ಗುರುವಾರ , ನವೆಂಬರ್ 21, 2019
24 °C
ಶಾಸಕ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಖಂಡನೆ

ವಾಹನ ಸಂಚಾರ ತಡೆದು ಪ್ರತಿಭಟನೆ

Published:
Updated:
Prajavani

ಬೆಂಗಳೂರು: ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಬಾಷ್ಯಂ ವೃತ್ತ ಹಾಗೂ ಶ್ರೀರಾಮ ಮಂದಿರ ನಡುವಿನ ರಸ್ತೆಯಲ್ಲಿ ಸೇರಿದ್ದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆಯಲ್ಲಿ ಕೆಲ ಸಮಯ ವಾಹನಗಳ ಸಂಚಾರ ತಡೆದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ದೇಶದ ಕಾನೂನಿಗಿಂತಲೂ ದ್ವೇಷದ ರಾಜಕಾರಣವೇ ಬಲಿಷ್ಠ: ಡಿಕೆಶಿ

ಪಾಲಿಕೆ ಸದಸ್ಯೆ ಜಿ. ಪದ್ಮಾವತಿ, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇ.ಡಿ, ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಜಕೀಯ ಸೇಡು ತೀರಿಸಿಕೊಳ್ಳಲು ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿದ್ದು, ಇದನ್ನು ನಾವು ಸಹಿಸುವುದಿಲ್ಲ’ ಎಂದರು.

‘ಕಾಂಗ್ರೆಸ್ ಶಕ್ತಿ ಕುಗ್ಗಿಸಲು ಬಿಜೆಪಿ ಈ ರೀತಿ ಮಾಡುತ್ತಿದೆ. ಇಂಥ ಬೆದರಿಕೆಗೆ ಕಾಂಗ್ರೆಸ್‌ನವರು ಹೆದರುವುದಿಲ್ಲ. ರಾಜ್ಯದಾದ್ಯಂತ ಬೂತ್‌ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ಇದನ್ನೂ ಓದಿ: ವಿಚಾರಣೆ ಪುನಾರಂಭಕ್ಕೆ ‘ಸುಪ್ರೀಂ’ ಪರಿಶೀಲನೆ

ಪ್ರತಿಕೃತಿ ವಶಕ್ಕೆ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ಸುಡಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದರು. ಸ್ಥಳದಲ್ಲಿದ್ದ ಪೊಲೀಸರು, ಪ್ರತಿಕೃತಿಯನ್ನು ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ತೆಗೆದುಕೊಂಡು ಹೋದರು.

ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಕ್ರಿಯಿಸಿ (+)