ವಿವರಣೆ ಕೇಳಿದ ಕಮಿಷನರ್

7

ವಿವರಣೆ ಕೇಳಿದ ಕಮಿಷನರ್

Published:
Updated:
Deccan Herald

ಬೆಂಗಳೂರು: ತಮ್ಮ ವ್ಯಾಪ್ತಿಯ ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಕ್ರಮ ಜರುಗಿಸದೆ ಕರ್ತವ್ಯಲೋಪ ಎಸಗಿದ ಸ್ಥಳೀಯ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಂದ ವಿವರಣೆ ಪಡೆಯುವಂತೆ ಎಂಟೂ ವಿಭಾಗಗಳ ಡಿಸಿಪಿಗಳಿಗೆ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಸೂಚಿಸಿದ್ದಾರೆ.

ಸಿಸಿಬಿ ಪೊಲೀಸರು ಇತ್ತೀಚೆಗೆ ಅಶೋಕನಗರ, ಇಂದಿರಾನಗರ, ಕಬ್ಬನ್‌ಪಾರ್ಕ್, ಶಿವಾಜಿನಗರ, ಆಡುಗೋಡಿ, ಕೊತ್ತನೂರು, ಯಲಹಂಕ, ಕೊಡಿಗೇಹಳ್ಳಿ, ಎಸ್‌.ಆರ್.ನಗರ ಸೇರಿದಂತೆ ನಗರದ ವಿವಿಧೆಡೆ ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದರು. ಹೊರರಾಜ್ಯದ ಯುವತಿಯರಿಂದ ನೃತ್ಯ ಮಾಡಿಸುವುದು, ತಡರಾತ್ರಿವರೆಗೂ ಮದ್ಯ ಪೂರೈಕೆ, ಜೂಜಾಟ, ಅಬ್ಬರದ ಸಂಗೀತ ಹಾಕುವುದು... ಹೀಗೆ, ಹಲವು ಲೋಪಗಳು ಕಂಡು ಬಂದಿದ್ದವು.

‘ಯಾವ್ಯಾವ ಪಬ್, ಕ್ಲಬ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದೇ ಇರುತ್ತದೆ. ಆದರೂ, ಅವರು ಕ್ರಮ ತೆಗೆದುಕೊಳ್ಳುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಅವರಿಂದ ವಿವರಣೆ ಕೇಳಿದ್ದೇನೆ’ ಎಂದು ಕಮಿಷನರ್ ಹೇಳಿದರು.

ಪತಿ ಬೈದಿದ್ದಕ್ಕೆ ಗೃಹಿಣಿ ಆತ್ಮಹತ್ಯೆ

ಬೆಂಗಳೂರು: ತಡವಾಗಿ ಎದ್ದಿದ್ದಕ್ಕೆ ಪತಿ ಬೈದಿದ್ದರಿಂದ ಬೇಸರಗೊಂಡು ಅಂಜಲಿ (26) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡಿನ ಅಂಜಲಿ, ಸಂಬಂಧಿ ದಂಡಾಯುದಂ ಅವರನ್ನು ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಇಬ್ಬರು ಮಕ್ಕಳೊಂದಿಗೆ ಕದಿರೇನಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಂಗಳವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30ರ ನಡುವೆ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬನಶಂಕರಿ ಪೊಲೀಸರು ಹೇಳಿದ್ದಾರೆ.

‘ಬೆಳಿಗ್ಗೆ 8.30ರ ಸುಮಾರಿಗೆ ನಿದ್ರೆಯಿಂದ ಎದ್ದ ಪತ್ನಿ, ತಿಂಡಿ ಸಿದ್ಧಪಡಿಸುವುದನ್ನು ತಡ ಮಾಡಿದಳು. ಅದಕ್ಕೆ, ಮಕ್ಕಳು ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಹೋಗಬೇಕಾ? ಬೇಗ ಎದ್ದು ಕೆಲಸ ಮಾಡೋಕಾಗಲ್ವ ಎಂದು ಬೈದಿದ್ದೆ. ‘ನಾನು ಈ ಮನೆಯ ಕೆಲಸದವಳಲ್ಲ’ ಎಂದು ಆಕೆ ಪ್ರತಿಕ್ರಿಯಿಸಿದ್ದರಿಂದ ಜೋರು ವಾಗ್ವಾದ ನಡೆದಿತ್ತು’ ಎಂದು ದಂಡಾಯುದಂ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದರು.

‘ಮಕ್ಕಳಿಗೆ ಹೋಟೆಲ್‌ನಲ್ಲಿ ತಿಂಡಿ ಕೊಡಿಸಿ, ಶಾಲೆಗೆ ಬಿಟ್ಟೆ. ಬಳಿಕ ನಾನೂ ಕೆಲಸಕ್ಕೆ ಹೋದೆ. ಮಧ್ಯಾಹ್ನ ಊಟಕ್ಕೆ ಮನೆಗೆ ವಾಪಸಾದಾಗ ಪತ್ನಿ ನೇಣಿಗೆ ಶರಣಾಗಿದ್ದಳು’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !