನೆ ಆಗಿಲ್ಲ. ಇದು ದೊಡ್ಡ ಪ್ರಮಾದವಾಗಿದೆ’ ಎಂದು ಸಿಐಡಿಯ ಮೂಲಗಳು ತಿಳಿಸಿವೆ.

ಸೂಕ್ತ ಕಲಂ ದಾಖಲಿಲ್ಲ: ‘ಸೆ. 11ರಂದು ಆರೋಪಿಗಳು, ಧರಣಿ ಮೇಲೆ ಬಾಯಿಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದರು. ತಾಯಿ ದೇವಿ, ಮಗಳನ್ನು ರಕ್ಷಿಸಿದ್ದರು. ಆ ಸಂಬಂಧ ಧರಣಿ, ಮಹದೇವಪುರ ಠಾಣೆಗೆ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.

‘ಪೊಲೀಸರು, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಸೂಕ್ತ ಕಲಂಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರಲಿಲ್ಲ. ತನಿಖೆ ಜವಾಬ್ದಾರಿ ವಹಿಸಿಕೊಂಡಿದ್ದ ಮಹದೇವಪುರ ಉಪವಿಭಾಗ ಹಾಗೂ ಸಿಸಿಬಿಯ ಎಸಿಪಿಗಳು ದೂರುದಾರರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಚಾಲ್ತಿಯಲ್ಲಿರುವ ಕಾನೂನುಗಳನ್ವಯ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜೊತೆಗೆ, ಆರೋಪಿಗಳನ್ನು ಬಂಧಿಸಲು ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಇದೇ ಜ.26ರಂದು ಪ್ರಕರಣ ಸಿಸಿಬಿಗೆ ವರ್ಗಾವಣೆ ಆಯಿತು. ಅಲ್ಲಿಯ ಎಸಿಪಿ ಸಹ ಕಾನೂನಿನ ನಿಯಮಗಳನ್ವಯ ಪಾಲಿಸದೇ ಲೋಪ ಎಸಗಿದ್ದಾರೆ. ಅವರ ವೈಫಲ್ಯದಿಂದಾಗಿ ಪ್ರಕರಣದಲ್ಲಿ ಸತ್ಯಾಂಶ ಹೊರಗೆ ಬರಲಿಲ್ಲ. ಹೀಗಾಗಿ ಕಳೆದ ತಿಂಗಳ 27ರಂದು ಪ್ರಕರಣವನ್ನು ರಾಜ್ಯ ಸರ್ಕಾರ, ಸಿಐಡಿಗೆ ವರ್ಗಾಯಿಸಿದೆ. ಸಿಐಡಿಯ ವಿಶೇಷ ತಂಡವೇ ಈಗ ತನಿಖೆ ಮುಂದುವರಿಸಿದೆ’ ಎಂದು ಮಾಹಿತಿ ನೀಡಿವೆ.

ಲೋಪ: ‘ರೇಣುಕಾ ಹಾಗೂ ಸುರೇಶ್ ಅವರು ಧರಣಿ ಹಾಗೂ ಅವರ ತಾಯಿ ದೇವಿ ವಿರುದ್ಧವೂ 2018ರ ಸೆ.11 ಹಾಗೂ ಅ.18ರಂದು ದೂರು ನೀಡಿದ್ದರು. ಒಂದು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಇನ್ನೊಂದರಲ್ಲಿ ಎನ್‌ಸಿಆರ್ ಮಾತ್ರ ದಾಖಲಿಸಿಕೊಂಡಿದ್ದರು. ಎರಡೂ ಪ್ರಕರಣದಲ್ಲೂ ಪೊಲೀಸರು ಲೋಪ ಎಸಗಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಅದನ್ನೇ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪೊಲೀಸರಿಗೆ ಕಾಯ್ದೆ ಬಗ್ಗೆಯೇ ಗೊತ್ತಿಲ್ಲ !

‘ಕರ್ತವ್ಯ ಲೋಪದ ಬಗ್ಗೆ ಸಿಐಡಿ ಅಧಿಕಾರಿಗಳು, ತಪ್ಪಿತಸ್ಥರ ಪೊಲೀಸರನ್ನು ಪ್ರಶ್ನಿಸಿದಾಗ, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಅವರಿಗೆ ತಿಳಿವಳಿಕೆ ಇಲ್ಲದವರಂತೆ ವರ್ತಿಸಿರುವುದು ಉದ್ದೇಶಪೂರ್ವಕವೋ ಅಥವಾ ಕಾಯ್ದೆ ಅರಿವಿಲ್ಲದೇ ನಡೆದುಕೊಂಡಿದ್ದಾರೆಯೋ’ ಎಂಬ ಬಗ್ಗೆ ಈಗ ಚರ್ಚೆ ನಡೆದಿದೆ.

‘ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಅದರ ಮಾಹಿತಿ ಪೊಲೀಸರಿಗೆ ಇಲ್ಲ. ಹೀಗಾಗಿ ಧರಣಿ ನೀಡಿದ್ದ ದೂರಿನನ್ವಯ ಪೊಲೀಸರು, ಹಳೇ ಕಲಂಗಳನ್ನೇ ದಾಖಲಿಸಿದ್ದರು. ಜೊತೆಗೆ ಹಲವು ಕಾನೂನುಗಳನ್ನು ಸರಿಯಾಗಿ ಪಾಲಿಸಿರಲಿಲ್ಲ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT