ಪಾಲುದಾರನಿಗೆ ಥಳಿಸಿದ ಕಾಂಗ್ರೆಸ್ ಕಾರ್ಯಕರ್ತ?

ಶನಿವಾರ, ಮೇ 25, 2019
28 °C
ಮೈಕೊಲೇಔಟ್ ಠಾಣೆಯಲ್ಲಿ ದೂರು–ಪ್ರತಿದೂರು ದಾಖಲು

ಪಾಲುದಾರನಿಗೆ ಥಳಿಸಿದ ಕಾಂಗ್ರೆಸ್ ಕಾರ್ಯಕರ್ತ?

Published:
Updated:

ಬೆಂಗಳೂರು: ಹಣಕಾಸು ವಿವಾದದ ಹಿನ್ನೆಲೆಯಲ್ಲಿ ತಮ್ಮ ವ್ಯವಹಾರದ ಪಾಲುದಾರನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕಾಂಗ್ರೆಸ್ ಕಾರ್ಯಕರ್ತ ಕೆ.ಮಂಜುನಾಥ್ ಅಲಿಯಾಸ್ ಎಸ್‌ಟಿಡಿ ಮಂಜು ಹಾಗೂ ಅವರ ಪುತ್ರ ಕಿರಣ್ ವಿರುದ್ಧ ಮೈಕೊಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಸಂಬಂಧ ಎಸ್‌.ಜಿ.ಪಾಳ್ಯದ ನಿವಾಸಿ ಮಲ್ಲಿಕಾರ್ಜುನ್ ದೂರು ಕೊಟ್ಟಿದ್ದಾರೆ. ಮೇ 7ರಂದು ಮೈಕೊಲೇಔಟ್ ಸಮೀಪದ ಕೃಷ್ಣಭವನ್ ಹೋಟೆಲ್‌ ಬಳಿ ಈ ಗಲಾಟೆ ನಡೆದಿದೆ. 

‘ಮಂಜುನಾಥ್ ಹಾಗೂ ಮಲ್ಲಿಕಾರ್ಜುನ್ ಹಲವು ವರ್ಷಗಳಿಂದ ಆಪ್ತ ಸ್ನೇಹಿತರು. ಈ ಗೆಳೆತನದಲ್ಲೇ ಪಾಲುದಾರಿಕೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಹಣ ಹೂಡಿದ್ದರು. ಆದರೆ, ಹಣಕಾಸು ವಿಚಾರಕ್ಕೆ ಇತ್ತೀಚಿಗೆ ಪರಸ್ಪರರ ನಡುವೆ ಮನಸ್ತಾಪ ಉಂಟಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

ಮೇ 7ರಂದು ಹೋಟೆಲ್ ಬಳಿ ಮಲ್ಲಿಕಾರ್ಜುನ್‌ ಅವರನ್ನು ಕಂಡ ತಂದೆ–ಮಗ, ತಮ್ಮ ಹಣ ಕೊಡುವಂತೆ ಕೇಳಿದ್ದಾರೆ. ಇದೇ ವಿಚಾರವಾಗಿ ಮಾತಿನ ಚಕಮಕಿ ಶುರುವಾಗಿ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ಹಂತದಲ್ಲಿ ಮಂಜುನಾಥ್ ಹಾಗೂ ಕಿರಣ್ ತಮ್ಮ ಬೆಂಬಲಿಗರೊಂದಿಗೆ ಸೇರಿಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಪೊಲೀಸರು, ಜಗಳ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇಡೀ ದೃಶ್ಯ ಹೋಟೆಲ್‌ನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ, ಅದರ ಡಿವಿಆರ್ ಪೆಟ್ಟಿಗೆಯನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

‘ನಾವು ಪಾಲುದಾರಿಕೆಯಲ್ಲಿ ಖರೀದಿಸಿದ್ದ ಜಮೀನುವೊಂದರ ದಾಖಲೆ ಮಂಜುನಾಥ್‌ನ ಸುಪರ್ದಿಯಲ್ಲಿದೆ. ಈಗ ಆ ಜಮೀನು ಖರೀದಿಸಿ ಪೂರ್ತಿ ಹಣ ತನಗೆ ಕೊಡುವಂತೆ ಒತ್ತಾಯಿಸುತ್ತಿದ್ದಾನೆ. ಅದಕ್ಕೆ ಒಪ್ಪದಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ’ ಎಂದು ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ. ಆದರೆ, ‘ಜಮೀನು ಖರೀದಿ ವಿಷಯ ಪ್ರಶ್ನಿಸಿದ್ದಕ್ಕೇ ಮಲ್ಲಿಕಾರ್ಜುನ್‌ನೇ ನನಗೆ ಹೊಡೆದ’ ಎಂದು ಆರೋಪಿಸಿ ಮಂಜುನಾಥ್ ಸಹ ಪ್ರತಿದೂರು ಕೊಟ್ಟಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !