ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,300 ಜನ ಕಾಪಾಡಿದ ‘ಸಿವಿಲ್ ಡಿಫೆನ್ಸ್‌’ನ ಸ್ವಯಂ ಸೇವಕರಿಗೆ ₹300 ಭತ್ಯೆ!

ಭತ್ಯೆ ಹೆಚ್ಚಳಕ್ಕೆ ‘ಸಿವಿಲ್ ಡಿಫೆನ್ಸ್’ ಮನವಿ * ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ ಪ್ರಸ್ತಾವ
Last Updated 17 ಜನವರಿ 2019, 20:19 IST
ಅಕ್ಷರ ಗಾತ್ರ

ಬೆಂಗಳೂರು: ಭೂಕುಸಿತ, ಮಳೆ ಅನಾಹುತ, ಕಟ್ಟಡ ಕುಸಿತ ಸೇರಿದಂತೆ ಯಾವುದೇ ದುರಂತ ಸಂಭವಿಸಿದರೂ ಈ ಪಡೆ ಮೊದಲು ಸ್ಥಳದಲ್ಲಿರುತ್ತದೆ. ಕೂಲಿ ಕಾರ್ಮಿಕರಿಂದ ಹಿಡಿದು ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರೂ ಇದರಲ್ಲಿ ದುಡಿಯುತ್ತಿದ್ದಾರೆ. ಕೊಡಗು ಪ್ರವಾಹದ ವೇಳೆ 1,300 ಮಂದಿಯನ್ನು ರಕ್ಷಿಸಿದ ಈ ಸದಸ್ಯರಿಗೆ ಸಿಗುತ್ತಿರುವ ಭತ್ಯೆ ದಿನಕ್ಕೆ ₹ 300 ಮಾತ್ರ!

ಸ್ತ್ರೀಶಕ್ತಿ ಹೊಂದಿರುವ ರಾಜ್ಯದ ಏಕೈಕ ರಕ್ಷಣಾ ಪಡೆ ಎಂಬ ಖ್ಯಾತಿ ಹೊಂದಿರುವ ‘ಸಿವಿಲ್ ಡಿಫೆನ್ಸ್‌’ನ ವಾಸ್ತವ ಚಿತ್ರಣವಿದು.

ಪ್ರಸ್ತುತ 12 ಸಾವಿರ ಸದಸ್ಯರು ಸ್ವಯಂ ಸೇವಕರಾಗಿ ಇದರಲ್ಲಿ ಗುರುತಿಸಿಕೊಂಡಿದ್ದಾರೆ. ಭತ್ಯೆಯನ್ನು ₹550ಕ್ಕೆ ಹೆಚ್ಚಳ ಮಾಡಬೇಕೆಂದು ನಾಲ್ಕು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಗೃಹ ಇಲಾಖೆಗೆ ಈಗ ಮತ್ತೊಂದು ಪ್ರಸ್ತಾವ ಸಲ್ಲಿಸಿರುವ ಸದಸ್ಯರು, ಸರ್ಕಾರದ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದಾರೆ.

ಸಾಫ್ಟ್‌ವೇರ್ ಉದ್ಯೋಗಿಗಳು, ವೈದ್ಯರು, ಉದ್ಯಮಿಗಳು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕೊಳಾಯಿ ರಿಪೇರಿ ಮಾಡುವವರು ಸೇರಿದಂತೆ ಎಲ್ಲ ವರ್ಗದ ಜನ ಈ ಪಡೆಯಲ್ಲಿದ್ದಾರೆ. ಸರ್ಕಾರದ ಭತ್ಯೆ ಉಳ್ಳವರಿಗೆ ಏನೂ ಅಲ್ಲದಿದ್ದರೂ ಶೇ 60ರಷ್ಟು ಬಡ ಸದಸ್ಯರಿಗೆ ಅದರಿಂದ ತುಂಬ ಅನುಕೂಲವಾಗುತ್ತಿದೆ.

‘ನಮ್ಮ ಕಾಲೇಜಿನ 160 ವಿದ್ಯಾರ್ಥಿಗಳು ಈ ಪಡೆಯಲ್ಲಿದ್ದಾರೆ. ಒಂದು ಕಾರ್ಯಾಚರಣೆ ನಾಲ್ಕು ದಿನ ನಡೆದರೆ, ₹1,200 ಸಿಗುತ್ತದೆ. ಅದು ಬಸ್ ಪಾಸ್‌ಗೋ, ತಿಂಗಳ ಖರ್ಚಿಗೋ ಬಳಕೆಯಾಗುತ್ತದೆ. ಸರ್ಕಾರ ಅದನ್ನೂ ತಕ್ಷಣಕ್ಕೆ ಕೊಡುವುದಿಲ್ಲ. ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಂದು ಬಾರಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ. ಭತ್ಯೆಯನ್ನು ₹550ಕ್ಕೆ ಹೆಚ್ಚಿಸಿ, ಕಾರ್ಯಾಚರಣೆ ಮುಗಿದ ದಿನವೇ ಕೊಡುವಂತೆ ವ್ಯವಸ್ಥೆ ಮಾಡಬೇಕು’ ಎಂಬುದು ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳ ಮನವಿ.

ಪಡೆ ಕಟ್ಟಿದ್ದು ಹೇಗೆ: 1935ರಲ್ಲಿ ಅಮೆರಿಕಾ ಹಾಗೂ ಯೂರೋಪ್‌ ರಾಷ್ಟ್ರಗಳಲ್ಲಿ ‘ಏರ್‌ ರೈಡ್ ಪ್ರಿಕಾಷನ್’ ಹೆಸರಿನಲ್ಲಿ ಸ್ವಯಂ ಸೇವಾ ಸಂಘಟನೆ ಹುಟ್ಟಿಕೊಂಡಿತು. ಅದೇ ಮಾದರಿಯಲ್ಲಿ ದೇಶದಲ್ಲೂ 1965ರಲ್ಲಿ ‘ಸಿವಿಲ್ ಡಿಫೆನ್ಸ್’ ಪ್ರಾರಂಭಿಸಲಾಯಿತು. ಯುದ್ಧಗಳು ನಡೆಯುವಾಗ ಸೈನಿಕರು ಗಡಿಗಳಲ್ಲಿ ಹೋರಾಡುತ್ತಿದ್ದರೆ, ಸಿವಿಲ್ ಡಿಫೆನ್ಸ್ ಪಡೆ ಗಡಿಯೊಳಗಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿತ್ತು. ಯುದ್ಧಗಳು ಕಡಿಮೆಯಾದ ಬಳಿಕ ಈ ಪಡೆಗೆ ವಿಪತ್ತು ನಿರ್ವಹಣೆಯ ಜವಾಬ್ದಾರಿ ನೀಡಲಾಯಿತು. ಅಂತೆಯೇ ರಾಜ್ಯದಲ್ಲಿ 2005ರಿಂದ ಈ ಪಡೆ ಚಾಲ್ತಿಗೆ ಬಂತು’ ಎಂದು ಪಡೆಯ ಕಮಾಂಡಿಂಗ್ ಆಫೀಸರ್ ಪಿ.ಆರ್.ಎಸ್ ಚೇತನ್ ವಿವರಿಸಿದರು.

‘ಸೇನೆ ಸೇರಬೇಕು, ಐಪಿಎಸ್ ಅಧಿಕಾರಿ ಆಗಬೇಕೆಂಬ ಆಸೆ ಇಟ್ಟುಕೊಂಡ ಬಹಳಷ್ಟು ಮಂದಿ ರಾಜ್ಯದಲ್ಲಿದ್ದಾರೆ. ಆ ಕನಸು ಈಡೇರದೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅವರೆಲ್ಲರೂ ಈಗ ನಮ್ಮ ಪಡೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಸದಸ್ಯರ ಸಂಖ್ಯೆ ತುಂಬ ಕಡಿಮೆ ಇತ್ತು. ಕಾಲೇಜುಗಳು, ಕಂಪನಿಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಸೇರಿದಂತೆ ಹೆಚ್ಚು ಜನರಿರುವ ಪ್ರದೇಶಗಳಿಗೆ ಹೋಗಿ ಜಾಗೃತಿ ಮೂಡಿಸಲಾರಂಭಿಸಿದೆವು. ಪಡೆಯನ್ನು ಸೇರುವಂತೆ ಮನವಿ ಮಾಡಿದೆವು. ಈ ಎಲ್ಲ ಪ್ರಯತ್ನಗಳಿಂದಾಗಿ ಈಗ ಪಡೆ ಹೆಮ್ಮರವಾಗಿ ಬೆಳೆದಿದೆ’ ಎಂದು ಹೇಳಿದರು.

ಶೇ 30ರಷ್ಟು ಸ್ತ್ರೀಬಲ: ‘ರಾಜ್ಯದಲ್ಲಿ ವಿಪತ್ತುಗಳು ಎದುರಾದಾಗ ಅಗ್ನಿಶಾಮಕ, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿ ಮೊದಲು ಸ್ಥಳಕ್ಕೆ ಹೋಗುತ್ತಾರೆ. ಆದರೆ, ಈ ಪಡೆಗಳಲ್ಲೂ ಮಹಿಳಾ ಸಿಬ್ಬಂದಿ ಇಲ್ಲ. ಆದರೆ, ಸಿವಿಲ್ ಡಿಫೆನ್ಸ್‌ನಲ್ಲಿ ಶೇ 30ರಷ್ಟು (3,500ಕ್ಕಿಂತ ಹೆಚ್ಚು) ಮಹಿಳೆಯರಿದ್ದಾರೆ. ದುರಂತಗಳಲ್ಲಿ ಮಹಿಳೆಯರು ಹಾಗೂ ಮಕ್ಕಳೇ ಹೆಚ್ಚು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಹೀಗಾಗಿ, ಮಹಿಳೆಯರ ರಕ್ಷಣೆ ವಿಚಾರದಲ್ಲಿ ನಮ್ಮ ಪಡೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ’ ಎಂದು ಚೇತನ್ ಮಾಹಿತಿ ಕೊಟ್ಟರು.

‘ಬಸ್ ಪ್ರಯಾಣಕ್ಕೂ ಸಾಲಲ್ಲ’

‘2016ರಲ್ಲಿ ಈ ಪಡೆ ಸೇರಿದೆ. ನಮ್ಮ ವಿದ್ಯಾರ್ಥಿಗಳೂ ಇದರಲ್ಲಿದ್ದಾರೆ. ಪರೀಕ್ಷಾ ಸಮಯಗಳನ್ನು ಹೊರತುಪಡಿಸಿ ಬೇರೆಲ್ಲ ಕಾರ್ಯಾಚರಣೆಗಳಲ್ಲೂ ಪಾಲ್ಗೊಂಡಿದ್ದೇನೆ. ಸರ್ಕಾರ ಕೊಡುತ್ತಿರುವ ಭತ್ಯೆ ದುರಂತದ ಸ್ಥಳಕ್ಕೆ ಹೋಗಿ ಬರುವುದಕ್ಕೂ ಸಾಕಾಗುವುದಿಲ್ಲ’ ಎಂದು ಬಿಎಂಎಸ್ ಕಾಲೇಜಿನ ಉಪನ್ಯಾಸಕ ಡಾ.ಶಿವರಾಮರೆಡ್ಡಿ ಹೇಳಿದರು.

‘ಸರ್ಕಾರಕ್ಕೆ ಕಾಳಜಿ ಇರಬೇಕು’

‘ನಾನು ಓದಿದ್ದು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ. ಮೂರು ವರ್ಷಗಳ ಹಿಂದೆ ಈ ಪಡೆಯನ್ನು ಸೇರಿದೆ. ಈಗ ಕೆಲಸದ ಹುಡುಕಾಟದಲ್ಲಿದ್ದೇನೆ. ನಾವು ಸಮಾಜದ ಒಳಿತಿಗೆ ಕೆಲಸ ಮಾಡುತ್ತಿರುವಾಗ, ಸರ್ಕಾರಕ್ಕೂ ನಮ್ಮ ಮೇಲೆ ಕಾಳಜಿ ಇರಬೇಕು’ ಎಂದು ಬ್ರಿಜೇಶ್ ಹೇಳಿದರು.

ರೈಲ್ವೆ ಹಳಿ ಕಾದಿದ್ದ ರಾಜ್ಯಪಾಲರು

‘ಹಿಂದಿನ ರಾಜ್ಯಪಾಲ ಹನ್ಸರಾಜ್ ಭಾರದ್ವಜ್ ಸಹ 1965ರಲ್ಲಿ ಸಿವಿಲ್ ಡಿಫೆನ್ಸ್‌ನ ಸದಸ್ಯರಾಗಿದ್ದರು. 1965ರಲ್ಲಿ ಭಾರತ–ಚೀನಾ ನಡುವೆ ಯುದ್ಧ ನಡೆಯುವಾಗ ಅವರಿಗೆ ರೈಲ್ವೆ ಹಳಿ ಕಾಯುವ ಕೆಲಸ ಕೊಡಲಾಗಿತ್ತು. ಇದನ್ನು ಅವರೇ ಹೇಳಿಕೊಂಡಿದ್ದಾರೆ’ ಎಂದು ಚೇತನ್ ಹೇಳಿದರು.

ನೀವೂ ‘ಸಿವಿಲ್ ಡಿಫೆನ್ಸ್’ ಸೇರಬೇಕೇ?

18 ವರ್ಷ ದಾಟಿದ ಪ್ರತಿಯೊಬ್ಬರೂ ಈ ಪಡೆಯನ್ನು ಸೇರಬಹುದು. ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ. ಆದರೆ, ತಮ್ಮ ಪೂರ್ವಾಪರದ ಬಗ್ಗೆ ಪೊಲೀಸ್ ಪರಿಶೀಲನೆ ನಡೆಯುತ್ತದೆ. ಆಯ್ಕೆಯಾದವರಿಗೆ ಹಲಸೂರಿನ ಸಿವಿಲ್ ಡಿಫೆನ್ಸ್ ಅಕಾಡೆಮಿಯಲ್ಲಿ 12 ತಿಂಗಳ ತರಬೇತಿ ಇರುತ್ತದೆ. ನಂತರ ಮೈಸೂರಿನ ಆಡಳಿತ ತರಬೇತಿ ಕೇಂದ್ರ (ಎಟಿಐ), ನಾಗ್ಪುರದ ನ್ಯಾಷನಲ್ ಸಿವಿಲ್ ಡಿಫೆನ್ಸ್ ಕಾಲೇಜು, ದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟಷನ್ ಆಫ್ ಡಿಸಾಸ್ಟರ್ ಸೆಂಟರ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದಲ್ಲಿ ತರಬೇತಿ ಇರುತ್ತದೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

ಎಲ್ಲೆಲ್ಲಿದ್ದಾರೆ ಈ ರಕ್ಷಕರು?

ಸ್ಥಳ ಘಟಕಗಳು ಸದಸ್ಯರು

ಬೆಂಗಳೂರು 63 10,500

ಕೈಗಾ 01 544

ರಾಯಚೂರು 01 429

ಉಡುಪಿ/ಮಂಗಳೂರು 01 370

**

2018ರ ಕಾರ್ಯಾಚರಣೆ ವಿವರ

ದುರಂತ ಬಂದ ಕರೆಗಳು

ಅಗ್ನಿ ಅವಘ‌ಡ 46

ಮಳೆ ಅನಾಹುತ 81

ಕಟ್ಟಡ ಕುಸಿತ 24

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT