ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನ ಸ್ವಚ್ಛತೆಗೆ ಮೇಯರ್‌ ಸೂಚನೆ

Last Updated 12 ಜೂನ್ 2019, 19:16 IST
ಅಕ್ಷರ ಗಾತ್ರ

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಸ್ಮಶಾನ ಮತ್ತು ಚಿತಾಗಾರಗಳಲ್ಲಿ ಉತ್ಪಾದನೆಯಾಗುವ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಬೇಕು. ಉದ್ಯಾನಗಳಂತೆಯೇ ಸ್ಮಶಾನಗಳಲ್ಲಿಯೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಸಭೆ ನಡೆಸಿದ ಅವರು, ‘ಮಾರುಕಟ್ಟೆಯಲ್ಲಿ ಈಗಲೂ ಪ್ಲಾಸ್ಟಿಕ್‌ ಕವರ್‌ಗಳು ಹೇರಳವಾಗಿ ದೊರೆಯುತ್ತಿವೆ. ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಮತ್ತು ಪ್ಲಾಸ್ಟಿಕ್‌ ಮಾರಾಟ ಮಾಡುವ ವ್ಯಾಪಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಡೆಂಗಿ ನಿಯಂತ್ರಿಸಲು ಆರೋಗ್ಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಕುರಿತು, ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಪರಿಶೀಲನೆ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಮೇಯರ್‌, ಕೆಲವೆಡೆ ಕುಂದು–ಕೊರತೆ
ಗಳನ್ನು ಆಲಿಸಿದರು. ಟ್ರಿನಿಟಿ ವೃತ್ತದ ಬಳಿ ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂನ ಅನಧಿಕೃತ ಕೇಬಲ್‌ಗಳು ಜೋತು ಬಿದ್ದಿದ್ದನ್ನು ಕಂಡು, ಬೆಸ್ಕಾಂ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ತೆರವುಗೊಳಿಸಿದರು. ನಂತರ, ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್‌ಗೆ ಭೇಟಿ ನೀಡಿ, ನೀರುಗಾಲುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ₹1.9 ಕೋಟಿ ವೆಚ್ಚದ ಕಾಮಗಾರಿಯನ್ನು ಜುಲೈ 15ರೊಳಗೆ ಪೂರ್ಣಗೊಳಿಸಲು ಸೂಚಿಸಿದರು.

ಪಿಒಪಿ ಮೂರ್ತಿಗಳಿಗೆ ನಿರ್ಬಂಧ

ಪಿಒಪಿ ಗಣೇಶ ಮೂರ್ತಿಗಳ ಸ್ಥಾಪನೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುಂದಿನ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಇಂತಹ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇವುಗಳನ್ನು ತಯಾರಿಸಲು ಅವಕಾಶ ನೀಡಬಾರದು ಮತ್ತು ಹೊರಗಡೆಯಿಂದ ಇಂತಹ ಮೂರ್ತಿಗಳು ನಗರದೊಳಗೆ ಬಾರದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT