ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆ ನೆನಪಲ್ಲಿ ಭರವಸೆಯ ಪಥ ಸಂಚಲನ

70ನೇ ಗಣರಾಜ್ಯೋತ್ಸವ ಸಡಗರ l ರಾಜ್ಯಪಾಲರಿಂದ ಧ್ವಜಾರೋಹಣ l ಗಮನ ಸೆಳೆದ ಚಿಣ್ಣರು
Last Updated 26 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ದೇಶ ಹಾಗೂ ನಾಡಿನ ಸಾಧನೆಗಳನ್ನು ನೆನಪಿಸುವ, ಭವಿಷ್ಯದ ಭರವಸೆಗಳತ್ತ ಹೆಜ್ಜೆಯಿಡುವ ಆಶಯದೊಂದಿಗೆ70ನೇ ಗಣರಾಜ್ಯೋತ್ಸವ ಸಮಾರಂಭ ಇಲ್ಲಿನ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.

ಹೊಂಗಿರಣಗಳ ನಡುವೆ ಕಚಗುಳಿ ಇಡುತ್ತಿದ್ದ ಹದವಾದ ಚಳಿ, ಸೇನಾ ವಾದ್ಯಗಳ ಸಂಗೀತ, ಹೆಲಿಕಾಪ್ಟರ್‌ ಮೂಲಕ ಉದುರಿದ ಗುಲಾಬಿ ಪಕಳೆಗಳು ತ್ರಿವರ್ಣ ಧ್ವಜ ಬಾನಾಡಿಯಾದ ಸಂಭ್ರಮ ಸಾರಿದವು. ಮೆಲ್ಲಗೆ ಬೀಸಿದ ಗಾಳಿಗೆ ಲಘುವಾಗಿ ಸರಿದಾಡಿದ ಧ್ವಜ ಅಲ್ಲಿ ಸೇರಿದ್ದವರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿತು.

ಧ್ವಜಾರೋಹಣ ಮಾಡಿದ ರಾಜ್ಯಪಾಲರು ಸೇನಾಪಡೆ ಸೇರಿದಂತೆ ವಿವಿಧ ಪಥ ಸಂಚಲನಾ ತಂಡಗಳ ಗೌರವ ವಂದನೆ ಸ್ವೀಕರಿಸಿದರು.

ಸಶಸ್ತ್ರ ಮೀಸಲು ಪಡೆ, ಪೊಲೀಸ್‌ ಮೀಸಲು ಪಡೆ, ಕೈಗಾರಿಕಾ ಭದ್ರತಾ ಪಡೆ, ಟ್ರಾಫಿಕ್‌ ವಾರ್ಡನ್‌ಗಳ ತಂಡ, ಎನ್‌ಸಿಸಿ, ಎನ್‌ಎಸ್‌ಎಸ್‌, ಗೃಹರಕ್ಷಕ ದಳ, ಶ್ವಾನದಳ, ಅಬಕಾರಿ ದಳ, ಕೇರಳ ಪೊಲೀಸ್‌ ತಂಡಗಳ ಪಥಸಂಚಲನ ನಡೆಯಿತು. ಮೇಜರ್‌ ಪ್ರಶಾಂತ್‌ ಥಾಪಾ ಹಾಗೂ ಮೇಜರ್‌ ಅಮಿತ್‌ ಚೌಧರಿ ಪಥಸಂಚಲನದ ನೇತೃತ್ವ ವಹಿಸಿದ್ದರು.

ಮೈದಾನದ ತುಂಬಾ ಬಣ್ಣದ ‘ಹೂಗಳು...’

ಸಾಂಪ್ರದಾಯಿಕ ಕಾರ್ಯಕ್ರಮದ ಬಳಿಕ ಮೈದಾನ ವರ್ಣಮಯವಾಗಿ ಕಂಗೊಳಿಸಿತು. ಗೀತ ನೃತ್ಯ ರೂಪಕ ಪ್ರದರ್ಶನಕ್ಕೆ ಬಣ್ಣ ಬಣ್ಣದ ಪೋಷಾಕು ಧರಿಸಿ ಸಿದ್ಧರಾಗಿದ್ದ ಮಕ್ಕಳು ಇಡೀ ಸಮಾರಂಭಕ್ಕೆ ರಂಗು ತುಂಬಿದರು.ರಾಷ್ಟ್ರಧ್ವಜ ಹಿಡಿದು ಮೈದಾನದಲ್ಲಿ ಓಡಾಡಿದ ವಿದ್ಯಾರ್ಥಿಗಳು, ನೋಡುಗರ ಗಮನಸೆಳೆದರು. ಅಲಂಕೃತ ರಥದಲ್ಲಿ ಭಾರತ ಮಾತೆಯ ಮೆರವಣಿಗೆ ನಡೆಯಿತು.

ಜಗವೊಂದೇ ಜನರೊಂದೇ ಭಾರತಾಂಬೆ ನಿನ್ನ ಮುಂದೆ.... ಈ ಹಾಡಿಗೆ ಹೆಜ್ಜೆ ಹಾಕಿದ ಜಿ.ಎಸ್.ಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೋನಪ್ಪನ ಅಗ್ರಹಾರದ ಶಮ್ಸ್ ಪ್ರೌಢಶಾಲೆಯ 800 ಮಕ್ಕಳು ಭಾರತದ ದರ್ಶನ ಮಾಡಿಸಿದರು. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ದೇಶದ 29 ರಾಜ್ಯಗಳ ಭೂಪಟ ಮತ್ತು ಆಯಾ ರಾಜ್ಯಗಳ ಭಾಷೆಯ ಫಲಕ ಹಿಡಿದುಕೊಂಡು ಹೆಜ್ಜೆ ಹಾಕಿದರು. ಸಂವಿಧಾನ ರಚನೆ ವೇಳೆ ಸಂಸತ್‌ನಲ್ಲಿ ನಡೆದಿದ್ದ ಚರ್ಚೆಯನ್ನು ವಿದ್ಯಾರ್ಥಿಗಳು ಮರುಸೃಷ್ಟಿಸಿದರು.

ನಾಗಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ದೊಡ್ಡಬಿದರಕಲ್ಲು ಗುರುಶ್ರೀ ವಿದ್ಯಾಕೇಂದ್ರದ 650 ಮಕ್ಕಳು ‘ರಾಷ್ಟ್ರೀಯ ಭಾವೈಕ್ಯತೆ’ ನೃತ್ಯ ರೂಪಕ ಪ್ರದರ್ಶಿಸಿದರು.ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರಿಗೆ ನೃತ್ಯನಮನ ಅರ್ಪಿಸಿದ ಮಕ್ಕಳು, ನೃತ್ಯ ಪ್ರದರ್ಶನದುದ್ದಕ್ಕೂ ಸ್ವಾಮೀಜಿ ಭಾವಚಿತ್ರ ಹಿಡಿದು ಓಡಾಡಿದರು. ಸರ್ವ ಧರ್ಮ, ಭಾಷೆ, ಜಾತಿ... ಹೀಗೆ ಭಾವ್ಯಕ್ಯತೆ ಸಾರುವ ವಿಷಯಗಳನ್ನು ನೃತ್ಯ ರೂಪಕದಲ್ಲಿ ಪ್ರಸ್ತುತಪಡಿಸಿ ಮೆಚ್ಚುಗೆ ಪಡೆದರು.

ಅಂಜನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮತ್ತು ಹೊಂಗಸಂದ್ರದಅನಿಕೇತನ ಪಬ್ಲಿಕ್ ಶಾಲೆಯ ಮಕ್ಕಳು 'ಕಾರ್ಗಿಲ್ ಕಥನ' ನೃತ್ಯ ಪ್ರಸ್ತುತಿ ಪಡಿಸಿದರು
ಅಂಜನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮತ್ತು ಹೊಂಗಸಂದ್ರದ
ಅನಿಕೇತನ ಪಬ್ಲಿಕ್ ಶಾಲೆಯ ಮಕ್ಕಳು 'ಕಾರ್ಗಿಲ್ ಕಥನ' ನೃತ್ಯ ಪ್ರಸ್ತುತಿ ಪಡಿಸಿದರು

ಗಮನ ಸೆಳೆದ ರೂಪಕ: ಶಾಲಾ ಮಕ್ಕಳು ನಿರೂಪಿಸಿದ ಕಾರ್ಗಿಲ್‌ ಕಥನ ರೂಪಕ ಗಮನ ಸೆಳೆಯಿತು.

ಮೈ ಕೊರೆಯುವ ಚಳಿಯಲ್ಲಿ ಕಾರ್ಗಿಲ್ ಗಡಿಯಲ್ಲಿ ಕುರಿಗಾಹಿ ಬಾಲಕರು, ವೈರಿಗಳು ದೇಶದೊಳಗೆ ನುಸುಳಿ ಅವಿತುಕೊಂಡಿದ್ದನ್ನು ನೋಡಿ ಸೈನಿಕರಿಗೆ ಮಾಹಿತಿ ನೀಡಿದರು. ಎಚ್ಚೆತ್ತ ಸೈನಿಕರು ವೈರಿಗಳನ್ನು ಸದೆಬಡಿಯಲು ಹೋಗಿ ಹುತಾತ್ಮರಾದರು. ‘ವೈರಿ ರಾಷ್ಟ್ರ ಗಡಿ ನಿಯಮ ಉಲ್ಲಂಘಿಸಿದೆ’ ಎಂಬುದನ್ನು ಅರಿತ ಭಾರತೀಯ ಸೇನೆ, ಯುದ್ಧ ಘೋಷಿಸಿ ವೈರಿಗಳನ್ನು ಮಟ್ಟಹಾಕಿ ವಿಜಯ ಪತಾಕೆ ಹಾರಿಸಿತು. ಈ ದೃಶ್ಯವನ್ನು ಮನ ಮುಟ್ಟುವಂತೆ ಮಕ್ಕಳು ಪ್ರದರ್ಶಿಸಿದರು.

ಗಾಯಕಿ ಬಿ.ಆರ್.ಛಾಯಾ ಹಾಗೂ ತಂಡದವರು ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿದರು. ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಜನ, ಎದ್ದು ನಿಂತು ಕನ್ನಡ ನಾಡು ಹಾಗೂ ರೈತರಿಗೆ ಗೌರವ ಸಲ್ಲಿಸಿದರು. ಪೊಲೀಸ್ ಹಾಗೂ ಸೇನಾ ಸಿಬ್ಬಂದಿ ಬ್ಯಾಂಡ್‌ನವರು ರಾಷ್ಟ್ರಗೀತೆ ಪ್ರಸ್ತುತಪಡಿಸಿದರು. ಶಂಕರ್ ಪ್ರಸಾದ್ ಹಾಗೂ ಅಪರ್ಣಾ ನಿರೂಪಿಸಿದರು.

ಸುಸ್ತಾಗಿ ಬಿದ್ದ ಬಾಲಕಿಯರು

ನೃತ್ಯಕ್ಕಾಗಿ ಹಲವು ದಿನಗಳಿಂದ ಅಭ್ಯಾಸ ಮಾಡಿದ್ದ ಬಾಲಕಿಯರು, ಬೆಳಿಗ್ಗೆಯೇ ಮೈದಾನಕ್ಕೆ ಬಂದಿದ್ದರು. ಪಥ ಸಂಚಲನ ಆರಂಭಕ್ಕೂ ಮುನ್ನ ಮೈದಾನದಲ್ಲಿ ಸಾಲುಗಟ್ಟಿ ನಿಂತಿದ್ದರು. ಮೂವರು ಬಾಲಕಿಯರು, ಸುಸ್ತಾಗಿ ಕುಸಿದುಬಿದ್ದರು. ಶಿಕ್ಷಕರು, ಅವರನ್ನು ನೆರಳಿನ ಕಡೆ ಕರೆದೊಯ್ದು ನೀರು ಕುಡಿಸಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದರು. ಅವರ ಜಾಗಕ್ಕೆ ಬೇರೆ ವಿದ್ಯಾರ್ಥಿನಿಯರು ಹೋಗಿ ನಿಂತರು.

‍‍‍‍ಪಥ ಸಂಚಲನದಲ್ಲಿ ಕೇರಳ ಪೊಲೀಸ್‌ ಭಾಗಿ

ಆಹ್ವಾನದ ಮೇರೆಗೆ ರಾಜ್ಯಕ್ಕೆ ಬಂದಿದ್ದ ಕೇರಳ ಪೊಲೀಸರು, ಗಣರಾಜ್ಯೋತ್ಸವ ದಿನಾಚರಣೆಯ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು. ಇನ್‌ಸ್ಪೆಕ್ಟರ್ ಐ.ಬಿ.ಸೋಮರಾಜನ್ ತಂಡದ ನೇತೃತ್ವದ ವಹಿಸಿದ್ದರು. ಕೊನೆಯಲ್ಲಿ ತಂಡಕ್ಕೆ ವಿಶೇಷ ಬಹುಮಾನ ನೀಡಲಾಯಿತು. ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಪೊಲೀಸರ ತಂಡ, ಕೇರಳಕ್ಕೆ ಹೋಗಿದೆ.

ಕಾರ್ಗಿಲ್‌ ಕಥನಕ್ಕೆ ಪ್ರಥಮ ಬಹುಮಾನ

ಸಾಂಸ್ಕೃತಿಕ ವಿಭಾಗದಲ್ಲಿ ‘ಕಾರ್ಗಿಲ್ ಕಥನ’ ನೃತ್ಯ ರೂಪಕಕ್ಕೆ ಮೊದಲ ಬಹುಮಾನ ಲಭಿಸಿತು.

‘ಕಾರ್ಗಿಲ್ ಕದನ, ಇದು ಭಾರತದ ಕಥನ’ ಹಾಡಿನೊಂದಿಗೆ ಅಂಜನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬನ್ನೇರುಘಟ್ಟ ರಸ್ತೆಯ ನವಭಾರತ ನಿರ್ಮಾಣ ವಿದ್ಯಾಮಂದಿರದ 700 ಮಕ್ಕಳು,ಕಾರ್ಗಿಲ್ ಕಾರ್ಯಾಚರಣೆಯ ನೆನಪು ಮಾಡಿಕೊಟ್ಟರು.ಈ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಮಕ್ಕಳು ಪ್ರಸ್ತುತಪಡಿಸಿದರು.

‘ರಾಷ್ಟ್ರೀಯ ಭಾವೈಕ್ಯತೆ’ ನೃತ್ಯಕ್ಕೆ ಎರಡನೇ ಹಾಗೂ ‘ನಮ್ಮ ಭಾರತ ಭವ್ಯ ಭಾರತ’ ನೃತ್ಯಕ್ಕೆ ಮೂರನೇ ಸ್ಥಾನ ಸಿಕ್ಕಿತು.

ಮೈನವಿರೇಳಿಸಿದ ‘ಟೆಂಟ್ ಪೆಗ್ಗಿಂಗ್’

ಸೇನಾ ತರಬೇತಿ ಶಾಲೆಯ ಹವಾಲ್ದಾರ್ ಪ್ಯಾರಾಸಿಂಗ್‌ ನೇತೃತ್ವದ ತಂಡ, ಕುದುರೆ ಸವಾರಿ ಮಾಡುತ್ತ ಸಾಹಸ ಪ್ರದರ್ಶನ ಮಾಡಿತು. ‘ಟೆಂಟ್ ಪೆಗ್ಗಿಂಗ್’ ಮೂಲಕ ಮೈದಾನದಲ್ಲಿ ನೆರೆದಿದ್ದವರನ್ನು ಮನರಂಜಿಸಿತು.

ಮೈದಾನದ ಒಂದು ಮಗ್ಗಲಿನಿಂದ ಮತ್ತೊಂದು ಮಗ್ಗಲಿಗೆ ಅತೀ ವೇಗದಲ್ಲಿ ಓಡಿದ ಕುದುರೆಗಳ ಮೇಲೆ ಕುಳಿತಿದ್ದ ಸೈನಿಕರು, ಭರ್ಚಿ ಹಾಗೂ ಖಡ್ಗದಿಂದ ನೆಲದ ಮೇಲಿನ ಥರ್ಮಾಕೋಲ್‌ ತುಂಡು ಎತ್ತಿಕೊಳ್ಳುವ ದೃಶ್ಯ ರೋಮಾಂಚನಕಾರಿಯಾಗಿತ್ತು.

ಸೇನಾ ತರಬೇತಿ ಶಾಲೆಯ ಮತ್ತೊಂದು ತಂಡ, ಕುದುರೆಗಳ ಮೂಲಕ ನಾನಾ ಬಗೆಯ ಕಸರತ್ತು ಪ್ರದರ್ಶನ ಮಾಡಿತು. ಸೈನಿಕರು, ಕುದುರೆಗಳ ಮೇಲೆಯೇ ಎದ್ದು ನಿಂತು, ಬಾಗಿ ರಾಜ್ಯಪಾಲರಿಗೆ ಸೆಲ್ಯೂಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT