ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ನಾಯಕರ ಕಿಚ್ಚು; ಕಾರ್ಯಕರ್ತರ ಕೆಚ್ಚು

ಡಿ‌ಕೆಶಿ ಬಂಧನ ವಿರೋಧಿಸಿ ಪ್ರತಿಭಟನೆ l ಬಿಜೆಪಿಯಿಂದ ಹೇಡಿತನದ ರಾಜಕಾರಣ: ದಿನೇಶ್ ಗುಂಡೂರಾವ್
Last Updated 4 ಸೆಪ್ಟೆಂಬರ್ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಬುಧವಾರ ಬೆಳಿಗ್ಗೆ ಮೌರ್ಯ ವೃತ್ತ, ಬ್ರಿಗೇಡ್ ರಸ್ತೆ, ನವರಂಗ್ ವೃತ್ತ ಸೇರಿದಂತೆ ನಗರದ ವಿವಿಧ ಕಡೆ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಮೌರ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಭಾಗವಹಿಸಿದರೆ, ವಿಧಾನಸಭಾ ಕ್ಷೇತ್ರ
ವಾರು ನಡೆದ ಪ್ರತಿಭಟನೆಗೆ ಸ್ಥಳೀಯ ಶಾಸಕರು ಸಾಥ್‌ ನೀಡಿದರು. ಟೈರ್‌ಗೆ ಬೆಂಕಿ ಹಚ್ಚಿದ ಪ್ರತಿಭಟನೆಕಾರರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಮೌರ್ಯ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಶಿವಕುಮಾರ್ ಅವರನ್ನು ರಾಜಕೀಯವಾಗಿ ಎದುರಿಸಲಾಗದೆ ಸಿಬಿಐ, ಇಡಿ, ಐಟಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಹೇಡಿತನದ ರಾಜಕಾರಣ ಮಾಡುತ್ತಿದೆ’ ಎಂದು ಗುಡುಗಿದರು.

‘ಶಿವಕುಮಾರ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಲುವಾಗಿ ಈ ಕೆಲಸ ಮಾಡಿದ್ದಾರೆ. ಇಡಿ, ಐಟಿ, ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ. ಗುಜರಾತ್‌ನ ಶಾಸಕರಿಗೆ ರಕ್ಷಣೆ ಕೊಟ್ಟ ಒಂದೇ ಕಾರಣಕ್ಕೆ ಶಿವಕುಮಾರ್‌ ಮೇಲೆ ಐಟಿ ದಾಳಿ ನಡೆಯಿತು’ ಎಂದರು.

‘ಇ.ಡಿಯ ಎಲ್ಲ ಪ್ರಶ್ನೆಗಳಿಗೆ ಶಿವಕುಮಾರ್‌ ಉತ್ತರಿಸಿದ್ದಾರೆ. ಅವರ ತಾಯಿ, ಪತ್ನಿ, ಪುತ್ರಿಯ ವಿಚಾರಣೆ ನಡೆಸಿದ್ದಾರೆ. ಆದರೆ, ಗಣೇಶ ಹಬ್ಬಕ್ಕೆ ಮನೆಗೆ ಹೋಗಲು ಅವಕಾಶ ಕೊಡಲಿಲ್ಲ. ತಂದೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೂಡಾ ಅವಕಾಶ ಕೊಡ
ಲಿಲ್ಲ. ಏನಾದರೂ ಸಾಕ್ಷಿ ಇದ್ದರೆ ಎಫ್‌ಐಆರ್ ಹಾಕಲಿ. ಚಾರ್ಜ್ ಶೀಟ್ ಹಾಕಿ ಕೋರ್ಟ್‌ಗೆ ಕರೆದುಕೊಂಡು ಹೋಗಲಿ. ಅದು ಬಿಟ್ಟು ಹೀಗೆ ಷಡ್ಯಂತ್ರ ನಡೆಸುವುದು ಸರಿಯಲ್ಲ’ ಎಂದರು.

‘ಕಾಂಗ್ರೆಸ್ ಪಕ್ಷ ಎಲ್ಲ ಷಡ್ಯಂತ್ರಗಳನ್ನು ಸಮರ್ಥವಾಗಿ ಎದುರಿಸಲಿದೆ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಶಿವಕುಮಾರ್‌ ಅವರಿಗೆ ಪಕ್ಷದ ಸಂಪೂರ್ಣ ಬೆಂಬಲವಿದೆ’ ಎಂದ ಅವರು, ‘ಚಿದಂಬರಂ ಅವರೂ ವಿಚಾರಣೆಗೆ ಸಹಕಾರ ಕೊಟ್ಟಿದ್ದಾರೆ. ಆದರೆ ಅವರನ್ನೂ ಸಿಬಿಐ ಬಂಧಿಸಿದೆ. ಅವರೇನು ಕೊಲೆಗಾರರಾ? ಚಿದಂಬರಂ, ಡಿಕೆಶಿ ವಿರುದ್ಧ ಯಾಕೆ ಹೀಗೆ ಮಾಡ್ತಿದ್ದೀರಾ? ರಾತ್ರಿ ವೇಳೆಯೇ ಯಾಕೆ ಬಂಧಿಸಬೇಕು? ಕಾಂಪೌಂಡ್ ಹಾರಿ ಬಂಧಿಸುವ ಅಗತ್ಯವಾದರೂ ಏನಿದೆ’ ಎಂದು ಪ್ರಶ್ನಿಸಿದರು.

‌‘ಯಡಿಯೂರಪ್ಪ ವಿರುದ್ಧ ಯಾಕೆ ಕ್ರಮ ಕೈಗೊಳ್ಳುವುದಿಲ್ಲ. ಆಪರೇಷನ್ ಕಮಲದ ಆಡಿಯೊ ಇದೆ. ಶಾಸಕರಿಗೂ ಕೋಟ್ಯಂತರ ರೂಪಾಯಿ ಆಮಿಷದ ಆಡಿಯೊ ಕೂಡಾ ಇದೆ. ಅವರ ವಿರುದ್ಧ ಯಾಕೆ ದಾಳಿ ನಡೆಯುವುದಿಲ್ಲ. ಎಲ್ಲ ದಾಳಿಗಳೂ ವಿರೋಧ ಪಕ್ಷದ ನಾಯಕರ ಮೇಲೆ ನಡೆಯುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕಿ ಸೌಮ್ಯಾ ರೆಡ್ಡಿ, ಕಾಂಗ್ರೆಸ್‌ ಮುಖಂಡರಾದ ಕೆ.ಎಚ್. ಮುನಿಯಪ್ಪ, ವೀರಣ್ಣ ಮತ್ತಿಕಟ್ಟಿ, ವಿ.ಆರ್. ಸುದರ್ಶನ್, ಸಿ. ನಾರಾಯಣಸ್ವಾಮಿ ಭಾಗವಹಿಸಿದರು.

ಅಲ್ಲಲ್ಲಿ ಬಸ್ಸುಗಳಿಗೆ ಕಲ್ಲೆಸೆತ

ಮೌರ್ಯ ವೃತ್ತದ ಬಳಿ ಪ್ರತಿಭಟನೆ ಮುಗಿಸಿ ತೆರಳುತ್ತಿದ್ದ ಡಿ.ಕೆ. ಶಿವಕುಮಾರ್ ಬೆಂಬಲಿಗರು ಕೆಎಸ್ಆರ್‌ಟಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ
ಘಟನೆ ನಡೆದಿದೆ.

ಹಳೆ ಜೆಡಿಎಸ್ ಕಚೇರಿ ಮುಂಭಾಗದಲ್ಲಿ ಬೆಂಗಳೂರು- ಗೌರಿಬಿದನೂರು ಬಸ್ಸಿಗೆ ಕಲ್ಲು ತೂರಾಟ ನಡೆಸಲಾಗಿದೆ. ಬೆಂಗಳೂರಿನಿಂದ ಗೌರಿಬಿದನೂರು ಕಡೆ ಬಸ್ ತೆರಳುತ್ತಿತ್ತು.

ಸ್ಯಾಂಕಿ ಕೆರೆ ರಸ್ತೆಯ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ಸಿಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ
ಇದ್ದುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ವೈಯಾಲಿಕಾವಲ್‌ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಸುಮನಹಳ್ಳಿ ಹೊರವರ್ತುಲ ರಸ್ತೆಯಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್ಸಿಗೆ ಬುಧವಾರ ನಸುಕಿನಲ್ಲಿ ಕಿಡಿಗೇಡಿಗಳು ಕಲ್ಲೆಸೆದು, ಬೆಂಕಿ ಹಚ್ಚಿದ್ದರು. ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಚಿಕ್ಕೇನಹಳ್ಳಿ ಗೇಟ್‌ ಬಳಿ ರಸ್ತೆಗೆ ಅಡ್ಡವಾಗಿ ಮರದ ದಿಮ್ಮಿಗಳನ್ನಿಟ್ಟು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT