ಭಾನುವಾರ, ಆಗಸ್ಟ್ 25, 2019
28 °C
ಒಟ್ಟಾಗಿ ಬಾಳುವ ಪಾಠ ಕಲಿಸಿದ ಮಹಾಮಳೆ

ಸಹಬಾಳ್ವೆಯ ‘ಜನ್ನತ್‌’ ನಗರ

Published:
Updated:
Prajavani

ಧಾರವಾಡ: ಎರಡು ಧರ್ಮಗಳ ಜನರಿರುವ ಸೂಕ್ಷ್ಮ ಪ್ರದೇಶವೊಂದು ಧರ್ಮಭೇದ ಮರೆತು ಒಟ್ಟಾಗಿ ಬಾಳುವಂಥ ಪಾಠವನ್ನು ಇಲ್ಲಿಯ ಮಹಾಮಳೆ ಕಲಿಸಿಕೊಟ್ಟಿದೆ. ಧಾರವಾಡದ ಕೂಲಿಕಾರ್ಮಿಕರು, ಬಡವರೇ ಹೆಚ್ಚಾಗಿರುವ ‘ಜನ್ನತ್‌’ ನಗರದಲ್ಲಿ ಇದೀಗ ಸಹಬಾಳ್ವೆಯೇ ನೆಲೆ ನಿಂತಿದೆ.

ನಾರಾಯಣಮ್ಮ ಎಂಬುವವರ ಮನೆಯ ಗೋಡೆ ಕುಸಿದು, ವಾಸಿಸಲು ಸಾಧ್ಯವಿಲ್ಲ ಎನ್ನುವಂತಾಗಿತ್ತು. ಪರಿಹಾರ ಕೇಂದ್ರವಿನ್ನೂ ಆರಂಭವಾಗದ ಸಮಯದಲ್ಲಿಯೇ ನಾರಾಯಣಮ್ಮ ಅವರಿಗೆ ನೆಲೆಯೇ ಅತಂತ್ರವಾಗಿತ್ತು. ಅವರ ಮಕ್ಕಳು ಕೂಲಿ ಹುಡುಕಿಕೊಂಡು ಗುಳೆ ಹೋಗಿದ್ದಾರೆ. ಇನ್ನು ಹೋಗುವುದೆಲ್ಲಿ? ಕುಸಿದ ಮನೆಯಲ್ಲಿ ಇರುವುದಂತೂ ಅಸಾಧ್ಯವಾಗಿತ್ತು. ದವಸಧಾನ್ಯಗಳೆಲ್ಲವೂ ಹಾಳಾಗಿದ್ದವು. ನಾರಾಯಣಮ್ಮನಿಗೆ ಆಶ್ರಯ ನೀಡಿದ್ದು, ಬೀದಿ ಬೀದಿ ಅಲೆದು, ಸೋಪು ಮಾರುವ ರಾಬೂನ್‌ಬಿ ಮುಲ್ಲಾ ಎಂಬುವವರು.

‘ಸದ್ಯಕ್ಕಂತೂ ಮನೆ ದುರಸ್ತಿಯಾಗುವ ಸ್ಥಿತಿಯಲ್ಲಿಲ್ಲ. ಮಕ್ಕಳೂ ದೂರದೂರಿನಲ್ಲಿದ್ದಾರೆ. ಅವರು ಬರುವವರೆಗೂ, ಮನೆ ಸರಿ ಮಾಡಿಕೊಳ್ಳುವವರೆಗೂ ಇಲ್ಲಿಯೇ ಇರಲಿ’ ಎಂದು ರಾಬೂನ್‌ ಬಿ ಹೇಳುತ್ತಾರೆ.

‘ಮತ ಕೇಳುವಾಗ ಮಾತ್ರ ಮುಖಂಡರು ಬರುತ್ತಾರೆ. ಸಂಕಷ್ಟದಲ್ಲಿ ಯಾರೂ ಬರುವುದಿಲ್ಲ.. ಕೊನೆವರೆಗೂ ಜೊತೆಗಿರಬೇಕಾದವರು ನಾವೇ. ನಮ್ಮ ಸಂಕಷ್ಟಕ್ಕೆ ನಾವೇ ಜೊತೆಯಾಗಿದ್ದೇವೆ..’ ಎನ್ನುತ್ತಾರೆ ಅವರು.

ಚರಂಡಿ ಪಕ್ಕದಲ್ಲಿ ಮನೆಮಾಡಿಕೊಂಡಿರುವ ದ್ರಾಕ್ಷಾಯಿಣಿ ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಳೆ ಬಂದು ಮನೆ ಗೋಡೆ ಕುಸಿಯುವಂತಾಗಿತ್ತು. ಚರಂಡಿ ನೀರು ಮನೆ ಒಳ ಹೊಕ್ಕು, ದಿನಸಿ ಎಲ್ಲವೂ ನೀರು ಪಾಲಾಗಿತ್ತು. ಸಾಲದು ಎಂಬಂತೆ ಅಂದು ರಾತ್ರಿಯೇ ಗೋಡೆ ಸಹ ಕುಸಿದು ಬಿತ್ತು. ಉಣ್ಣೋದೇನು, ಇರುವುದೆಲ್ಲಿ ಎಂಬ ಪ್ರಶ್ನೆ ಎದುರಾದಾಗ, ಗೌಂಡಿ ಕೆಲಸ ಮಾಡುವ ಇಲಿಯಾಸ್‌ ಬಳರೊಟ್ಟಿ ಇವರಿಗೆ ಆಶ್ರಯ ನೀಡಿದರು.

ಅವರ ಪುಟ್ಟ ಮನೆಯಲ್ಲಿಯೇ ದ್ರಾಕ್ಷಾಯಿಣಿ ಕುಟುಂಬವೂ ಬಂದು ನೆಲೆಸಿದೆ. ಬೆಳಗಾದ ಮೇಲೆ ಪರಿಹಾರ ಕೇಂದ್ರಕ್ಕೆ ಹೋಗಿ, ಅಗತ್ಯದ ಸಾಮಗ್ರಿಗಳನ್ನೂ ತಂದು ಕೊಟ್ಟರು. ಮನೆ ಕುಸಿದವರಿಗೆ ಪರಿಹಾರ ಕೊಡಿಸಲು ಏನು ಮಾಡಬೇಕು ಎಂಬುದನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಚಾರಿಸಿಕೊಂಡು ಬಂದ ಇಲಿಯಾಸ್‌, ದ್ರಾಕ್ಷಾಯಿಣಿ ಕುಟುಂಬಕ್ಕೆ ಅಷ್ಟೇ ಅಲ್ಲ, ಮನೆ ಕಳೆದುಕೊಂಡ ಇತರ ಕುಟುಂಬಗಳಿಗೂ ಸಹಾಯ ಮಾಡುತ್ತಿದ್ದಾರೆ. ಕುಸಿದ ಮನೆಗಳ ಚಿತ್ರ ತೆಗೆಸಿ, ಜಿಲ್ಲಾಡಳಿತಕ್ಕೆ ಮನವಿ ಕೊಡುವ ಕಾರ್ಯಗಳಿಗಾಗಿ ನೆರವಾಗುತ್ತಿದ್ದಾರೆ.

ಇದೇ ಜನ್ನತ್‌ ನಗರದಲ್ಲಿ 2013ರಲ್ಲಿ ಹಿಂದೂ– ಮುಸ್ಲಿಮರ ನಡುವೆ ಗಲಾಟೆ ಆಗಿತ್ತು. ಈ ಕಾರಣಕ್ಕೆ ಇದು ಸೂಕ್ಷ್ಮ ಪ್ರದೇಶದಂತಾಗಿತ್ತು. ಹಳೆ ನೀರು ಕೊಚ್ಚಿ, ಹೊಸ ನೀರು ಹರಿದಿರುವಾಗ ಸೌಹಾರ್ದವಿಲ್ಲೀಗ ನೆಲೆ ಕಾಣುತ್ತಿದೆ.

* ಯಾವ ಮುಖಂಡರೂ ನಮ್ಮ ಸಹಾಯಕ್ಕೆ ಬರುವುದಿಲ್ಲ. ಕಷ್ಟದಲ್ಲಿರುವವರಿಗೆ ನೆರವಾಗುವುದು ದೇವರ ಕೆಲಸವಿದ್ದಂತೆ

– ರಾಬೂನ್‌ಬೀ ಮುಲ್ಲಾ, ಜನ್ನತನಗರ ನಿವಾಸಿ

* ಈ ಕುಟುಂಬಕ್ಕೆ ಪರಿಹಾರ ಕೊಡಿಸಲು ಓಡಾಡುತ್ತಿದ್ದೇನೆ. ಒಟ್ಟಿಗೆ ಬದುಕುತ್ತಿರುವಾಗ ಒಬ್ಬರಿಗೊಬ್ಬರು ಸಹಾಯ ಮಾಡುವುದೇ ನಿಜವಾದ ಧರ್ಮ

– ಇಲಿಯಾಸ್ ಬಳರೊಟ್ಟಿ

Post Comments (+)