ಚನ್ನಮ್ಮ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಕಾಂಗ್ರೆಸ್ ಪ್ರತಿಭಟನೆ

7

ಚನ್ನಮ್ಮ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಕಾಂಗ್ರೆಸ್ ಪ್ರತಿಭಟನೆ

Published:
Updated:
Deccan Herald

ಹುಬ್ಬಳ್ಳಿ: ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮ ನಡೆಸಲು ಖಾಸಗಿ ಸಂಘಟನೆಯೊಂದಕ್ಕೆ ಅವಕಾಶ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಜನದಟ್ಟಣೆ ಹಾಗೂ ವಾಹನ ದಟ್ಟಣೆ ಇರುವ ವೃತ್ತದಲ್ಲಿ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಿದರೆ ಜನರಿಗೆ ತೊಂದರೆ ಆಗುತ್ತದೆ ಎಂಬ ಉದ್ದೇಶದಿಂದ ನಿಷೇಧ ಹೇರಿ ಪಾಲಿಕೆಯೇ ನಿರ್ಣಯ ಮಾಡಿದೆ. ಆದರೆ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲು ಅಲ್ಲಿ ಅವಕಾಶ ನೀಡಲಾಗಿದೆ. ಸಂಘಟಕರು ದೊಡ್ಡ ವೇದಿಕೆ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳವಳಿ ನೆನಪಿನ ಕಾರ್ಯಕ್ರಮ ಆಯೋಜಿಸಿದ್ದಾಗ ಚನ್ನಮ್ಮ ವೃತ್ತಕ್ಕೆ ಆಗಮಿಸಲು ಹಾಗೂ ಮಾಲಾರ್ಪಣೆ ಮಾಡಲು ಅವಕಾಶ ನೀಡಿರಲಿಲ್ಲ. ಆದರೆ ಈಗ ಇನ್ನೊಬ್ಬ ನೀಡಿರುವುದಕ್ಕೆ ನಮ್ಮ ಆಕ್ಷೇಪ ಇದೆ’ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿ ಹೇಳಿದರು.

‘ಈ ಕಾರ್ಯಕ್ರಮಕ್ಕೆ ಪಾಲಿಕೆ ಸಹ ₹2.20 ಲಕ್ಷ ಹಣ ನೀಡಿದೆ. ಆ ಮೊತ್ತವನ್ನು ಸಮುದಾಯದ ಬಡ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಸಿನಿಮಾ ನಟರಿಗೆ ನೀಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಸಮತಾ ಸೇನಾ ಸಂಘಟನೆಯ ಸದಸ್ಯರು ಸಹ ಅವಕಾಶ ನೀಡದಂತೆ ಪ್ರತಿಭಟಿಸಿದರು. ಈದ್ಗಾ ಮೈದಾನ ಪಕ್ಕದಲ್ಲಿಯೇ ಇರುವುದರಿಂದ ಬಹಳ ಸೂಕ್ಷ್ಮತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಅಂತಹ ಸ್ಥಳದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವುದು ಸರಿಯಲ್ಲ ಎಂದು ಸಮತಾ ಸೇನಾದ ಮುಖಂಡರಾದ ಪಿತಾಂಬ್ರಪ್ಪ ಬಳಾರ, ಗುರುನಾಥ ಉಳ್ಳಿಕಾಶಿ ಹೇಳಿದರು.

ಈಗಾಗಲೇ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಡ್ಡಿಪಡಿಸುವುದು ಬೇಡ, ಭವಿಷ್ಯದಲ್ಲಿ ಇಲ್ಲಿ ಅನುಮತಿ ನೀಡುವುದಿಲ್ಲ ಎಂದು ಪಾಲಿಕೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದರು. 10x10 ವೇದಿಕೆ ಮಾತ್ರ ನಿರ್ಮಾಣ ಮಾಡಬೇಕು ಎಂಬ ಷರತ್ತಿನೊಂದಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಯಿತು. ಅದಾಗಲೇ ಹಾಕಿದ್ದ ದೊಡ್ಡ ವೇದಿಕೆಯನ್ನು ತೆರವುಗೊಳಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !