ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ವಿರುದ್ಧ ಅತೃಪ್ತರ ಕಿಡಿ

‘ಆಪರೇಷನ್ ಕಮಲ’ಕ್ಕೆ ಹಿನ್ನಡೆ?: ಶಾಸಕರನ್ನು ಕರೆತಂದ ಜಮೀರ್
Last Updated 15 ಫೆಬ್ರುವರಿ 2019, 19:18 IST
ಅಕ್ಷರ ಗಾತ್ರ

ಬೆಂಗಳೂರು: ‘ಅತೃಪ್ತ’ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿಯಾಗಿ ಚರ್ಚಿಸಿದರು.

‘ನಾವು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ದಬ್ಬಾಳಿಕೆಯೇ ಕಾರಣ. ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ, ಬಳ್ಳಾರಿಯಲ್ಲಿ ಇ. ತುಕಾರಾಂ ಅವರನ್ನು ಬೆಳೆಸುತ್ತಿರುವ ಶಿವಕುಮಾರ್ ನಮ್ಮ ರಾಜಕೀಯ ಭವಿಷ್ಯವನ್ನೇ ಕತ್ತಲೆ
ಯಲ್ಲಿ ದೂಡಿದ್ದಾರೆ ಎಂದು ಈ ಶಾಸಕರು ಅಲವತ್ತುಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಗೋಕಾಕ ತಾಲ್ಲೂಕಿನ ತಹಶೀಲ್ದಾರ್, ಇನ್‌ಸ್ಪೆಕ್ಟರ್ ಅಂತಹ ತಳಸ್ತರದ ಅಧಿಕಾರಿಗಳ ವರ್ಗಾವಣೆಯಲ್ಲೂ ತಮ್ಮ ಮಾತು ನಡೆಯುತ್ತಿಲ್ಲ. ಹೆಬ್ಬಾಳಕರ ಮಾತಿಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ಸಂಬಂಧವೇ ಇಲ್ಲದಿದ್ದರೂ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಶಿವಕುಮಾರ್ ಮೂಗು ತೂರಿಸುತ್ತಿದ್ದಾರೆ’ ಎಂದು ಜಾರಕಿಹೊಳಿ ದೂರಿದರು.

ಇದಕ್ಕೆ ಧ್ವನಿಗೂಡಿಸಿದ ನಾಗೇಂದ್ರ, ‘ನಾನು, ಆನಂದ್ ಸಿಂಗ್‌ ಹಾಗೂ ಭೀಮಾನಾಯ್ಕ್ ಕಾಂಗ್ರೆಸ್‌ಗೆ ಬರುವಾಗ ನೀಡಿದ್ದ ಯಾವುದೇ ಬೇಡಿಕೆಗಳೂ ಈಡೇರಿಲ್ಲ. ತುಕಾರಾಂಗೆ ಸಚಿವ ಸ್ಥಾನ ಕೊಡಲಾಗಿದೆ. ನಮ್ಮ ಮಾತಿಗೆ ಕಿಮ್ಮತ್ತೇ ಸಿಗುತ್ತಿಲ್ಲ. ಬಳ್ಳಾರಿ ಜಿಲ್ಲೆ ಉಸ್ತುವಾರಿಯನ್ನು ಶಿವಕುಮಾರ್‌ಗೆ ನೀಡಲಾಗಿದ್ದು, ಅವರ ಅಣತಿಯಂತೆ ಎಲ್ಲವೂ ನಡೆಯುತ್ತಿದೆ. ಶಾಸಕರಾಗಿದ್ದು ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಸಮಸ್ಯೆ ಇದ್ದರೆ ನನ್ನ ಬಳಿ ಚರ್ಚಿಸಬೇಕಿತ್ತು. ಅದು ಬಿಟ್ಟು ಮುಂಬೈಗೆ ಹೋಗಿ ಕುಳಿತರೇ ಆಗುತ್ತದೆಯೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜತೆ ಮುಖಾಮುಖಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ನೀವು ಕೊಟ್ಟ ಭರವಸೆ ಈಡೇರಿಲ್ಲ. ಹೀಗಾಗಿ, ಮುನಿಸಿಕೊಂಡು ಹೋಗಬೇಕಾಯಿತು’ ಎಂದು ಜಾರಕಿಹೊಳಿ ಸಮರ್ಥನೆ ನೀಡಿದರು.

‘ಸದ್ಯವೇ ವೇಣುಗೋಪಾಲ್ ಭೇಟಿಗೆ ಸಮಯ ನಿಗದಿ ಮಾಡುತ್ತೇನೆ. ಅವರ ಮುಂದೆ ನಿಮ್ಮ ಅಹವಾಲು ಹೇಳಿಕೊಳ್ಳಿ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು’ ಎಂದು ಸಿದ್ದರಾಮಯ್ಯ ಸೂಚಿಸಿದರು ಎನ್ನಲಾಗಿದೆ.

ಅಖಾಡಕ್ಕೆ ಇಳಿದ ಜಮೀರ್: ಹಿಂದೆಲ್ಲ ಅತೃಪ್ತ ಶಾಸಕರನ್ನು ಸಮಾಧಾನ ಪಡಿಸುವ ಜವಾಬ್ದಾರಿಯನ್ನು ಸಚಿವ ಶಿವಕುಮಾರ್ ಹೊತ್ತುಕೊಳ್ಳುತ್ತಿದ್ದರೆ, ಈ ಬಾರಿ ಆಹಾರ ಸಚಿವ ಜಮೀರ್ ಅಹಮದ್ ಖಾನ್‌ ಕಣಕ್ಕೆ ಇಳಿದಿದ್ದಾರೆ. ಅತೃಪ್ತರನ್ನು ಕರೆತಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸುವ ಕೆಲಸವನ್ನು ಅವರು ಮಾಡಿದರು.

‘ಸರ್ಕಾರ ಪತನಗೊಳಿಸುವ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ’ ಎಂದು ಸ್ವತಃ ಸಿದ್ದರಾಮಯ್ಯನವರೇ ದೂರಿದ್ದ ಈ ಶಾಸಕರು ‘ಗೂಡಿ’ಗೆ ಮರಳಿರುವುದರಿಂದಾಗಿ ‘ಆಪರೇಷನ್‌ ಕಮಲ’ದ ಯತ್ನ ಒಂದು ಹಂತದಲ್ಲಿ ವಿಫಲಗೊಂಡಂತಾಗಿದೆ ಎಂದೂ ಹೇಳಲಾಗುತ್ತಿದೆ.

ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಂಡೆದ್ದು ಮುಂಬೈ ಸೇರಿಕೊಂಡಿದ್ದ ಶಾಸಕರ ಗುಂಪಿನ ನೇತೃತ್ವ ವಹಿಸಿದ್ದ ಜಾರಕಿಹೊಳಿ ಜತೆ ಅಥಣಿ ಶಾಸಕ ಮಹೇಶ ಕುಮಠಳ್ಳಿ, ಚಿಂಚೋಳಿ ಶಾಸಕ ಉಮೇಶ ಜಾಧವ ಕೂಡ ಇದ್ದರು. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಳಿಸುವ ಕಾರ್ಯತಂತ್ರದ ಭಾಗವಾಗಿ ಇವರೆಲ್ಲರೂ ಬಿಜೆಪಿ ಪಾಳಯದ ಜತೆ ಕಾಣಿಸಿಕೊಂಡಿದ್ದರು. ‘ಆಪರೇಷನ್ ಕಮಲ’ದ ಮೊದಲ ಸರಣಿಯಲ್ಲಿ ಇವರೆಲ್ಲರೂ ರಾಜೀನಾಮೆ ಕೊಡಲಿದ್ದಾರೆ ಎಂದೂ ಹೇಳಲಾಗಿತ್ತು.

ಇವರನ್ನು ಮಣಿಸಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವ ಅಸ್ತ್ರ ಬಳಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT