ದೋಸ್ತಿಗಳ ಕುಸ್ತಿ: ಬಿಜೆಪಿ ಸಭಾತ್ಯಾಗ

7
ಕಾಮಗಾರಿಯಲ್ಲಿ ಶಾಸಕರ ಹಸ್ತಕ್ಷೇಪ ಆರೋಪ

ದೋಸ್ತಿಗಳ ಕುಸ್ತಿ: ಬಿಜೆಪಿ ಸಭಾತ್ಯಾಗ

Published:
Updated:

ಬೆಂಗಳೂರು: ಪಾಲಿಕೆ ಸದಸ್ಯರ ಅನುದಾನದ ಕಾಮಗಾರಿಗಳಲ್ಲಿ ಶಾಸಕರು ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಸದಸ್ಯರು ಆರೋಪ–ಪ್ರತ್ಯಾರೋಪ ಮಾಡಿದರು. ಇದನ್ನು ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌ನ ಲಲಿತಾ ತಿಮ್ಮನಂಜಯ್ಯ (ಕಾಂಗ್ರೆಸ್‌) ವಿಷಯ ಪ್ರಸ್ತಾಪಿಸಿ, ‘ಪೀಣ್ಯ ದಾಸರಹಳ್ಳಿ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಬುಧವಾರ ಜನಸ್ಪಂದನ ನಡೆಸಲಾಗಿದೆ. ಈ ಸಭೆಗೆ ಮಂಗಳವಾರ ರಾತ್ರಿ ವಾಟ್ಸ್‌ ಆ್ಯಪ್‌ ಮೂಲಕ ಆಹ್ವಾನ ನೀಡಲಾಗಿದೆ. ಪಾಲಿಕೆಯ ನಿಯಮಾವಳಿಗಳ ಪ್ರಕಾರ ಸದಸ್ಯರಿಗೆ ಒಂದು ವಾರದ ಮೊದಲು ಆಹ್ವಾನ ನೀಡಬೇಕು. ಸಭೆಯಲ್ಲಿ ಕೂರಲು ಕುರ್ಚಿಯನ್ನೂ ನೀಡಿಲ್ಲ. ನಮ್ಮ ವಾರ್ಡ್‌ನ ಸಮಸ್ಯೆಗಳಿಗೆ ಜೆಡಿಎಸ್‌ ಕಾರ್ಯಕರ್ತರೊಬ್ಬರು ಉತ್ತರಿಸುತ್ತಿದ್ದರು. ನನಗೆ ಅವಮಾನ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಾಲಿಕೆ ಸದಸ್ಯರ ಅನುದಾನದ ಕಾಮಗಾರಿಗಳನ್ನು ಏಕಾಏಕಿ ನಿಲ್ಲಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಉತ್ತರ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ (ಜೆಡಿಎಸ್‌), ‘ಲಗ್ಗೆರೆ ವಾರ್ಡ್‌ನ ಮೇಲ್ಸೇತುವೆ ಕಾಮಗಾರಿಯನ್ನು ಮೂರನೇ ವ್ಯಕ್ತಿ ಬಂದು ನಿಲ್ಲಿಸಿದ್ದಾರೆ. ನನಗೆ ಕಾಮಗಾರಿ ನಡೆಸಲು ಬಿಡುತ್ತಿಲ್ಲ. ಮೂರನೇ ವ್ಯಕ್ತಿಗೆ ಏನು ಕೆಲಸ’ ಎಂದು ಕಿಡಿಕಾರಿದರು.

ಮೇಯರ್‌ ಆರ್‌.ಸಂಪತ್‌ರಾಜ್‌, ‘ಶಾಸಕರು ಹೊಸದಾಗಿ ಬಂದಿದ್ದಾರೆ. ಪಾಲಿಕೆ ಸದಸ್ಯರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಕಾಮಗಾರಿ ನಡೆಸಲು ಅಸಹಕಾರ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು. ‘ಇಲ್ಲಿ ದೋಸ್ತಿಗಳ ನಡುವೆಯೇ ಸರಿಯಿಲ್ಲ. ಶಾಸಕರು ಸದಸ್ಯರಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಬಿಜೆಪಿ ಸದಸ್ಯರು ಆರೋಪಿಸಿ ಸಭಾತ್ಯಾಗ ಮಾಡಿದರು.

ಮಾಜಿ ಮೇಯರ್‌ ಜಿ.ಪದ್ಮಾವತಿ, ‘ಮುಖ್ಯಮಂತ್ರಿ ಅನುದಾನದ ಕಾಮಗಾರಿಗಳನ್ನು ಅಧಿಕಾರಿಗಳು ನಿಲ್ಲಿಸುತ್ತಿದ್ದಾರೆ. ಕೇಳಿದರೆ ಶಾಸಕರ ನಿರ್ದೇಶನ ಎನ್ನುತ್ತಿದ್ದಾರೆ. ಅವರು ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ಕಿಡಿಕಾರಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !